ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಶಾಸಕರ ಮಾಜಿ ಆಪ್ತ ಸಹಾಯಕನಿಂದ ಕೋಟಿಗೂ ಅಧಿಕ ವಂಚನೆ: ಆರೋಪ

Published 23 ಮೇ 2024, 15:48 IST
Last Updated 23 ಮೇ 2024, 15:48 IST
ಅಕ್ಷರ ಗಾತ್ರ

ಕಲಬುರಗಿ: ‘ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಅಜಯಸಿಂಗ್‌ ಅವರ ಮಾಜಿ ಆಪ್ತ ಸಹಾಯಕ ಪರಶುರಾಮ ನೆಲೋಗಿ ಅವರು ಕಾಮಗಾರಿ ಗುತ್ತಿಗೆ, ಪ್ರಥಮ ದರ್ಜೆ ಸಹಾಯಕ ಹುದ್ದೆ, ಅಂಗನವಾಡಿ ಕಾರ್ಯಕರ್ತೆ ನೇಮಕ, ಕೋರ್ಟ್‌ನಲ್ಲಿ ಜವಾನ ಹುದ್ದೆ ಕೊಡಿಸುವುದಾಗಿ ಹಲವಾರು ಜನರಿಂದ ಸುಮಾರು ₹1 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗುತ್ತಿಗೆದಾರ ರಾಜಾರಾಮಪ್ಪ ನಾಯಕ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಕೆಆರ್‌ಡಿಬಿ ಹಾಗೂ ಶಾಸಕರ ಕಡೆಯಿಂದ ಗುತ್ತಿಗೆ ಕೆಲಸ ಕೊಡಿಸುವುದಾಗಿ ನನ್ನ ಕಡೆಯಿಂದ ₹40 ಲಕ್ಷ ಹಣ ಪಡೆದುಕೊಂಡಿದ್ದಾರೆ. ಬೀದರ್‌ ಮೂಲದ ಕಿರಣಕುಮಾರ್ ಎಂಬ ವ್ಯಕ್ತಿಗೆ ಕೆಕೆಆರ್‌ಡಿಬಿಯಲ್ಲಿ ಕೆಲಸ ಕೊಡಿಸುವುದಾಗಿ ₹14.98 ಲಕ್ಷ ಹಣ ಪಡೆದಿದ್ದಾರೆ. ಮಹಿಳೆಯೊಬ್ಬರಿಂದ ₹2 ಲಕ್ಷ ಹಣ ಪಡೆದು ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ’ ಎಂದು ಆಪಾದಿಸಿದರು.

‘ಕೋರ್ಟ್‌ನಲ್ಲಿ ಕೆಲಸ ಕೊಡಿಸುವುದಾಗಿ ₹8 ಲಕ್ಷ ಹಣ ಪಡೆದುಕೊಂಡಿದ್ದಾರೆ. ಹಣ ಮರಳಿ ನೀಡಲು ಒತ್ತಡ ಹಾಕಿದಾಗ ಖಾಲಿ ಚೆಕ್‌ಗಳನ್ನು ನೀಡಲಾಗಿದೆ. ಕೆಲವರಿಗೆ ವೈಯಕ್ತಿಕ ಸಮಸ್ಯೆಯಿಂದ ಹಣ ಪಡೆಯಲಾಗಿದೆ ಎಂದು ಕೋರ್ಟ್‌ ನೋಟರಿ ಮಾಡಿ ಪತ್ರಗಳನ್ನು ನೀಡಿದ್ದಾರೆ. ಚೆಕ್‌ ನೀಡಿದ ಬ್ಯಾಂಕ್‌ ಖಾತೆ ಸಂಖ್ಯೆ ಬಂದ್‌ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಶಾಸಕರು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ನಾವು ನೀಡಿದ ಹಣವನ್ನು ಮರಳಿಕೊಡುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

‌ಪತ್ರಿಕಾಗೋಷ್ಠಿಯಲ್ಲಿ ಬಸುಗೌಡ ಪಾಟೀಲ, ಮಾನಯ್ಯ ಗುತ್ತೇದಾರ, ಶಿವಾನಂದ ಮ್ಯಾಗೇರಿ, ಶಿವಾನಂದ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT