ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರಕ್ಕೆ ವೇಳಾಪಟ್ಟಿಯಂತೆ ನೀರು ಪೂರೈಸಿ: ಜಿಲ್ಲಾಧಿಕಾರಿ

ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published 5 ಏಪ್ರಿಲ್ 2024, 6:18 IST
Last Updated 5 ಏಪ್ರಿಲ್ 2024, 6:18 IST
ಅಕ್ಷರ ಗಾತ್ರ

ಕಲಬುರಗಿ: ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವೇಳಾಪಟ್ಟಿಯಂತೆ ಕುಡಿಯುವ ನೀರು ಪೂರೈಕೆಯಾಗಬೇಕು. ತಾಂತ್ರಿಕ ಕಾರಣದಿಂದ ನಲ್ಲಿ ಮೂಲಕ ನೀರು ಬಿಡುಗಡೆ ಮಾಡಲು ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಪಾಲಿಕೆ ಹೊಣೆಯಾಗಿದೆ’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ., ಎಲ್ ಅಂಡ್‌ ಟಿ ಕಂಪನಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು.

‘ಬೇಸಿಗೆ ಜೊತೆಗೆ ಹಬ್ಬ-ಹರಿದಿನಗಳ ಸಮಯ ಇದಾಗಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನೀರು ಪೂರೈಸದಿದ್ದರೆ ಸಾರ್ವಜನಿಕರಿಗೆ ಅನಾನುಕೂಲತೆ ಹೆಚ್ಚಾಗುತ್ತದೆ. ಅಧಿಕಾರಿಗಳು ಇದನ್ನರಿತು ಕೆಲಸ ಮಾಡಬೇಕು’ ಎಂದರು.

‘ನಗರದ ವಾರ್ಡ್ ಸಂಖ್ಯೆ 14, 15, 31, 32, 47, 48 ಸೇರಿದಂತೆ ಒಟ್ಟಾರೆ 11 ವಾರ್ಡ್‌ಗಳಲ್ಲಿ ವೇಳಾಪಟ್ಟಿ ಪ್ರಕಾರ ನೀರು ಪೂರೈಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ನೀರು ಬಿಡುಗಡೆ ಮಾಡುವ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ಮೊದಲೇ ತಿಳಿಸಬೇಕು. ಅದರಂತೆ ನೀರು ಪೂರೈಸಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಫೌಜಿಯಾ ತರನ್ನುಮ್‌ ನಿರ್ದೇಶನ ನೀಡಿದರು.

‘ಕುರಿಕೋಟಾ ಇನ್‍ಟೇಕ್‍ನಲ್ಲಿ ಸೋರಿಕೆಯ ಕಾರಣ ನಗರಕ್ಕೆ ಕಾಲಮಿತಿಯಲ್ಲಿ ನೀರು ಪೂರೈಕೆ ಮಾಡಲು ಆಗುತ್ತಿಲ್ಲ’ ಎಂದು ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಡಿ.ಸಿ., ‘ಕೂಡಲೆ ಶನಿವಾರದೊಳಗೆ ಲೀಕೇಜ್ ದುರಸ್ತಿ ಮಾಡಿಸಿ ವರದಿ ಕೊಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಉಪಆಯುಕ್ತ(ಅಭಿವೃದ್ಧಿ) ಆರ್.ಪಿ.ಜಾಧವ, ಕೆ.ಯು.ಐ.ಎಫ್.ಡಿ.ಸಿ. ಕಾರ್ಯನಿರ್ವಾಹಕ ಎಂಜಿನಿಯರ್‌ ಅಹ್ಮದ್ ಹುಸೇನ್, ಎಲ್ ಅಂಡ್‌ ಟಿ ಕಂಪನಿಯ ಟೀಮ್ ಲೀಡರ್ ಕುಮಾರೇಶ, ಸ್ನೇಕ್‌ ಕನ್ಸಲ್ಟೆನ್ಸಿಯ ರಂಗಧಾಮ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

‘ನೈರ್ಮಲ್ಯದ ನಿಗಾ ಅಗತ್ಯ’

‘ಬೆಂಗಳೂರಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವನೆಯಿಂದ ಕಾಲರಾ ಪ್ರಕರಣ ಬೆಳಕಿಗೆ ಬರುತ್ತಿದ್ದು ಇಲ್ಲಿ ಇದು ಮರುಕಳಿಸದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಶುದ್ಧೀಕರಣಗೊಂಡ ಕುಡಿಯುವ ನೀರು ಮಾತ್ರ ಪೂರೈಸಬೇಕು. ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ನೈರ್ಮಲ್ಯದ ಬಗ್ಗೆ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು. ನೀರು ಮಿತವಾಗಿ ಬಳಕೆಗೆ ಸಲಹೆ ಭೀಕರ ಬರಗಾಲ ಎದುರಾಗಿದೆ. ಎಲ್ಲೆಡೆ ನೀರಿನ ಸಮಸ್ಯೆ ಕಂಡುಬರುತ್ತಿದ್ದು ಸಾರ್ವಜನಿಕರು ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಅಗತಕ್ಕೆ ಅನುಗುಣವಾಗಿ ನೀರನ್ನು ಮಿತವಾಗಿ ಬಳಸಬೇಕು. ಜೀವನಕ್ಕೆ ಜೀವಜಲ ತುಂಬಾ ಅವಶ್ಯಕ. ಇದನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನೀರನ್ನು ಕಾಯಿಸಿ ಆರಿಸಿ ಕುಡಿಯಲು ಮನವಿ

ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಮೂರು ಜಲಮೂಲಗಳಲ್ಲಿ ಒಂದಾದ ಭೀಮಾ ನದಿಯಿಂದ ಕಲುಷಿತ ನೀರು ಬರುತ್ತಿದ್ದು ಕುಡಿಯುವ ನೀರನ್ನು ಶುದ್ಧೀಕರಿಸಿ ಸೂಪರ್ ಕ್ಲೋರಿನೇಷನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಅದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ ಆರಿಸಿ ಮತ್ತು ಸೋಸಿ ಕುಡಿಯಬೇಕು ಎಂದು ಕಲಬುರಗಿ ಕೆಯುಡಬ್ಲ್ಯುಎಸ್‌ಎಂಪಿ ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಎಂಜಿನಿಯರ್‌ ಮನವಿ ಮಾಡಿದ್ದಾರೆ. ನೀರು ಪೂರೈಕೆಯಲ್ಲಿ ವ್ಯತ್ಯಯ 67ರಂದು ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ ಕುರಿಕೋಟಾದಲ್ಲಿರುವ ಜಾಕ್‌ವೆಲ್ ಹತ್ತಿರ 600ಎಂ.ಎಂ. ವ್ಯಾಸದ ಎಂಎಸ್ ಪೈಪ್‌ಲೈನ್ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇದರ ದುರಸ್ತಿ ಕಾರ್ಯ ಕೈಗೊಂಡಿರುವ ಪ್ರಯುಕ್ತ ಏಪ್ರಿಲ್ 6 ಹಾಗೂ 7ರಂದು ಈ ಕೆಳಕಂಡ ಮೇಲ್ಮಟ/ಕೆಳಮಟ್ಟದ ಜಲಸಂಗ್ರಹಗಾರಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಕೆಯುಡಬ್ಲ್ಯುಎಸ್‌ಎಂಪಿ ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ. ಮೋಮಿನಪುರ ಮೇಲ್ಮಟ ಜಲಸಂಗ್ರಹಗಾರ ಸೂಪರ್ ಮಾರ್ಕೇಟ್ ಹಳೇ ಎಸ್.ಪಿ ಆಫೀಸ್ ಮೇಲ್ಮಟ ಜಲಸಂಗ್ರಾಹಗಾರ ಹಳೇ ಡಿ.ಸಿ ಆಫೀಸ್ ಮೇಲ್ಮಟ ಜಲಸಂಗ್ರಾಹಗಾರ ಪೊಲೀಸ್ ಕ್ವಾರ್ಟರ್ಸ್‌ ಮೇಲ್ಮಟ ಜಲಸಂಗ್ರಾಹಗಾರ ಐವಾನ್ ಶಾಹಿ ಮೇಲ್ಮಟ ಜಲಸಂಗ್ರಹಗಾರ ಸಾಯಿನಗರ ಮೇಲ್ಮಟ ಜಲಸಂಗ್ರಹಗಾರ ಪಶುಸಂಗೋಪನಾ ಆಸ್ಪತ್ರೆ ಮೇಲ್ಮಟ ಜಲಸಂಗ್ರಹಗಾರ ಹಾಗೂ ಜಿಮ್ಸ್ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆ ಶಹಾಬಜಾರ ಮೇಲ್ಮಟ ಜಲಸಂಗ್ರಹಗಾರ ಹಾಗೂ ಡೆಮೊ ಜೋನ್‌ಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT