ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರುಗಳ ನಡುವೆ ಡಿಕ್ಕಿ: ಗುರುಲಿಂಗ ಶಿವಾಚಾರ್ಯರ ಸಾವು

ಬಂಗರಗಾ ಗ್ರಾಮದಲ್ಲಿ ಸೂತಕದ ಛಾಯೆ: ಕಣ್ಣೀರು ಹಾಕುತ್ತಿರುವ ಭಕ್ತರು
Published 23 ಏಪ್ರಿಲ್ 2024, 4:52 IST
Last Updated 23 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಆಳಂದ: ಪಟ್ಟಣದ ಬಸ್ ಘಟಕ ಮುಂಭಾಗದ ರಸ್ತೆಯಲ್ಲಿ ಸೋಮವಾರ ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬಂಗರಗಾ ಗ್ರಾಮದ ಚರಂತೇಶ್ವರ ಹಿರೇಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯರು (44) ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಕಿಣಿಸುಲ್ತಾನ ಮಠದ ಶಿವಶಾಂತಲಿಂಗ ಸ್ವಾಮೀಜಿಗೆ ಗಾಯಗಳಾಗಿದ್ದು, ಆಳಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಚಾಲನೆ ಮಾಡುತ್ತಿದ್ದ ಗುರುಲಿಂಗ ಶಿವಾಚಾರ್ಯರು ಕಲಬುರಗಿಯತ್ತ ತೆರಳುತ್ತಿದ್ದರು. ತೆಲೆಕುಣಿ ನಿವಾಸಿಯೊಬ್ಬರು ಕುಟುಂಬ ಸಮೇತ ಆಳಂದ ಕಡೆ ಬರುತ್ತಿದ್ದರು. ಬಸ್ ಘಟಕ ಮುಂಭಾಗದ ರಸ್ತೆಯಲ್ಲಿ ಈ ಎರಡೂ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಭಾಗ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗುರುಲಿಂಗ ಶಿವಾಚಾರ್ಯರ ತಲೆಗೆ ಬಲವಾಗಿ ಪೆಟ್ಟುಬಿದ್ದು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿತು. ತಕ್ಷಣವೇ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಗರಗಾದಲ್ಲಿ ಸೂತಕದ ಛಾಯೆ: ಬಂಗರಗಾ ಗ್ರಾಮದಲ್ಲಿನ ಮಠಕ್ಕೆ 2010ರಲ್ಲಿ ಚರಂತೇಶ್ವರ ಹಿರೇಮಠದ ಮಠಾಧೀಶರಾಗಿ ಗುರುಲಿಂಗ ಶಿವಾಚಾರ್ಯರು ಪಟ್ಟಾಧಿಕಾರಕ್ಕೆ ಏರಿದ್ದರು. ಸಾಮಾನ್ಯ ಸ್ಥಿತಿಯಲ್ಲಿದ್ದ ಮಠವನ್ನು ಜೀರ್ಣೋದ್ಧಾರಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸಿದರು. ಸರಳತೆ, ಸಜ್ಜನಿಕೆಯಿಂದ ಭಕ್ತರ ಮನ ಗೆದ್ದಿದರು. ಗುರುಲಿಂಗ ಶಿವಾಚಾರ್ಯರ ಅಪಘಾತ ತಿಳಿದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಭಕ್ತರು ತಮ್ಮ ಗುರುವನ್ನು ಕಳೆದುಕೊಂಡು ಕಣ್ಣಿರು ಹಾಕುತ್ತಿದ್ದಾರೆ. ಸುತ್ತಲಿನ ಗ್ರಾಮಗಳ ಭಕ್ತರು ಬಂಗರಗಾ ಗ್ರಾಮದತ್ತ ಬರುತ್ತಿದ್ದಾರೆ.

‘ನಮ್ಮೂರಿನ ಮಠಕ್ಕೆ ಬಂದ ಗುರುಲಿಂಗ ಅಪ್ಪವರು ನಮ್ಮ ಮನೆಯ ಮಗನಂತೆ ಇದ್ದರು. ಮಠದಲ್ಲಿ ನಿರಂತರವಾಗಿದ್ದು, ಸದಾ ಭಕ್ತರೊಂದಿಗೆ ಮಾತುಕತೆ, ಕುಶಲೋಪರಿ ನಡೆಸುತ್ತಿದ್ದರು. ಮಠಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆದವು. ಯಾವುದೇ ಹಮ್ಮು– ಬಿಮ್ಮು ಇಲ್ಲದ ಸರಳ ಸ್ವಭಾವದವರು’ ಎಂದು ಗ್ರಾಮದ ಮುಖಂಡ ಅಣ್ಣಾರಾವ ದಳಪತಿ ಸ್ಮರಿಸಿದರು.

ಗುರುಲಿಂಗ ಶ್ರೀ ಪುರ್ವಾಶ್ರಮ: ನಿರಗುಡಿ ಗ್ರಾಮವು ಗುರುಲಿಂಗ ಸ್ವಾಮೀಜಿ ಪುರ್ವಾಶ್ರಮದ ಹುಟ್ಟೂರು. ಇಲ್ಲಿಯ ಮಲ್ಲಯ್ಯ ಸ್ವಾಮಿ ಮತ್ತು ಶಾಂತಾಬಾಯಿ ಹಿರೇಮಠ ಅವರ ಮೊದಲ ಪುತ್ರರಾಗಿ ಜನಿಸಿದರು. ಸ್ವಗ್ರಾಮದಲ್ಲಿ 7ನೇ ತರಗತಿವರೆಗೆ ಓದಿ, ನಂತರ ಧಾರ್ಮಿಕ ಶಿಕ್ಷಣವನ್ನು ಶಿವಯೋಗ ಮಂದಿರದಲ್ಲಿ ಪಡೆದರು. ನಿರಗುಡಿ ಗ್ರಾಮದ ಹಿರೇಮಠ ಪಟ್ಟಾಧಿಕಾರಿ ವಹಿಸಿಕೊಂಡಿದ್ದರು. ನಂತರ 2010ರಲ್ಲಿ ಬಂಗರಗಾ ಗ್ರಾಮದ ಚರಂತೇಶ್ವರ ಮಠಕ್ಕೆ ಪಟ್ಟಾಧಿಕಾರಿಯಾದರು.

ಗುರುಲಿಂಗ ಶಿವಾಚಾರ್ಯರು
ಗುರುಲಿಂಗ ಶಿವಾಚಾರ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT