ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ - ನರ್ಸ್ ಅಮಾನತಿಗೆ ಆಗ್ರಹ: ಪ್ರತಿಭಟನೆ

Published 2 ಮಾರ್ಚ್ 2024, 15:36 IST
Last Updated 2 ಮಾರ್ಚ್ 2024, 15:36 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಫೆ.23ರಂದು ಹಿಂದೂ ಯುವಕರ ಮೇಲೆ ಸುಳ್ಳು ಆರೋಪಗಳಡಿ ದಾಖಲಾದ ಜಾತಿನಿಂದನೆ ಕೇಸ್ ದಾಖಲಿಸಲಾಗಿದೆ ಎಂದು ಆರೋಪಿಸಿ ಮತ್ತು ಘಟನೆಗೆ ಸಂಬಂಧಿಸಿ ಇಬ್ಬರು ನರ್ಸ್‌ಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಜಾಗೃತಿ ಸೇನೆ ವತಿಯಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ‘ಫೆ.22ರಂದು ರಟಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಅಶ್ವಿನಿ, ರಬೀಕಾ ಎಂಬುವರು ಹಿಂದೂ ಮಹಿಳೆಯರನ್ನು ಮತಾಂತರ ಯತ್ನಿಸುತ್ತಿದ್ದರು. ಇದನ್ನು ನೋಡಿದ ಹಿಂದೂ ಜಾಗೃತಿ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಚೋಕಾ ಮತ್ತಿತರರು ‘ನರ್ಸ್ ಅವರು ಸರ್ಕಾರಿ ಕಟ್ಟಡದಲ್ಲಿ ಮಾಡುತ್ತಿರುವ ಚಟುವಿಟಿಕೆ ತಪ್ಪು’ ಎಂದು ಕೂಡಲೇ ಸ್ಥಳೀಯ ಪಿಎಸ್ಐ ಗಮನಕ್ಕೆ ತಂದಿದ್ದಾರೆ’ ಎಂದು ತಿಳಿಸಿದರು.

‘ಸ್ಥಳಕ್ಕೆ ಭೇಟಿದ ಪಿಎಸ್ಐ ಯುವಕರಿಗೆ ‘ಠಾಣೆಗೆ ಬಂದು ದೂರು ಕೊಡಿ’ ಎಂದು ತಿಳಿಸಿ ಹೋಗಿದ್ದಾರೆ. ಯುವಕರ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳದೆ ನರ್ಸ್ ನೀಡಿದ ಸುಳ್ಳು ದೂರು ಆಧಾರಿಸಿ 10-15 ಜನ ಹಿಂದೂ ಯುವಕರ ಮೇಲೆ ಜಾತಿನಿಂದನೆ ಕೇಸ್ ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದುಕೊಂಡು ಮತಾಂತರ ಕಾರ್ಯಕ್ಕೆ ಇಳಿದಿರುವ ನರ್ಸ್ ಪಕ್ಕದ ಹುಲಸಗೂಡ ಗ್ರಾಮದಲ್ಲಿ ಖಾಸಗಿ ದವಾಖಾನೆ ತೆರೆದು ಸರ್ಕಾರಿ ಮಾತ್ರೆಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ನರ್ಸ್‌ಗಳ ಮೇಲೆ ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು. ಯುವಕರ ಮೇಲೆ ಹಾಕಿರುವ ಜಾತಿನಿಂದನೆ ಪ್ರಕರಣ ರದ್ದು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ’ ಎಂದು ಎಚ್ಚರಿಸಿದರು.

ಬಸ್ ನಿಲ್ದಾಣದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ನಡೆದ ಪ್ರತಿಭಟನೆಯಲ್ಲಿ ಗೋಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಕಮಕನೂರ, ರೇವಣಸಿದ್ದ ಮೊಘಾ, ಕಿರಣ ನಾಮದಾರ, ಶಿವಕುಮಾರ ಚಿಕ್ಕ ಅಗಸಿ, ಮಂಜುನಾಥ ಭೇರನ, ರಾಜು ಸಿಳ್ಳಿನ, ಬಾಬು ನಾಟೀಕಾರ, ರೇವಣಸಿದ್ದ ಕಲಶೆಟ್ಟಿ, ಭೀಮರಾಯ ಮಲಘಾಣ, ಬಲರಾಮ ವಲ್ಲ್ಯಾಪುರೆ ಅನೇಕರು ಭಾಗವಹಿಸಿದ್ದರು.

ತಹಶೀಲ್ದಾರ್ ಘಮಾವತಿ ರಾಠೋಡ ಮನವಿ ಪತ್ರ ಸ್ವೀಕರಿಸಿದರು. ಪಿಎಸ್ಐ ವಿಶ್ವನಾಥ ಬಾಕಳೆ ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT