ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಪಾರು ಪ್ರಸ್ತಾವನೆ: ಬಿಜೆಪಿ ಮುಖಂಡ ಮಣಿಕಂಠಗೆ ನೋಟಿಸ್

Published 17 ಡಿಸೆಂಬರ್ 2023, 13:52 IST
Last Updated 17 ಡಿಸೆಂಬರ್ 2023, 13:52 IST
ಅಕ್ಷರ ಗಾತ್ರ

ಕಲಬುರಗಿ: ಸಾಮಾನ್ಯ ಜನರಿಗೆ ಶಾಂತಿ ಭಂಗ ಹಾಗೂ ಹಾನಿಯುಂಟು ಮಾಡುವ ಸಾಧ್ಯತೆಯ ಮುಂಜಾಗೃತೆಯ ದೃಷ್ಟಿಯಿಂದ ಗಡಿಪಾರು ಆದೇಶ ಹೊರಡಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ನಿರಾಕರಿಸುವ ಪೂರಕ ದಾಖಲೆಗಳನ್ನು ಸಲ್ಲಿಸಿ, ವಿಚಾರಣೆಗೆ ಹಾಜರಿ ಆಗುವಂತೆ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ಪೊಲೀಸ್ ಕಮಿಷನರೇಟ್‌ ನೋಟಿಸ್ ನೀಡಿದೆ.

ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಅವರು ಮಣಿಕಂಠಗೆ ನೋಟಿಸ್ ಹೊರಡಿಸಿದ್ದು, ಡಿಸೆಂಬರ್ 19ರ ಬೆಳಿಗ್ಗೆ 10.30ಕ್ಕೆ ನಗರದ ಉಪ ಪೊಲೀಸ್ ಆಯುಕ್ತರ(ಕಾನೂನು ಮತ್ತು ಸುವ್ಯವಸ್ಥೆ) ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಕೂಟ ರಚಿಸುವುದು, ಮಾರಕ ಆಯುಧ ಹೊಂದಿ ದೊಂಬಿ, ಕೊಲೆಗೆ ಯತ್ನ, ಅಕ್ರಮ ಪ್ರತಿಬಂಧಕ, ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡೆತಡೆ, ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡುವ ಹೇಳಿಕೆಗಳು ನೀಡುವುದು, ಸಾರ್ವಜನಿಕರೊಂದಿಗೆ ಜಗಳ ತರುವುದು, ಅಕ್ರಮ ಅಕ್ಕಿ ಸಂಗ್ರಹಣೆ ಮತ್ತು ಮಾರಾಟ ಮಾಡುವುದು, ಹಲ್ಲೆ, ಪ್ರಾಣ ಹಾನಿ, ಸಮಾಜ ವಿದ್ರೋಹ ಚಟುವಟಿಕೆಗಳಲ್ಲಿ ತೊಡಗಿ ಸಾರ್ವಜನಿಕರ ಆಸ್ತಿ–ಪಾಸ್ತಿಗೆ ನಷ್ಟವುಂಟು ಮಾಡುವುದು. ಸಾಮಾನ್ಯ ಜನರಿಗೆ ಶಾಂತಿ ಭಂಗ ಹಾಗೂ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮುಂಜಾಗೃತಾ ದೃಷ್ಟಿಯಿಂದ ಮಣಿಕಂಠನನ್ನು ಕಲಬುರಗಿ ನಗರದಿಂದ ಗಡಿಪಾರು ಮಾಡಲು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55 ಅನ್ವಯ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಗಡಿಪಾರು ಆದೇಶ ಹೊರಡಿಸುವ ಪೂರ್ವವಾಗಿ ನಿಮ್ಮ ಅಭಿಪ್ರಾಯ ಹಾಗೂ ದಾಖಲೆಗಳನ್ನು ಸಲ್ಲಿಸಲು ವಿಚಾರಣೆ ನಿಗದಿಪಡಿಸಲಾಗಿದೆ. ಉಪ ಪೊಲೀಸ್ ಆಯುಕ್ತರ ನ್ಯಾಯಾಲಯದಲ್ಲಿ ವೈಯಕ್ತಿಕ ಅಥವಾ ವಕೀಲರ ಮೂಲಕ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ನಿರಾಕರಿಸುವ ಪೂರಕ ದಾಖಲೆಗಳು ಇದ್ದರೆ ಅವುಗಳ ಜತೆಗೆ ತಪ್ಪದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಗಡಿಪಾರು ಆದೇಶಕ್ಕೆ ಈ ಹಿಂದೆ ತಡೆಯಾಜ್ಞೆ: ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಅಕ್ರಮ ಪಡಿತರ ಸಾಗಣೆ ಹಾಗೂ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸೇರಿ ಹಲವು ಪ್ರಕರಣಗಳ ಆರೋಪದಡಿ ಈ ಹಿಂದೆಯೂ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ಈ ಹಿಂದೆ ಮಣಿಕಂಠನನ್ನು ಕಲಬುರಗಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಒಂದು ವರ್ಷ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT