ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಮಟ್ಟಕ್ಕೇರಿದ ಗಾಂಜಾ ಮಾರಾಟ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್‌.ನಾರಾಯಣಸ್ವಾಮಿ ಕಳವಳ
Published 17 ಜನವರಿ 2024, 15:36 IST
Last Updated 17 ಜನವರಿ 2024, 15:36 IST
ಅಕ್ಷರ ಗಾತ್ರ

ಕಲಬುರಗಿ: ‘ಸಾಮಾನ್ಯ ಆಟೊ ಚಾಲಕನೊಬ್ಬ ಕೇಂದ್ರ ಕಾರಾಗೃಹದ ಬಳಿ ಹೋಗಿ ಒಳಗಿರುವ ಕೈದಿಗಳಿಗೆ ಹೊರಗಿನಿಂದ ಗಾಂಜಾ ಎಸೆಯುತ್ತಿದ್ದಾನೆ ಎಂದರೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಅತ್ಯಂತ ಅಪಾಯಕಾರಿ ಮಟ್ಟಿದಲ್ಲಿದೆ ಎಂದರ್ಥ. ಈಗಲೇ ತಡೆಯದಿದ್ದರೆ ಯುವಕರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್‌.ನಾರಾಯಣಸ್ವಾಮಿ ಜಿಲ್ಲಾಡಳಿತವನ್ನು ಎಚ್ಚರಿಸಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಎರಡು ದಿನ ಜಿಲ್ಲೆಯ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ನಡೆಸಿದ ಮಾನವ ಹಕ್ಕುಗಳ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜೈಲಿನ ವ್ಯವಸ್ಥೆಯ ಪರಿಶೀಲನೆಗೆ ಕಾರಾಗೃಹಕ್ಕೆ ತೆರಳಿದಾಗ ಜೈಲಿನ ಅಧಿಕಾರಿ ಸಿಸಿಟಿವಿ ದೃಶ್ಯಗಳನ್ನು ತೋರಿಸಿದರು. ಅದರಲ್ಲಿ ಆಟೊ ಚಾಲಕ ಜೈಲಿನ ಒಳಗೆ ಗಾಂಜಾ ಎಸೆಯುವ ದೃಶ್ಯ ಇತ್ತು. ಜಿಲ್ಲೆಯಲ್ಲಿ ಸಾಮಾನ್ಯ ವ್ಯಕ್ತಿಗೆ ಗಾಂಜಾ ಸಿಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

‘ಗಾಂಜಾ ಸರಬರಾಜು ಇದೇ ರೀತಿ ಸಾಗಿದಾರೆ ಮಕ್ಕಳಿಗೆ ಗಾಂಜಾ ಸೇವನೆಯ ಗೀಳು ಹತ್ತುತ್ತದೆ. ಗಾಂಜಾ ಇಲ್ಲದೆ ಬದುಕಲು ಆಗದೆ ತಾಯಿ–ತಂದೆಯೇ ತಮ್ಮ ಮಕ್ಕಳಿಗೆ ಗಾಂಜಾ ಕೊಡಬೇಕಾಗುವ ಪರಿಸ್ಥಿತಿ ಬರಬಹುದು. ನಿಮಗೆ ಎಲ್ಲಾದರು ಗಾಂಜಾ ಕಂಡುಬಂದರೆ ತಕ್ಷಣವೇ ತಡೆಯಿರಿ. ವಿಳಂಬ ಮಾಡಿದರೆ ಗಾಂಜಾ ಬೆಂಕಿ ನಿಮ್ಮ ಮನೆಗೂ ವ್ಯಾಪಿಸಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾನವ ಹಕ್ಕುಗಳು ನಮಗೆ ನೈಸರ್ಗಿಕವಾಗಿ ಬಂದಂತಹವು. ಅವುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು ಪ್ರತಿಯೊಬ್ಬರ ಹೊಣೆಗಾರಿಕೆ. ಕಾನೂನು, ಕಾಯ್ದೆಗಳು ಇದ್ದರೂ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ, ಮಾನವ ಹಕ್ಕುಗಳ ರಕ್ಷಣೆ ನಮ್ಮ ಆದ್ಯತೆಯ ಕೆಲಸವಾಗಬೇಕು’ ಎಂದರು.

ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ‘ಆಳಂದ ನಾಕಾ ರಸ್ತೆಯಲ್ಲಿರುವ ಬಾಲಕಿಯರ ಬಾಲ ಮಂದಿರ, ಶಿಶು ಗೃಹ, ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿದಾಗ ಸಮಸ್ಯೆಗಳ ಸರಮಾಲೆ ಕಂಡುಬಂದಿದೆ. ಕುಡಿಯುವ ನೀರು, ಸಿಬ್ಬಂದಿ ಕೊರತೆ ಕಾಡುತ್ತಿದೆ. ಮಕ್ಕಳು ಇರುವ ಸ್ಥಳದಲ್ಲಿ ಸಮಸ್ಯೆಗಳಿಗೆ ಆಸ್ಪದ ಕೊಡದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಾಗಬೇಕು’ ಎಂದು ಸೂಚಿಸಿದರು.

‘ಪಿಡಿಒ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯ ವೇತನ ತಡೆಹಿಡಿದರೆ ಅವರು ಜೀವನ ನಡೆಸುವುದು ಕಷ್ಟವಾಗುತ್ತದೆ. ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಉಪಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಾಧವ ಗಿತ್ತೆ, ಆಯೋಗದ ಕಾರ್ಯದರ್ಶಿ ದಿನೇಶ್ ಪಾಲ್ಗೊಂಡಿದ್ದರು.

Quote - ದೂರು ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರೊಂದಿಗೆ ಕೆಳಮಟ್ಟದ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಇದನ್ನು ಈಗಿನಿಂದಲೇ ತಿದ್ದಿಕೊಳ್ಳಬೇಕು ಟಿ.ಶ್ಯಾಮ್ ಭಟ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ

Quote - ಆಯೋಗ ನೀಡಿದ ನಿರ್ದೇಶನ ಸೂಚನೆಗಳನ್ನು ದಾಖಲಿಸಿಕೊಂಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬಾಕಿ ಪ್ರಕರಣಗಳನ್ನು ಚಾಚೂತಪ್ಪದೆ ಇತ್ಯರ್ಥ ಮಾಡಲಾಗುವುದು. ಭಂವರ್ ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ

Cut-off box - ‘66 ಪ್ರಕರಣಗಳು ಇತ್ಯರ್ಥ’ ‘ಜಿಲ್ಲೆಯ ಸಾರ್ವಜನಿಕರಿಂದ ಆಯೋಗಕ್ಕೆ 133 ದೂರುಗಳು ಬಂದಿದ್ದವು. ಈ ಪೈಕಿ 66 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು 23 ಹೊಸ ಪ್ರಕರಣಗಳು ದಾಖಲಾಗಿವೆ. ಕೆಲವೊಂದನ್ನು ಫೋನ್‌ ಕರೆಯಲ್ಲಿ ಬಗೆಹರಿಸಲಾಗಿದೆ’ ಎಂದು ಎಲ್‌.ನಾರಾಯಣಸ್ವಾಮಿ ಹೇಳಿದರು. ‘ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಮಟ್ಟದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು’ ಎಂದರು. ‘ಹಕ್ಕುಗಳು ಉಲ್ಲಂಘನೆಯಾದಾಗ ಕ್ರಮ ತೆಗೆದುಕೊಳ್ಳುವುದಕ್ಕಿಂತ ಉಲ್ಲಂಘನೆ ಆಗದಂತೆ ತಡೆಯುವುದು ಮುಖ್ಯ’ ಎಂದು ಎಸ್.ಕೆ ವಂಟಿಗೋಡಿ ಧ್ವನಿ ಗೂಡಿಸಿದರು. ‘ಕೇಂದ್ರ ಕಾರಾಗೃಹದ ಕೈದಿಗಳಿಗೆ ರಾತ್ರಿ ಊಟ ಕೊಡದೆ ಸಂಜೆ 4.30ಕ್ಕೆ ನೀಡಲಾಗುತ್ತಿದೆ. ಆ ಬಳಿಕ ಮರು ದಿನ ಬೆಳಿಗ್ಗೆ 9ಕ್ಕೆ ಊಟ ನೀಡದಿದರೆ ಹೇಗೆ? ಇದು ಮಾನವ ಹಕ್ಕು ಉಲ್ಲಂಘನೆಯಾಗಿದ್ದು ಈ ಬಗ್ಗೆ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ’ ಎಂದರು.

Cut-off box - ‘ನಿಮ್ಮಿಂದ ಆಗದಿದ್ದರೆ ಪತ್ರಿಕೆಗಳ ಮೊರೆ ಹೋಗಿ’ ‘ನಿಮ್ಮ ಮಟ್ಟದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಆಗದೆ ಇದ್ದಾಗ ಮಾಧ್ಯಮಗಳಿಗೆ ತಿಳಿಸಿ. ಪತ್ರಿಕೆಯಲ್ಲಿ ಬಂದ ವರದಿಗಳನ್ನು ಸಹ ಆಯೋಗವು ದೂರಾಗಿ ಸ್ವೀಕರಿಸಿ ಕ್ರಮಕ್ಕೆ ಮುಂದಾಗುತ್ತದೆ’ ಎಂದು ಎಲ್‌.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸಲಹೆ ನೀಡಿದರು. ‘ಕೊರತೆಗಳ ನಡುವೆ ಸಿಲುಕಿದವರನ್ನು ವ್ಯಕ್ತಿಯಾಗಿ ನೋಡಬೇಡಿ. ಅವರೊಂದಿಗೆ ಮಕ್ಕಳು ಕುಟುಂಬ ಸದಸ್ಯರೂ ಇರುತ್ತಾರೆ. ಅವರ ಹಕ್ಕುಗಳಿಗೆ ಚ್ಯುತಿ ಬರಬಾರದು. ಒಂದು ಜೈಲಿನಲ್ಲಿ ಕೈದಿಯೊಬ್ಬನ ಉಪಟಳ ತಡೆಯಲು ಆಗದೆ ಇದ್ದಾಗ ಆತನ ಕಣ್ಣು ಕೀಳಲಾಗಿತ್ತು. ಆ ಘಟನೆ ಪತ್ರಿಕೆಯಲ್ಲಿ ಸಣ್ಣ ವರದಿಯಾದ ಬಳಿಕ ನ್ಯಾಯಾಲಯವು ಅದನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಆ ಬಳಿಕ ದೇಶದ ಜೈಲಿನ ವ್ಯವಸ್ಥೆಯೇ ಬದಲಾಯಿತು’ ಎಂದರು. ‘ಆಯೋಗದಿಂದ ಬಂದ ನಿರ್ದೇಶನ ಶಿಫಾರಸುಗಳನ್ನು ಪ್ರತಿಯೊಬ್ಬ ಅಧಿಕಾರಿಗಳು ಆದ್ಯತೆಯ ಮೇರೆಗೆ ಕ್ರಮಕ್ಕೆ ಮುಂದಾಗಬೇಕು. ಅಗತ್ಯಬಿದ್ದರೆ ವಿಡಿಯೊ ಕಾನ್ಫರೆನ್ಸ್‌ ನಡೆಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT