ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜನಿ ನೀರು ಪಡೆಯಲು ಸರ್ಕಾರ ಮುಂದಾಗಲಿ: ಶಿವಕುಮಾರ ಎಂ. ನಾಟೀಕಾರ

ಮಹಾರಾಷ್ಟ್ರ ಭೀಮಾ ನದಿಗೆ ನೀರು ಬಿಡದಿದ್ದರೆ ಕಾನೂನು ಹೋರಾಟ ಮಾಡಲು ಆಗ್ರಹ
Published 13 ಏಪ್ರಿಲ್ 2024, 7:50 IST
Last Updated 13 ಏಪ್ರಿಲ್ 2024, 7:50 IST
ಅಕ್ಷರ ಗಾತ್ರ

ಕಲಬುರಗಿ: ‘ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುವ ವಿಚಾರವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಎಂ. ನಾಟೀಕಾರ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1976ರಲ್ಲಿ ಬಚಾವತ್‌ ಆಯೋಗವು ನೀಡಿದ ತೀರ್ಪಿನಂತೆ ಮಹಾರಾಷ್ಟ್ರ 95 ಟಿಎಂಸಿ ಅಡಿ ಮತ್ತು ಕರ್ನಾಟಕ 15 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಬೇಕು. ಆದರೆ, ಮಹಾರಾಷ್ಟ್ರವು ಕೇಂದ್ರ ಜಲಸಂಪನ್ಮೂಲ ಮಂಡಳಿಯ ಅನುಮತಿಯನ್ನೂ ಪಡೆಯದೇ 25 ಕಿ.ಮೀ ಸುರಂಗ ಮಾರ್ಗ ಕೊರೆದು 13.5 ಟಿಎಂಸಿ ನೀರನ್ನು ಸೀನಾ ನದಿಗೆ ಬಿಟ್ಟುಕೊಳ್ಳುತ್ತಿದೆ. ಇದರ ಜೊತೆಗೆ ಅಕ್ರಮವಾಗಿ ಹಲವಾರು ಬ್ಯಾರೇಜ್‌ ಮತ್ತು ನೀರಾವರಿ ಯೋಜನೆಗಳನ್ನು ಮಾಡಿಕೊಂಡು ನಿಗದಿಗಿಂತ ಹೆಚ್ಚಿನ ನೀರನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋ‍‍ಪಿಸಿದರು.

‘ಉಜನಿ ಜಲಾಶಯದಲ್ಲಿ ನೀರಿಲ್ಲ ಎನ್ನುವುದನ್ನು ರಾಜ್ಯ ಒಪ್ಪಬಾರದು. ಅದರ ಲೈವ್ ಸ್ಟೋರೇಜ್‍ ಸಾಮರ್ಥ್ಯ 56.7 ಟಿಎಂಸಿ ಇದ್ದರೆ, 60.5 ಟಿಎಂಸಿ ನೀರು ಡೆಡ್‌ಸ್ಟೋರೇಜ್‌ನಲ್ಲಿದೆ! ಜಗತ್ತಿನ ಯಾವ ಅಣೆಕಟ್ಟೆಯಲ್ಲಿಯೂ 60.5 ಟಿಎಂಸಿ ನೀರು ಡೆಡ್ ಸ್ಟೋರೇಜ್‍ನಲ್ಲಿ ಇಲ್ಲ. ಲೈವ್‌ ಸ್ಟೋರೇಜ್‌ನಲ್ಲಿ ಪ್ರಸ್ತುತ 10–12 ಟಿಎಂಸಿ ಇದೆ. ಹಾಗಾಗಿ, ಕರ್ನಾಟಕದ ನೀರಾವರಿ ಅಧಿಕಾರಿಗಳ ತಂಡವನ್ನು ಉಜನಿಗೆ ಕಳುಹಿಸಿ ಅಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಬಳಕೆಯನ್ನು ತಿಳಿದುಕೊಳ್ಳಬೇಕು. ನಮ್ಮ ಪಾಲಿನ ನೀರು ಬಿಡಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಒಪ್ಪದಿದ್ದರೆ ಕೇಂದ್ರ ಜಲಮಂಡಳಿ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡಬೇಕು’ ಎಂದು ಒತ್ತಾಯಿಸಿದರು.

‘ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ 13 ದಿನ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದರಿಂದ ನಾರಾಯಣಪುರ ಜಲಾಶಯದಿಂದ ಭೀಮಾನದಿಗೆ 1 ಟಿಎಂಸಿ ನೀರು ಬಿಡಲಾಗಿದೆ. ಅದರಲ್ಲಿ ಕೇವಲ 0.4 ಟಿಎಂಸಿ ಮಾತ್ರ ಬಂದಿದ್ದು, ಶೇ 60ರಷ್ಟು ನೀರು ಹರಿದು ಬರುವಾಗ ವ್ಯರ್ಥವಾಗಿದೆ. ಬಂದ ನೀರು ಅಫಜಲಪುರ ಪಟ್ಟಣಕ್ಕೆ ಕೇವಲ ಒಂದು ತಿಂಗಳು ಕುಡಿಯಲು ಕೊಡಬಹುದು. ಸೊನ್ನ ಅಣೆಕಟ್ಟೆಯಿಂದ ದೇವಲಗಾಣಗಾಪುರ ಬ್ಯಾರೇಜ್‌ವರೆಗೆ ನದಿ ಬತ್ತಿದ್ದರಿಂದ ಈ ಭಾಗದ ಜನರಿಗೆ ಕುಡಿಯಲು ಸಹ ನೀರಿಲ್ಲ’ ಎಂದರು.

ಪ್ರಮುಖರಾದ ಮಲ್ಲಿಕಾರ್ಜುನ ಗೌರ, ಜಮೀಲ ಗೌಂಡಿ, ಮರೆಪ್ಪ ಜಮಾದಾರ ಹಾಜರಿದ್ದರು.

ಕಲಬುರಗಿ ಜಿಲ್ಲೆಯ ಪಟ್ಟಣಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಆಲಮಟ್ಟಿ ಜಲಾಶಯದಿಂದ 150 ಕಿ.ಮೀ ಪೈಪ್‌ಲೈನ್‌ ಮುಖಾಂತರ ನೀರು ಕೊಡುವ ಯೋಜನೆಯನ್ನು ರೂಪಿಸಬೇಕು
ಶಿವಕುಮಾರ ನಾಟೀಕಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ
‘ಪ್ರಿಯಾಂಕ್‌ ಜವಾಬ್ದಾರಿ ಅರಿತು ಮಾತಾಡಲಿ’
‘ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮಹಾರಾಷ್ಟ್ರದಿಂದ ಭೀಮಾ ನದಿಗೆ ಅನ್ಯಾಯವಾದ ಬಗ್ಗೆ ಮಾತಾಡಿ ಎಂದರೆ ಸಂಸದ ಡಾ.ಉಮೇಶ ಜಾಧವ ಅವರು ಹೋರಾಟಗಾರರ ಬಿ.ಪಿ ಚೆಕ್‌ ಮಾಡಿದ ಬಗ್ಗೆ ಹೇಳಿಕೆ ನೀಡುತ್ತಾರೆ. ಇದು ನಮ್ಮ ದುರದೃಷ್ಟ. ಮಾತೆತ್ತಿದರೆ ದೇಶ ಪ್ರಜಾಪ್ರಭುತ್ವ ಎನ್ನುವ ಅವರಿಗೆ ಜಿಲ್ಲೆಯ ಪ್ರಜೆಗಳು ನೀರಿಗಾಗಿ ಪರದಾಡುತ್ತಿರುವುದು ಕಾಣಿಸುತ್ತಿಲ್ಲವೇ? ಕೊನೆ ಪಕ್ಷ ನೀರು ಪಡೆಯುವ ವಿಚಾರದಲ್ಲಿ ಮಹಾರಾಷ್ಟ್ರದ್ದೇ ಸರಿ ಎಂದಾದರೂ ಹೇಳಲಿ’ ಎಂದು ಶಿವಕುಮಾರ ನಾಟೀಕಾರ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT