ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಚಾರ ಸಾಮಗ್ರಿ ಮೇಲೆ ಮುದ್ರಕರ, ಪ್ರಕಾಶಕರ ವಿವರ ಕಡ್ಡಾಯ’

ಪ್ರಿಂಟಿಂಗ್ ಪ್ರೆಸ್ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಸಭೆ
Published 21 ಮಾರ್ಚ್ 2024, 16:26 IST
Last Updated 21 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಕಲಬುರಗಿ: ‘ಲೋಕಸಭೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಮುದ್ರಣವಾಗುವ ಪ್ರತಿ ಚುನಾವಣಾ ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಕರ ಮತ್ತು ಪ್ರಕಾಶರ ಹೆಸರು ಹಾಗೂ ವಿಳಾಸ ಕಡ್ಡಾಯವಾಗಿ ನಮೂದಿಸಬೇಕು’ ಎಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ಗುರುವಾರ ಜಿಲ್ಲೆಯ ಮುದ್ರಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ‘ಪ್ರಜಾ ಪ್ರತಿನಿಧಿ ಕಾಯ್ದೆ-1951ರ ನಿಯಮ 127ಎ ಪ್ರಕಾರ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಯಾವುದೇ ಬಗೆಯ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರು ಮತು ಪ್ರಕಾಶರ ವಿವರ ಮತ್ತು ಮುದ್ರಣ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ಮುದ್ರಕರು ಪಾಲಿಸುವ ಮೂಲಕ ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು’ ಎಂದರು.

‘ಜಿಲ್ಲೆಯ ಪ್ರತಿ ಮುದ್ರಕರು ತಮ್ಮ ಬಳಿಗೆ ಮುದ್ರಣಕ್ಕೆ ಬರುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಂದ ಪ್ರತಿ ಚುನಾವಣಾ ಸಾಮಗ್ರಿಗೆ ಪ್ರತ್ಯೇಕವಾಗಿ ನಿಗದಿತ ಮಾದರಿಯಲ್ಲಿ ದೃಢೀಕರಣ ಪಡೆಯಬೇಕು. ಈ ದೃಢೀಕರಣಕ್ಕೆ ಪ್ರಕಾಶಕರನ್ನು ಚೆನ್ನಾಗಿ ಬಲ್ಲ ಇಬ್ಬರು ಪ್ರತಿ ಸಹಿ ಮಾಡಬೇಕು. ಚುನಾವಣಾ ಪ್ರಚಾರ ಸಾಮ‌ಗ್ರಿ ಮುದ್ರಿಸಿದ ಮೂರು ದಿನದೊಳಗೆ ನಿಗದಿತ ಮಾದರಿಯಲ್ಲಿ ಮುದ್ರಕರು ಮುದ್ರಣ ಸಾಮಗ್ರಿ ವಿವರ, ಪ್ರತಿ, ವೆಚ್ಚ ಒಳಗೊಂಡಂತೆ ಮಾಹಿತಿ ಭರ್ತಿ ಮಾಡಿ ಅದರೊಂದಿಗೆ ಪ್ರಚಾರ ಸಾಮಗ್ರಿ ಮೂರು ಪ್ರತಿ ಹಾಗೂ ಪ್ರಕಾಶಕರು ನೀಡಿರುವ ನಿಗದಿತ ಮಾದರಿ ನಮೂನೆ ಲಗತ್ತಿಸಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಸಲ್ಲಿಸುವುದು ಕಡ್ಡಾಯ. ಚುನಾವಣಾ ಪ್ರಚಾರ ಸಾಮಗ್ರಿ ಹೊರತಾಗಿ ಇತರೆ ಮುದ್ರಣ ಕಾರ್ಯದ ಬಗ್ಗೆ ಯಾವುದೇ ಮಾಹಿತಿ ನೀಡಬೇಕಿಲ್ಲ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

‘ಜಾತಿ, ಧರ್ಮ, ಪಂಗಡ, ಭಾಷೆ, ಜನಾಂಗದ ಆಧಾರದ ಮೇಲೆ ಮತ ಕೇಳುವ, ಎದುರಾಳಿಯ ವೈಯಕ್ತಿಕ ಚಾರಿತ್ರ್ಯಹರಣ ಮಾಡುವ, ದೇಶದ ಏಕತೆಗೆ ಧಕ್ಕೆ ತರುವುದು ಸೇರಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುದ್ರಣ ಕಾರ್ಯ ಮಾಡಬೇಕು’ ಎಂದೂ ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿದರು. ಸಭೆಯಲ್ಲಿ ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ ಪಾಟೀಲ ಹಾಗೂ ಜಿಲ್ಲೆಯ ಮುದ್ರಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT