ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆ ಇಲ್ಲ, ಏನೂ ಇಲ್ಲ: ಸಚಿವ ಈಶ್ವರ ಖಂಡ್ರೆ

Published 25 ಮಾರ್ಚ್ 2024, 5:32 IST
Last Updated 25 ಮಾರ್ಚ್ 2024, 5:32 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಭ್ರಮೆಯಲ್ಲಿರುವ ಬಿಜೆಪಿಯ ನಾಯಕರು ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಮೋದಿಯ ಅಲೆ ಇಲ್ಲ ಏನೂ ಇಲ್ಲ, ಎಲ್ಲವೂ ಬೊಗಳೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಮತ್ತೆ ಗೆಲ್ಲುವ ಭ್ರಮೆಯಲ್ಲಿದ್ದಾರೆ’ ಎಂದು ಸಚಿವ ಈಶ್ವರ ಖಂಡ್ರೆ ಟೀಕಿಸಿದರು.

ಇಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಬೇಸತ್ತಿರುವ ಜನರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಿಕೊಡಲಿದ್ದಾರೆ. ಐದು ಗ್ಯಾರಂಟಿ ಯೋಜನೆಗಳನ್ನು ಜನರು ಮೆಚ್ಚಿದ್ದು, ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂಬ ಭಾವನೆ ಗಟ್ಟಿಗೊಳಿಸಿದ್ದಾರೆ. ಹೀಗಾಗಿ, ಅತಿ ಹೆಚ್ಚು ಸ್ಥಾನ ಪಡೆಯಲಿದ್ದೇವೆ’ ಎಂದರು.

‘ಮೋದಿ ಅವರ ಸರ್ಕಾರ ಪ್ರತಿಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಸೋಲಿನ ಭೀತಿಯಿಂದಾಗಿ ಪ್ರತಿಪಕ್ಷಗಳ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿ, ವಿನಾಕಾರಣ ಗದಾಪ್ರಹಾರ ಮಾಡುತ್ತಿದೆ. ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತಿದೆ. ನಮ್ಮ ಹಕ್ಕು ಪಡೆಯಲು ನ್ಯಾಯಾಲಯದ ಮೊರೆ ಹೋಗಲಾಗಿದೆ. ಜನರು ಜಾಗೃತಗೊಂಡಿದ್ದು, ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವರು’ ಎಂದರು.

ಇದೇ ವೇಳೆ ಸಚಿವ ಖಂಡ್ರೆ ಅವರು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರ ನಿವಾಸಕ್ಕೆ ತೆರಳಿದರು. ಆಳಂದ ವಿಧಾನಸಭಾ ಕ್ಷೇತ್ರ ಬೀದರ್ ಲೋಕಸಭಾ ವ್ಯಾಪ್ತಿಗೆ ಸೇರಿದ್ದು, ತಮ್ಮ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲುವಿನ ಕುರಿತು ಚರ್ಚಿಸಿ ಸಹಕಾರ ಕೋರಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT