ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪಿಎಚ್‌ಡಿ ಪ್ರವೇಶ ರದ್ದತಿಗೆ ಎಸ್‌ಎಫ್‌ಐ ಖಂಡನೆ

Published 28 ಮಾರ್ಚ್ 2024, 15:42 IST
Last Updated 28 ಮಾರ್ಚ್ 2024, 15:42 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ನಿಗದಿತ ಅವಧಿಯನ್ನು ಮೀರಿದ ಪಿಎಚ್‌.ಡಿ ವಿದ್ಯಾರ್ಥಿಗಳ ನೋಂದಣಿಯನ್ನು ರದ್ದುಪಡಿಸುವ ಕುರಿತು ಹೊರಡಿಸಿದ ಸುತ್ತೋಲೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿಯು ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಸಂಚಾಲಕಿ ಸುಜಾತಾ, ‘ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಪ್ರಬಂಧವನ್ನು ಸಲ್ಲಿಸಿಲ್ಲ ಎನ್ನುವುದು ನಿಜವಾದರೂ ಅದನ್ನು ಸಲ್ಲಿಸಲು ದಿನಾಂಕದ ವಿಸ್ತರಣೆಯನ್ನು ಅವರ ಮಾರ್ಗದರ್ಶಕರಿಂದ ಕೇಳಿ ಪಡೆದಿರುತ್ತಾರೆ. ಹಾಗೆಯೇ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಯುಜಿಸಿ ನಿಯಮಾವಳಿಯ ಪ್ರಕಾರ 2 ಬಾರಿ ಸಮಯ ವಿಸ್ತರಣೆಗೆ ಅವಕಾಶ ನೀಡಬೇಕಿತ್ತು. ಜೊತೆಗೆ ಯಾವುದೇ ವಿದ್ಯಾರ್ಥಿಯ ಪ್ರವೇಶವನ್ನು ರದ್ದುಪಡಿಸುವ ಮುಂಚೆ ದಿನಾಂಕ ಮುಗಿಯುವುದರ ಬಗ್ಗೆ ಪೂರ್ವ ಸೂಚನೆ ನೀಡಬಹುದಾಗಿತ್ತು. ಇವೆಲ್ಲ ಅಂಶಗಳನ್ನು ಬದಿಗಿಟ್ಟು ದಲಿತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ಇಡುವ ಪ್ರಯತ್ನವನ್ನು ವಿ.ವಿ. ಆಡಳಿತ ಮಂಡಳಿ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

‘ವಿಶ್ವವಿದ್ಯಾಲಯವು ಗುರಿ ಮಾಡಿ ಅವರ ಪ್ರವೇಶವನ್ನು ತೆಗೆದು ಹಾಕಲು ಪ್ರಯತ್ನಿಸಿದ್ದ ವಿದ್ಯಾರ್ಥಿಗಳೆಲ್ಲರೂ ಮುಂಚೆಯಿಂದಲೂ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಪ್ರಶ್ನೆಗಳನ್ನು ಮಾಡುತ್ತಾ ಬಂದಿದ್ದಾರೆ. ಕೋಮು ಹಿನ್ನೆಲೆಯಿಂದ ಬಂದಿರುವ ಕುಲಪತಿಗಳು ಇದನ್ನು ಸಹಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳ ಶಿಕ್ಷಣವನ್ನು ಗುರಿ ಮಾಡಿಕೊಂಡಿದ್ದಾರೆ. ಇದರಿಂದ ವಿಶ್ವವಿದ್ಯಾಲಯವು ಎತ್ತಿಹಿಡಿಯಬೇಕಾದ ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ತತ್ವಗಳನ್ನು ಹಾಳುಮಾಡುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT