ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಪಿ.ಎಸ್‌.ಶಂಕರಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿ

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿಂದ ಗೌರವ
Published 15 ಫೆಬ್ರುವರಿ 2024, 16:02 IST
Last Updated 15 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ 2022ನೇ ಸಾಲಿನ ವಿವಿಧ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ವೈದ್ಯ ಸಾಹಿತಿ ಡಾ.ಪಿ.ಎಸ್‌.ಶಂಕರ ಅವರು‌ ‘ಕನ್ನಡ ನಾಡು ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ‘ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಡಾ.ಪಿ.ಎಸ್.ಶಂಕರ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಜೀವಮಾನ ಸಾಧನೆಗಾಗಿ ನೀಡುವ ‘ಕನ್ನಡ ನಾಡು ಸಾಹಿತ್ಯ ಶ್ರೀ’ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹11 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸತ್ಕಾರ ಒಳಗೊಂಡಿದೆ’ ಎಂದರು.

‘ಕಲ್ಯಾಣ ಪ್ರದೇಶದ ಐವರು ಲೇಖಕರ ಕೃತಿಗಳಿಗೆ ಕನ್ನಡ ಸಾಹಿತ್ಯ ಕೃತಿ ಪ್ರಶಸ್ತಿ ಘೋಷಿಸಲಾಗಿದೆ. ಸಾಹಿತ್ಯ ವಿಭಾಗದಲ್ಲಿ ಲೇಖಕಿ ವಿಜಯಶ್ರೀ ಸಬರದ, ಸಾಂತ್ವನ ವಿಭಾಗದಲ್ಲಿ ಲೇಖಕರಾದ ಮುರಗೆಪ್ಪ ಹಡಪದ ಹಾಗೂ ಮಹಿಪಾಲರೆಡ್ಡಿ ಮುನ್ನೂರು(ಜಂಟಿ ಪ್ರಶಸ್ತಿ), ಸಂಕೀರ್ಣ ವಿಭಾಗದಲ್ಲಿ ಲೇಖಕ ಅಕ್ಬರ್ ಸಿ.ಕಾಲಿಮಿರ್ಚಿ ಹಾಗೂ ಕಥಾ ಸಂಕಲನ ವಿಭಾಗದಲ್ಲಿ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹5 ಸಾವಿರ, ಪ್ರಶಸ್ತಿ ಪತ್ರ ಹಾಗೂ ಸತ್ಕಾರವನ್ನು ಒಳಗೊಂಡಿದೆ’ ಎಂದು ವಿವರಿಸಿದರು.

‘ನಗರದ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಒಟ್ಟು ಒಂಬತ್ತು ಲೇಖಕರ ಕೃತಿಗಳ ಬಿಡುಗಡೆ ನಡೆಯಲಿದೆ. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಅವರ ಸಲಹೆಗಾರ, ಶಾಸಕ ಬಿ.ಆರ್‌.ಪಾಟೀಲ ಅವರು ಕೃತಿಗಳನ್ನು ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಾಲೇಜಿನ ಪ್ರಾಚಾರ್ಯ ರಾಜೇಂದ್ರ ಕೊಂಡಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಅಪ್ಪಾರಾವ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಸ್ವಾಮಿರಾವ ಕುಲಕರ್ಣಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ 2008ರಲ್ಲಿ ಸ್ಥಾಪನೆಯಾದ ಈ ಸಂಘಕ್ಕೀಗ 16ರ ಹರೆಯ. ಈತನಕ ಈ ಭಾಗದ 145 ಲೇಖಕರ 153 ಪುಸ್ತಕಗಳನ್ನು ಪ್ರಕಟಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT