ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಸೆಮಿನಾರ್

Published 3 ಜನವರಿ 2024, 13:58 IST
Last Updated 3 ಜನವರಿ 2024, 13:58 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂಬ ಹಣೆಪಟ್ಟಿ ಅಳಿಸಲು ಇಂದಿನ ಯುವ ಜನಾಂಗಕ್ಕೆ ಮಾತ್ರ ಸಾಧ್ಯ. ಕಾನೂನು ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ವಿ.ಟಿ. ಕಾಂಬಳೆ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ಡಿಜಿಟಲ್ ಯುಗದಲ್ಲಿ ಕಾನೂನು ಗ್ರಂಥಾಲಯಗಳ ಪಾತ್ರ’ ಕುರಿತು ಒಂದು ದಿನದ ಸೆಮಿನಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕಾನೂನು ಪದವಿ ವ್ಯಾಸಂಗ ಮುಗಿಸಿ ವಕೀಲರಾದಾಗ ಬಡವರಿಗೆ ಅನ್ಯಾಯವಾದರೆ ಸ್ವಯಂ ಪ್ರೇರಣೆಯಿಂದ ನ್ಯಾಯ ಒದಗಿಸಬೇಕು. ಡಾ. ಬಿ.ಆರ್.ಅಂಬೇಡ್ಕರ್ ಅವರು ಮುಂಬೈಯಿಂದ ಬಿಜಾಪುರ ನ್ಯಾಯಾಲಯಕ್ಕೆ ಬಂದು ಒಂದು ಬಡ ಮುಸ್ಲಿಂ ಕುಟುಂಬಕ್ಕೆ ಅನ್ಯಾಯವಾದಾಗ ಅವರ ಪರವಾಗಿ ವಾದ ಮಂಡಿಸಿ ನ್ಯಾಯ ಒದಗಿಸಿದ್ದರು. ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು. ಮತದಾನದ ಹಕ್ಕು ನೀಡಿದ್ದು ಸಂವಿಧಾನ. ಸಂವಿಧಾನವನ್ನು ನಮ್ಮೆಲ್ಲರಿಗೆ ನೀಡಿದ್ದು ಡಾ. ಬಿ.ಆರ್. ಅಂಬೇಡ್ಕರ್. ಅಂಬೇಡ್ಕರ್ ಅವರನ್ನು ರೂಪಿಸಿದ್ದು ಈ ಗ್ರಂಥಾಲಯಗಳು’ ಎಂದರು.

ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕ ಸುರೇಶ ಜಂಗೆ, ‘ತಂತ್ರಜ್ಞಾನದ ಅಭಿವೃದ್ಧಿಯಿಂದ ಇಂದು ಗ್ರಂಥಾಲಯಗಳು ಬೃಹದಾಕಾರವಾಗಿ ಬೆಳೆದಿವೆ. ಕೇವಲ ಬೆರಳ ತುದಿಯಲ್ಲಿ ಸಮಗ್ರ ಮಾಹಿತಿ ನೀಡುವ ಶಕ್ತಿ ಇಂದಿನ ಗ್ರಂಥಾಲಯಗಳಲ್ಲಿದೆ. ಚೆನ್ನಾಗಿ ಓದಿ ಸಾಧಿಸಿದರೆ ಗುರುಗಳು, ಪಾಲಕರಿಗೆ ಕೀರ್ತಿ ಬರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು’ ಎಂದು ಹೇಳಿದರು.

ವಿಜ್ಞಾನೇಶ್ವರ ಸರ್ಕಾರಿ ಕಾನೂನು ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಾನಂದ ಲೆಂಗಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಪಾಲಕಿ ವೀಣಾ ಅಂಕದ್, ಐಕ್ಯೂಎಸಿ ಸಂಯೋಜಕಿ ರೇಣುಕಾ ಸಾಸನಮರಿ ಸೇರಿದಂತೆ ಉಪನ್ಯಾಸಕರು ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT