ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್ ತ್ಯಾಗಿ ಶಿರಸಂಗಿ ಲಿಂಗರಾಜರು: ಸಚಿವ ಎಂ.ಬಿ. ಪಾಟೀಲ ಬಣ್ಣನೆ

Published 28 ಜನವರಿ 2024, 5:38 IST
Last Updated 28 ಜನವರಿ 2024, 5:38 IST
ಅಕ್ಷರ ಗಾತ್ರ

ಕಲಬುರಗಿ: ‘ಶಿರಸಂಗಿ ಲಿಂಗರಾಜ ದೇಸಾಯಿ ಅವರು ತಮ್ಮೆಲ್ಲಾ ಆಸ್ತಿಯನ್ನು ಸಮಾಜದ ಅಭಿವೃದ್ಧಿಗೆ, ಬಡ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದರು. ರೈತರ ಏಳಿಗೆಗಾಗಿ ಕೃಷಿ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ತ್ಯಾಗಕ್ಕೆ ಮತ್ತೊಂದು ಹೆಸರು ಏನಾದರು ಇದ್ದರೆ ಅದು ಶಿರಸಂಗಿ ಲಿಂಗರಾಜ ದೇಸಾಯಿಯೇ ಆಗಿರುತ್ತದೆ’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬಣ್ಣಿಸಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಶಿರಸಂಗಿ ಲಿಂಗರಾಜ ದೇಸಾಯಿ ಅವರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿರಸಂಗಿ ದೇಸಗತಿ ಮನೆತನಕ್ಕೆ ದತ್ತು ಪುತ್ರನಾಗಿ ಬಂದ ಶಿರಸಂಗಿ ಲಿಂಗರಾಜ ಅವರು ಹಲವು ಕಷ್ಟ, ನೋವುಗಳನ್ನು ಎದುರಿಸಿದ್ದರು. ತಮ್ಮ ಸಂಸ್ಥಾನದ ಆಸ್ತಿಯನ್ನು ಸಮಾಜದ ಸತ್ಕಾರ್ಯಕ್ಕಾಗಿ ದಾನವಾಗಿ ಕೊಟ್ಟರು. ಬದುಕಿದ್ದ 45 ವರ್ಷ ಏಳು ತಿಂಗಳಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಿದರು. ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿದ್ದರು. ವೀರಶೈವ ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸಿ ಹರಿದು ಹಂಚಿಹೋಗಿದ್ದ ಸಮುದಾಯಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು’ ಎಂದು ಹೇಳಿದರು.

‘ಲಿಂಗಾಯತ ಸೇರಿ ಹಲವು ಸಮುದಾಯಗಳು ಶಿಕ್ಷಣದತ್ತ ಒಲವು ತೋರುವಂತೆ ಮಾಡಲು ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಇವರ ಪ್ರೇರಣೆಯಿಂದ ರಾಜ್ಯದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದ್ದವು. ಕೆಎಲ್‌ಇ ಸಂಸ್ಥೆಯನ್ನು ಬೆಳೆಸಿದರು. ಅಜ್ಮಿರ್ ದರ್ಗಾ, ಕಾಡಸಿದ್ದೇಶ್ವರ ಮಠ, ಮಂತ್ರಾಲಯ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೂಮಿ ದಾನ ಮಾಡಿದರು. ಕಾಶಿ ಜಂಗಮ ವಾಡಿಯನ್ನು ಜೀರ್ಣೋದ್ಧಾರ ಮಾಡಿದ ಮಹನೀಯರು’ ಎಂದು ಸ್ಮರಿಸಿದರು.

‘ಉಪ ಪಂಗಡಗಳಲ್ಲಿ ನಾನು, ನಮ್ಮ ತಂದೆಯವರು ಭಾಗವಹಿಸದ ಕಾರಣಕ್ಕೆ ನನಗೆ ಬಹಳಷ್ಟು ಮಂದಿ ಬೈಯುತ್ತಿದ್ದರು. ಈಗ ಕಾಲ ಬದಲಾಗಿದೆ. ಪಂಚಮಸಾಲಿ, ಬಣಜಿಗ ಸೇರಿದಂತೆ ಎಲ್ಲ ಉಪಪಂಗಡಗಳಲ್ಲಿ ಬಡವರಿದ್ದಾರೆ. ಅವರಿಗೂ ಮೀಸಲಾತಿ ಸಿಗಬೇಕಾದರೆ ಸಮುದಾಯದ ಎಲ್ಲ ನಾಯಕರು ಕೂಡಿಕೊಂಡು ಸಮಾಜದ ಒಗ್ಗಟ್ಟಿಗಾಗಿ ಮತ್ತೆ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

ಅರಣ್ಯ ಸಚಿವ, ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮಾತನಾಡಿ, ‘ಹೇಗಾದರು ಮಾಡಿ ಹಣ, ಕೀರ್ತಿ ಗಳಿಸಬೇಕು ಎನ್ನುವ ಇಂದಿನ ಪೀಳಿಗೆಗೆ ವಿಶಾಲ ವ್ಯಕ್ತಿತ್ವದ, ಕೊಡುಗೈ ದಾನಿಯಾದ ಶಿರಸಂಗಿ ಲಿಂಗರಾಜ ದೇಸಾಯಿ ಅವರು ತದ್ವಿರುದ್ಧವಾಗಿ ನಿಲ್ಲುತ್ತಾರೆ. ಲಿಂಗರಾಜ ದೇಸಾಯಿ ಅವರು ಬಿಟ್ಟು ಹೋದ ತತ್ವ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಬೇಕಿದೆ’ ಎಂದು ತಿಳಿಸಿದರು.

ಶಿರಸಂಗಿ ಲಿಂಗರಾಜ ದೇಸಾಯಿ ಕುರಿತ ಧ್ವನಿಸುರಳಿ, ದಿನದರ್ಶಿ ಬಿಡುಗಡೆ ಮಾಡಲಾಯಿತು. ಜಗತ್ ವೃತ್ತದಿಂದ ವೀರಶೈವ ಮಂಟಪದವರೆಗೆ ಶಿರಸಂಗಿ ಲಿಂಗರಾಜ ದೇಸಾಯಿ ಭಾವಚಿತ್ರದ ಮೆರವಣಿಗೆ ನಡೆಯಿತು. ಸಾವಿರಾರು ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹಾಗೂ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಲಿಂಗಾಯತ ಕುಡುಒಕ್ಕಲಿಗ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು.

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷ
ಡಾ. ಅಜಯ್‌ಸಿಂಗ್, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಶಶೀಲ್ ಜಿ.ನಮೋಶಿ, ಮಹಾಸಭೆ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೋದಿ, ಲಿಂಗರಾಜ ದೇಸಾಯಿ ವಿವಿಧೋದ್ದೇಶ ಸಂಸ್ಥೆ ಅಧ್ಯಕ್ಷ ಬಾಬುಗೌಡ ಪಾಟೀಲ ತೆಲ್ಲೂರ, ಕಲಬುರಗಿ– ಬೀದರ್‌ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಆರ್‌.ಕೆ. ಪಾಟೀಲ, ಮುಖಂಡರಾದ ನೀಲಕಂಠ ರಾವ ಮೂಲಗೆ, ಸೋಮಶೇಖರ ಉಪಸ್ಥಿತರಿದ್ದರು.

ಶಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ಶಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
‘ಶಿಕ್ಷಣಕ್ಕೆ ಮಠಗಳ ಕೊಡುಗೆ ಅನನ್ಯ’
‘ಶಿರಸಂಗಿ ಲಿಂಗರಾಜ ದೇಸಾಯಿ ಅವರ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ವೀರಶೈವ ಲಿಂಗಾಯತ ಮಠಗಳು ಶಿಕ್ಷಣದ ಜತೆಗೆ ಅನ್ನದಾಸೋಹ ಮಾಡಿದ್ದರಿಂದಲೇ ಇವತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ‘‍ಪ್ರಚಾರಕ್ಕಾಗಿ ಹುಟ್ಟಿಕೊಂಡ ಮಠಗಳ ನಡುವೆ ವೀರಶೈವ ಲಿಂಗಾಯತ ಮಠಗಳು ಎಲ್ಲ ಸಮುದಾಯದವರ ಮಕ್ಕಳಿಗೆ ಶಿಕ್ಷಣ ಆಹಾರ ಮತ್ತು ಸಂಸ್ಕಾರವನ್ನು ನೀಡಿವೆ. ಬಡವರ ಮಕ್ಕಳು ಮಠಗಳಲ್ಲಿನ ವಸತಿ ಶಾಲೆಗಳಲ್ಲಿ ಉಳಿದುಕೊಂಡು ಅಧ್ಯಯನ ಮಾಡಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ’ ಎಂದರು. ‘ಪ್ರತಿ ವರ್ಷ ಲಿಂಗರಾಜ ದೇಸಾಯಿ ಅವರ ಜಯಂತಿಯನ್ನು ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಆಚರಿಸಬೇಕು. ಸರ್ಕಾರದ ವತಿಯಿಂದ ಆಚರಣೆಗೆ ಮನವಿ ಮಾಡಲಾಗಿದೆ. ನವಲಗುಂದದಲ್ಲಿ ಸ್ಮಾರಕ ನಿರ್ಮಾಣ ಮಹಾಸಭೆ ಆವರಣದಲ್ಲಿ ಮೂರ್ತಿ ಅನಾವರಣ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT