ಮಂಗಳವಾರ, ಜನವರಿ 31, 2023
27 °C
ಮಡಿಯಾಳ ತಾಂಡಾದಲ್ಲಿ ವಿವೇಕ ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

41 ಕ್ಷೇತ್ರಗಳಿಗೆ ತಲಾ 50 ವಿವೇಕ ಶಾಲಾ ಕೊಠಡಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ವಿವೇಕ’ ಹೆಸರಿನಲ್ಲಿ ರಾಜ್ಯದಾದ್ಯಂತ 7,601 ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಸುಮಾರು 50 ಕೊಠಡಿಗಳು ಮಂಜೂರಾಗಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಯಾಳ ತಾಂಡಾದಲ್ಲಿ ಸೋಮವಾರ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ನಮ್ಮ ಸಂಕಲ್ಪವಾಗಿತ್ತು. ಅದಕ್ಕಾಗಿ, ನೂತನ ಕೊಠಡಿಗಳ ನಿರ್ಮಾಣವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಎರಡು ವರ್ಷದ ಪ್ರತಿ ವರ್ಷ 8 ಸಾವಿರ ಕೊಠಡಿ ನಿರ್ಮಾಣವಾದರೆ ಮಕ್ಕಳಿಗೂ ಕೊಠಡಿಗಳಲ್ಲಿ ಕೂರಲು ಜಾಗ ಸಿಗುತ್ತದೆ’ ಎಂದರು.

‘ಒಂದು ದಿನ ಜನತಾ ದರ್ಶನದ ಸಂದರ್ಭದಲ್ಲಿ ದಂಪತಿ ತಮ್ಮ ಪುತ್ರಿಯು ಶಾಲೆಯಲ್ಲಿ ಶೌಚಾಲಯವಿರದ ಕಾರಣ ಮೂತ್ರಕ್ಕೆ ಹೋಗುತ್ತಿಲ್ಲ. ಜಲಬಾಧೆ ತೀರಿಸಿಕೊಳ್ಳಲು ಇಡೀ ದಿನ ಅವಕಾಶವಿರದ ಕಾರಣ ಮೂತ್ರಿಪಿಂಡಕ್ಕೆ ಹಾನಿ ಆಗುತ್ತಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವಂತೆ ಅವರು ಕೋರಿದ ದಿನದಿಂದ ಸಂಕಲ್ಪ ಮಾಡಿ ಬರುವ ಆಗಸ್ಟ್ 15ರೊಳಗೆ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ್ದೇನೆ’ ಎಂದರು.

‘ರೈತರು, ಕೂಲಿ ಕಾರ್ಮಿಕರು ಹಾಗೂ ದಲಿತರ ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆಗಳಿಗಾಗಿ ₹ 30 ಸಾವಿರ ಕೋಟಿ ಮೀಸಲಿಡಲಾಗಿದೆ. ಸರ್ವಶಿಕ್ಷಣ ಅಭಿಯಾನ ಹೆಸರಿನಲ್ಲಿ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 10 ವರ್ಷ ಸಾವಿರಾರು ಕೋಟಿ ಅನುದಾನ ನೀಡಿದ್ದರು’ ಎಂದರು.

4 ಸಾವಿರ ಹೊಸ ಅಂಗನವಾಡಿ: ‘ಹೊಸದಾಗಿ 4 ಸಾವಿರ ಅಂಗನವಾಡಿಗಳನ್ನು ಆರಂಭಿಸಲು ಆದೇಶ ಹೊರಡಿಸಲಾಗಿದ್ದು, ಪ್ರತಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ₹ 15 ಲಕ್ಷ ವೆಚ್ಚ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 1,500 ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಲಿವೆ’ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ‘ಶಿಕ್ಷಕರ ಕೊರತೆ ನೀಗಿಸಲು ಮುಖ್ಯಮಂತ್ರಿಯವರು 15 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೊ, ಬೇಟಿ ಪಡಾವೊ ಘೋಷಣೆಗೆ ಅನುಗುಣವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ಸಿಗುತ್ತಿದೆ’ ಎಂದರು.

ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಅಕ್ಕರೆಯಿದ್ದು, ಎರಡು ತಿಂಗಳಲ್ಲಿ ಸುಮಾರು ಆರೇಳು ಬಾರಿ ಬಂದಿದ್ದಾರೆ. ರಾಜ್ಯದಾದ್ಯಂತ 40 ಸಾವಿರ ತಾಂಡಾಗಳ ಜನರಿಗೆ ಹಕ್ಕುಪತ್ರಗಳನ್ನು ನೀಡಲಿದ್ದು, ಯಾದಗಿರಿಯಲ್ಲಿ ಬೃಹತ್ ಕಾರ್ಯಕ್ರಮ ಸಂಘಟಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಡಿ. ಬದೋಲೆ ಸ್ವಾಗತಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತೆ ಗರಿಮಾ ಪನ್ವಾರ್ ವಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮಡು, ಸುಭಾಷ್ ಗುತ್ತೇದಾರ, ಡಾ. ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯರಾದ ಬಾಬುರಾವ್ ಚಿಂಚನಸೂರ, ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು