ಭಾನುವಾರ, ನವೆಂಬರ್ 17, 2019
28 °C
ಅಂಗೀಕಾರ ಆಂದೋಲನ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ

ಕಲಬುರ್ಗಿ ನಗರದಲ್ಲಿ ಅರಣ್ಯೀಕರಣ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

Published:
Updated:
Prajavani

ಕಲಬುರ್ಗಿ: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಯುತ್ತಿರುವ 100 ದಿನಗಳ ಅಂಗೀಕಾರ ಆಂದೋಲನದ ಅಂಗವಾಗಿ ಸಂಪನ್ಮೂಲಗಳ ಸಂರಕ್ಷಣೆ ನಿಟ್ಟಿನಲ್ಲಿ ನಗರ–ಪಟ್ಟಣ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಸೂಚನೆ ನೀಡಿದರು.

ನ‌ಗರದಲ್ಲಿ ಗುರುವಾರ ಆಂದೋಲನದ ಜಿಲ್ಲಾ ಮಟ್ಟದ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ ಬಲ್ಬ್‌ಗಳನ್ನು ಉಪಯೋಗಿಸಬೇಕು. ಮಳೆ ನೀರು ಸಂಗ್ರಹ ಮತ್ತು ಸೌರ ಶಕ್ತಿ ಬಳಕೆಗೆ ಜನರಲ್ಲಿ ಅರಿವು ಮೂಡಿಸಬೇಕು. ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ತಿಳಿಹೇಳುವುದು. ಜಲ ಮತ್ತು ಪರಿಸರ ಸಂರಕ್ಷಣೆ, ಘನತ್ಯಾಜ್ಯ ನಿರ್ವಹಣೆ, ಸಾಮರಸ್ಯದ ಸಹಬಾಳ್ವೆ ನಡೆಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಆಂದೋಲನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಂಗೀಕಾರ ಆಂದೋಲನವು ಅಕ್ಟೋಬರ್ 2ನೇ ವಾರದಿಂದಲೇ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಕಸ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತ, ಸ್ವಚ್ಛ ಮತ್ತು ಹಸಿರು ಪರಿಸರ, ಉತ್ತಮ ಆರೋಗ್ಯದೊಂದಿಗೆ ಸಾರ್ವಜನಿಕರ ದೈನಂದಿನ ಜೀವನ ವರ್ತನೆಯಲ್ಲಿ ಬದಲಾವಣೆ ತರುವ ಮಹತ್ವಕಾಂಕ್ಷೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಂಡಿರುವ ಮತ್ತು ಪ್ರಗತಿ ಹಂತದಲ್ಲಿರುವ ಫಲಾನುಭವಿಗಳ ಬಳಿಗೆ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಮತ್ತು ಪೌರ ಸಂಸ್ಥೆಯ ಸಿಬ್ಬಂದಿ ತೆರಳಿ ಅಂಗೀಕಾರ ಮೊಬೈಲ್ ಆ್ಯಪ್ ಮೂಲಕ ಅಗತ್ಯ ಮಾಹಿತಿ ಸಂಗ್ರಹಣೆದೊಂದಿಗೆ ಅವರ ಬೇಕು–ಬೇಡಗಳ ಕುರಿತು ನಿಖರ ಮೌಲ್ಯಮಾಪನ ಮಾಡಲು ಈ ಆಂದೋಲನಕ್ಕೆ ಕೇಂದ್ರ ಸರ್ಕಾರವು ಆಗಸ್ಟ್ 29ರಂದು ಚಾಲನೆ ನೀಡಿದೆ. ಅಕ್ಟೋಬರ್ 2ರಿಂದ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ ಮಾತನಾಡಿ, ‘ಜಿಲ್ಲೆಯಲ್ಲಿ ಅಂಗೀಕಾರ್ ಆಂದೋಲನದಲ್ಲಿ ಒಟ್ಟು 4,048 ಫಲಾನುಭವಿಗಳ ಬಳಿ ತೆರಳಿ ಮಾಹಿತಿ ಸಂಗ್ರಹಣೆ ಮತ್ತು ಅರಿವು ಮೂಡಿಸುವ ಗುರಿ ಹೊಂದಿದ್ದು, ಇದುವರೆಗೆ 2,484 ಫಲಾನುಭವಿಗಳ ಬಳಿಗೆ ಹೋಗಿ ಅರಿವು ಮೂಡಿಸಿ ಶೇ 61.36 ರಷ್ಟು ಸರ್ವೆ ಕಾರ್ಯ ಮುಗಿಸಲಾಗಿದೆ’ ಎಂದ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಾಕಿ ಉಳಿದ 1564 ಫಲಾನುಭವಿಗಳ ಮನೆಗಳಿಗೆ 15 ದಿನದೊಳಗಾಗಿ ಭೇಟಿ ಕೊಟ್ಟು ನಿಗದಿತ ಗುರಿಯಂತೆ ಪ್ರಗತಿ ಸಾಧಿಸಲು ಸೂಚಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯಪಾಲಕ ಎಂಜಿನಿಯರರು ಇದ್ದರು.

ಪ್ರತಿಕ್ರಿಯಿಸಿ (+)