ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಭೇಟಿ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಅದುವೇ ನನಗೆ ಗೌರವ ಎಂದು ಹೇಳಿದ್ದ ಸಂವಿಧಾನ ಶಿಲ್ಪಿ
Published 28 ಏಪ್ರಿಲ್ 2024, 4:36 IST
Last Updated 28 ಏಪ್ರಿಲ್ 2024, 4:36 IST
ಅಕ್ಷರ ಗಾತ್ರ

ಕಲಬುರಗಿ: ಡಾ.ಅಂಬೇಡ್ಕರ್‌ ಅವರು ವಾಡಿ ಪಟ್ಟಣಕ್ಕೆ ಭೇಟಿ ನೀಡಿ 80 ವರ್ಷಗಳು ಕಳೆದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಂಚೆ ವೃತ್ತದಿಂದ ಡಾ.ಅಂಬೇಡ್ಕರ್‌ ಅವರು ಭೇಟಿ ನೀಡಿದ ಸ್ಮರಣಾರ್ಥವಾಗಿ ರೂಪಿಸಲಾದ ವಿಶೇಷ ಅಂಚೆ ಲಕೋಟೆಯನ್ನು ಶನಿವಾರ ಕರ್ನಾಟಕ ವೃತ್ತ ಅಂಚೆ ಪ್ರಧಾನ ವ್ಯವಸ್ಥಾಪಕ ಎಸ್‌.ರಾಜೇಂದ್ರ ಬಿಡುಗಡೆಗೊಳಿಸಿದರು.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಅಧೀಕ್ಷಕರ ಕಾರ್ಯಾಲಯ, ಕಲಬುರಗಿ ವಿಭಾಗ ಹಾಗೂ ಅಖಿಲ ಭಾರತ ಪ.ಜಾ. ಹಾಗೂ ಪಂಗಡದ ಅಂಚೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಲಬುರಗಿ ಹಾಗೂ ಯಾದಗಿರಿ ವಿಭಾಗಗಳ ಸಹಯೋಗದಲ್ಲಿ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಶಿಕ್ಷಣವು ಯಾರೊಬ್ಬರ ಸ್ವತ್ತಲ್ಲ. ಅದು ಎಲ್ಲರದ್ದು. ಶಿಕ್ಷಣ ಪಡೆದುಕೊಳ್ಳುವುದಕ್ಕೆ ಅಡ್ಡಿಪಡಿಸು ವಂತಿಲ್ಲ. ಡಾ. ಅಂಬೇಡ್ಕರ್‌ ಅವರು ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಅದನ್ನು ಸ್ಮರಣೀಯವಾಗಿಸಲು ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸ ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ವಿಶೇಷ ಅಂಚೆ ಲಕೋಟೆಗಳನ್ನು ಹೊರತರುವ ಉದ್ದೇಶವಿದೆ’ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಪ್ರಾದೇಶಿಕ ಅಂಚೆ ನಿರ್ದೇಶಕಿ ವಿ.ತಾರಾ ಮಾತನಾಡಿ, ‘ಡಾ.ಅಂಬೇಡ್ಕರ್‌ ಅವರದ್ದು ಬಹುತ್ವದ ವ್ಯಕ್ತಿತ್ವ. ಅವರು ಜಾತಿ ಕಟ್ಟಳೆಗಳನ್ನು ಮೀರಿ ಬೆಳೆದವರು. ಜೀವನ ಪೂರ್ತಿ ತಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮಾಡಿದವರು. ಹೀಗಾಗಿ ಎಲ್ಲರೂ ಅವರ ಜೀವನ ಮೌಲ್ಯಗಳು ಹಾಗೂ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಆಂಧ್ರ ಪ್ರದೇಶ ವಿಜಯವಾಡ ವೃತ್ತದ ಪ್ರಾದೇಶಿಕ ಅಂಚೆ ನಿರ್ದೇಶಕ ಸಂದೇಶ ಮಹಾದೇವಪ್ಪ ಮಾತನಾಡಿ, ‘ಕರ್ನಾಟಕದಲ್ಲಿ ಸಮತಾ ಸಮಾಜ ನಿರ್ಮಾಣಕ್ಕಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಜೋತಿಬಾ ಫುಲೆಯಂತೆ ಕರ್ನಾಟಕದಲ್ಲಿ ಮಂಗಳೂರಿನ ರಂಗರಾವ, ತಲಕಾಡಿನ ಚಿಕ್ಕರಂಗೇಗೌಡರು, ತಳಸಮುದಾಯ ದವರ ಶಿಕ್ಷಣಕ್ಕಾಗಿ ದುಡಿದವರು. ಅವರ ಕಾರ್ಯಗಳನ್ನು ಗುರುತಿಸಿ, ಅಂಚೆ ಲಕೋಟೆಗಳನ್ನು ಹೊರ ತಂದಿರುವುದು ಶ್ಲಾಘನೀಯ’ ಎಂದರು.

ಕಲಬುರಗಿ ವಿಭಾಗ ಅಂಚೆ ಅಧೀಕ್ಷಕ ವಿ.ವೀರಭದ್ರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರು ಪ್ರಾದೇಶಿಕ ಅಂಚೆ ಸಹಾಯಕ ವ್ಯವಸ್ಥಾಪಕ ಎ.ಕೊರಗಪ್ಪ ನಾಯಕ, ಎಸ್‌ಸಿ–ಎಸ್‌ಟಿ ಅಂಚೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಲಬುರಗಿ–ಯಾದಗಿರಿ ವಿಭಾಗದ ಕಾರ್ಯಾಧ್ಯಕ್ಷ ಕುಪೇಂದ್ರ ಎಸ್‌.ವಠಾರ ಮಾತನಾಡಿದರು.

ಮಂಜುನಾಥ ಹುಬ್ಬಳ್ಳಿ, ಶೇಖರಬಾಬು, ವಿ.ಶ್ರೀನಿವಾಸ, ವಿವಿಧ ವಿಭಾಗಗಳ ಸಿಬ್ಬಂದಿ, ಅಂಚೆ ವಿತರಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭೀಮರಾಯ ಹೇಮನೂರ ನಿರೂಪಿಸಿದರು. ಚಂಚಲಾ ಕುಲಕರ್ಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಕಲಶೆಟ್ಟಿ ಸ್ವಾಗತಿಸಿದರು. ವಿವೇಕ ಲಕ್ರಾ ವಂದಿಸಿದರು.

ಅಂಚೆ ಲಕೋಟೆ

ವಿಶೇಷ ಲಕೋಟೆಯು ಡಾ.ಅಂಬೇಡ್ಕರ್‌ ಅವರು 1944ರಲ್ಲಿ ವಾಡಿ ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸುತ್ತದೆ. ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಪರಿಶಿಷ್ಟ ಜಾತಿಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಬಂದು ವಾಡಿ ರೈಲು ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಅವರನ್ನು ಸ್ವಾಗತಿಸಲು ಬಂದಿದ್ದ ಜನರನ್ನು ಉದ್ದೇಶಿಸಿ ಅಂಬೇಡ್ಕರ್‌ ಅವರು ‘ತಳ ಸಮುದಾಯದ ಜನರನ್ನು ಶಿಕ್ಷಣದಿಂದ ದೂರವಿಡಲಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಅದೇ ನೀವು ನನಗೆ ನೀಡುವ ಗೌರವ’ ಎಂದು ಹೇಳಿರುವುದನ್ನು ಲಕೋಟೆಯ ಮೇಲೆ ಬರೆಯಲಾಗಿದೆ. ಜತೆಗೆ ಸಮುದಾಯದೊಂದಿಗೆ ತೆಗೆದುಕೊಂಡಿರುವ ಭಾವಚಿತ್ರವನ್ನು ಲಕೋಟೆಯ ಮೇಲೆ ಮುದ್ರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT