ಸೋಮವಾರ, ಜನವರಿ 17, 2022
18 °C

ಚಿತ್ತಾಪುರ: ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲ್ಲೂಕು ಘಟಕ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ‘ಸಮಾಜದಲ್ಲಿನ ಮೌಢ್ಯವನ್ನು ಬೇರು ಸಹಿತ ನಿರ್ಮೂಲನೆ ಮಾಡಬೇಕಿದೆ. ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳಸುವ ಮೂಲಕ ಮೌಢ್ಯಮುಕ್ತ ಸಮಾಜದ ನಿರ್ಮಾಣ ಮಾಡಬೇಕಿದೆ’ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲೂಕು ಘಟಕದ ಉದ್ಘಾಟನೆ ನೆರವೇರಿಸಿ ಅವರು  ಮಾತನಾಡಿದರು.

ಮೌಢ್ಯಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಮಕ್ಕಳಲ್ಲಿ ವೈಜ್ಞಾನಿಕತೆ, ತಾರ್ಕಿಕತೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ವೈಜ್ಞಾನಿಕವಾಗಿ ನಾವು ಸಾಕಷ್ಟು ಮುಂದುವರೆದಿದ್ದರೂ ಸಮಾಜದಲ್ಲಿ ಮೂಢನಂಬಿಕೆ ತಾಂಡವವಾಡುತ್ತಿದೆ. ಮೌಢ್ಯ ಹರಡುವ ಜನರಿಂದ ದೂರವಿದ್ದು ಮನೆಯಿಂದಲೇ ಮೂಢನಂಬಿಕೆ ಹೊರಹಾಕುವ ಕೆಲಸ ಮಾಡಬೇಕು. ಪವಾಡ ಬಯಲು ಮಾಡುವ ಕಾರ್ಯಕ್ರಮ ಆಯೋಜಿಸಿ ಮೂಢನಂಬಿಕೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವರಂಜನ ಸತ್ಯಂಪೇಟೆ, 'ಮೌಡ್ಯ ಮುಕ್ತ ಸಮಾಜಕ್ಕಾಗಿ ವೈಜ್ಞಾನಿಕ ಚಿಂತನೆ' ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಮಳಖೇಡ, ಮುಖ್ಯ ಅತಿಥಿಗಳಾಗಿದ್ದ ಡಾ.ನಂದಾ ರಾಂಪೂರೆ, ಪರಿಷತ್ತಿನ ಸಹ ಕಾರ್ಯದರ್ಶಿ ವೀರಪಾಕ್ಷರುದ್ರ ಬೆಣ್ಣಿ ಅವರು ಮಾತನಾಡಿದರು.

ಹಿರಿಯ ಉಪನ್ಯಾಸಕ ಎಸ್. ಎಸ್. ಕುಳಗೇರಿ, ರಾಜ್ಯ ನಿರ್ದೇಶಕ ಶರಣಬಸವ ಕಲ್ಲಾ, ಜಿಲ್ಲಾ ಸಹಕಾರ್ಯದರ್ಶಿ ಪರಮೇಶ್ವರ ಶಟಗಾರ, ಜಿಲ್ಲಾ ನಿರ್ದೇಶಕ ಆಯ್ಯಣ್ಣ ನಂದಿ, ತಾಲ್ಲೂಕು ಗೌರವಾಧ್ಯಕ್ಷ ಕಾಶಿನಾಥ ಗುತ್ತೇದಾರ, ನಿರ್ದೇಶಕರಾದ ಸುರೇಶ ಬೆನಕನಳ್ಳಿ, ರವಿಶಂಕರ ಬುರ್ಲಿ, ರವಿ ಇವಣಿ, ಶಿವರಾಮ ಚವ್ಹಾಣ, ಜಗದೇವ ದಿಗ್ಗಾಂವಕರ್, ಅನಂತನಾಗ ದೇಶಪಾಂಡೆ, ಆನಂದ ಕಲ್ಲಕ್, ಶರಣಪ್ಪ ಕೋರವಾರ, ಶಾರದಾ ಮಳಖೇಡ, ಶ್ರೀದೇವಿ ಬೆಣ್ಣಿ, ಮಂಜುನಾಥ ಚೂರಿ ಇದ್ದರು. ಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ ಅವರು ಪ್ರಾಸ್ತಾವಿಕ ಮಾತನಾಡಿದರು.

ಶಿಕ್ಷಕ ನರಸಿಂಹ ಭೋವಿ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನರಸಪ್ಪ ಚಿನ್ನಾಕಟ್ಟಿ ಅವರು ನಿರೂಪಿಸಿದರು. ಮೋಹಿನ್ ಸಾತನೂರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು