ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವರಿಗೂ ತಲುಪದ ಅಭಿವೃದ್ಧಿ ಪಾಲು: ಪನ್ನಾರಾಜ್ ಸಿರಿಗೇರಿ ಕಳವಳ

ಎಂಎಸ್‌ಎಂಇ, ಸ್ಟಾರ್ಟ್‌ ಅಪ್‌ ಸಮಾವೇಶ: ಎಸ್‌ಐಆರ್‌ಸಿ ಅಧ್ಯಕ್ಷ ಪನ್ನಾರಾಜ್ ಸಿರಿಗೇರಿ ಕಳವಳ
Published 12 ಡಿಸೆಂಬರ್ 2023, 13:33 IST
Last Updated 12 ಡಿಸೆಂಬರ್ 2023, 13:33 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶದ ಆರ್ಥಿಕತೆಯು ಶೇ 7ರಷ್ಟು ಪ್ರಗತಿ ಸಾಧಿಸುತ್ತಿದ್ದರೂ ಅಭಿವೃದ್ಧಿಯ ಹಂಚಿಕೆಯು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳಿನಂತೆ ಆಗುತ್ತಿಲ್ಲ. ಸಂಪತ್ತಿನ ಒಡೆತನ ಕೆಲವೇ ಜನರ ಹಿಡಿತದಲ್ಲಿದೆ’ ಎಂದು ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್ಸ್ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾಂತೀಯ ಪರಿಷತ್‌ನ (ಎಸ್‌ಐಆರ್‌ಸಿ) ಅಧ್ಯಕ್ಷ ಪನ್ನಾರಾಜ್ ಸಿರಿಗೇರಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ), ಕೆನರಾ ಬ್ಯಾಂಕ್, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಕಾರ್ಪೊರೇಟ್ ಸಂಸ್ಥೆ ಹಾಗೂ ಕಲಬುರಗಿ ವಿಭಾಗದ ಐಸಿಎಐ–ಎಸ್‌ಐಆರ್‌ಸಿ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ ಅಪ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘1991ರ ಜಾಗತೀಕರಣದ ನಂತರ ಅಭಿವೃದ್ಧಿಯ ಹಂಚಿಕೆ ನ್ಯಾಯಸಮ್ಮತವಾಗಿಲ್ಲ. ಶೇ 7ರ ಮೇಲ್ಪಟ್ಟು ಜಿಡಿಪಿ ಬೆಳವಣಿಗೆ ಆಗುತ್ತಿದ್ದರೂ ಅಭಿವೃದ್ಧಿ ಆಗುತ್ತಿಲ್ಲ. ದೇಶದ ಶೇ 1ರಷ್ಟು ಜನರು ಶೇ 39ರಷ್ಟು ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಜಂಟಿಯಾಗಿ ಸಾಗಬೇಕಿದ್ದ ಬೆಳವಣಿಗೆ ಮತ್ತು ಅಭಿವೃದ್ಧಿಯು ಬೆಳವಣಿಗೆ ವರ್ಸಸ್ ಅಭಿವೃದ್ಧಿಯಾಗಿ ಸಾಗುತ್ತಿವೆ. ಇದನ್ನು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳು ಸರಿಪಡಿಸಬೇಕಿದೆ’ ಎಂದರು.

‘ದೇಶದ ಜಿಡಿಪಿಯಲ್ಲಿ ಎಂಎಸ್‌ಎಂಇ ಪಾಲು ಶೇ 28ರಷ್ಟಿದ್ದು, 12 ಕೋಟಿ ಜನರಿಗೆ ಉದ್ಯೋಗ ಕೊಡುತ್ತಿದೆ. ಶೇ 50ರಷ್ಟು ರಫ್ತು ಪ್ರಮಾಣ ಹೊಂದಿದ್ದು, ಸರ್ವರನ್ನು ಒಳಗೊಂಡ ಬೆಳವಣಿಗೆಗೂ ಕಾರಣ ಆಗುತ್ತಿದೆ. ಸ್ವತಂತ್ರ ಭಾರತದ ಆರಂಭದಿಂದಲೂ ಆರ್ಥಿಕತೆಯ ದಾರಿದೀಪವಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಗುತ್ತಿಲ್ಲ. ಸಾಲ ನೀಡಿಕೆಯ ಪ್ರಮಾಣವೂ ಇಳಿಮುಖವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೃಷಿ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹವಾಮಾನ ವೈಪರೀತ್ಯಯು ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೃಷಿಗೆ ಧಕ್ಕೆಯಾದರೆ ಶೇ 60ರಷ್ಟು ಜನರು ಬೆಳವಣಿಗೆಯಿಂದ ಹಿಂದೆ ಸರಿಯುತ್ತಾರೆ. 2ನೇ ಹಂತದ ನಗರಗಳು ಸಹ ಬೆಳವಣಿಗೆ ಕಾಣುವುದಿಲ್ಲ’ ಎಂದು ಎಚ್ಚರಿಸಿದರು.

‘ಕೈಗಾರಿಕೆ ಮತ್ತು ಉದ್ದಿಮೆಗಳು ಕಲ್ಯಾಣ ಕರ್ನಾಟಕದತ್ತ ಬರುತ್ತಿಲ್ಲ. ಈ ಭಾಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಬೆಂಬಲದ ಅವಶ್ಯಕತೆ ಇದೆ. ಸ್ಥಳೀಯರು ಗಟ್ಟಿಯಾಗಿ ಧ್ವನಿಯಲ್ಲಿ ತಮ್ಮ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕು. ಅಭಿವೃದ್ಧಿಯ 35 ಅಂಶಗಳನ್ನು ಇರಿಸಿಕೊಂಡ ನಂಜುಂಡಪ್ಪ ಅಧ್ಯಯನ ವರದಿಯು ಜಾಗತಿನಲ್ಲೇ ಅತ್ಯುತ್ತಮವಾದದ್ದು. ಅದರಲ್ಲಿನ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕಿದೆ’ ಎಂದು ಅವರು ಸಲಹೆ ನೀಡಿದರು.

ಕೆಕೆಸಿಸಿಐ ಅಧ್ಯಕ್ಷ ಚಂದ್ರಕಾಂತ ಪಾಟೀಲ ಮಾತನಾಡಿ, ‘ನಿಜಾಮರು ತಮ್ಮ ಆಳ್ವಿಕೆಯಲ್ಲಿ ಕೈಗಾರಿಕೆ, ಆರ್ಥಿಕ, ಔದ್ಯೋಗಿಕ ಅವಕಾಶ ನೀಡದೆ ನಮ್ಮ ಹಿಂದೆ ತಳ್ಳಿದ್ದರು. ಜನಪ್ರತಿನಿಧಿಗಳು ಸಹ ನಮ್ಮನ್ನು ಹಿಂದಕ್ಕೆ ತಳುತ್ತಿದ್ದಾರೆ. ಶೈಕ್ಷಣಿಕ ಹಬ್, ಅತ್ಯುತ್ತಮ ಆಸ್ಪತ್ರೆಗಳು ಇದ್ದರೂ ಕೈಗಾರಿಕೆಗಳು ಮುಂದೆ ಬರುತ್ತಿಲ್ಲ. ಪ್ರವಾಸಿ ತಾಣಗಳು ಇದ್ದರೂ ಅಭಿವೃದ್ಧಿ ಕಾಣುತ್ತಿಲ್ಲ’ ಎಂದರು.

ಸಮಾವೇಶದ ನಿರ್ದೇಶಕ ಸಿಎ ಎಸ್.ಎಸ್.ನಾಯಕ್, ಕಲಬುರಗಿ ವಿಭಾಗದ ಐಸಿಎಐ–ಎಸ್‌ಐಆರ್‌ಸಿ ಅಧ್ಯಕ್ಷ ಸಿಎ ಮಲ್ಲಿಕಾರ್ಜುನ ವೀರಣ್ಣ ಮಹಾಂತಗೋಳ, ಕಾರ್ಯದರ್ಶಿ ಸಿಎ ಮಾಣಿಕ್ ರಮೇಶ್ ಮಂದಕನಳ್ಳಿ, ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಉದ್ಯಮಿ ಪ್ರವೀಣ ನಂದಿ ಪಾಲ್ಗೊಂಡಿದ್ದರು.

ದೇಶದ ಒಟ್ಟು ಫಲವಂತಿಕೆ ದರ (ಟಿಎಫ್‌ಆರ್‌) 2.13 ಇದ್ದರೆ ಕರ್ನಾಟಕದ ಟಿಎಫ್‌ಆರ್ 1.7 ಇದೆ. ಕೆಲವೇ ವರ್ಷಗಳಲ್ಲಿ ರಾಜ್ಯದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಲಿದೆ

-ಪನ್ನಾರಾಜ್ ಸಿರಿಗೇರಿ ಎಸ್‌ಐಆರ್‌ಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT