ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಕ್ತಿ’ ಪ್ರಯಾಣಿಕರ ಕಾಯುವ ಫಜೀತಿ!

ಟೆಕೆಟ್‌ ಪಡೆದ ಸ್ಥಳ ಬಿಟ್ಟು ಮಾರ್ಗಮಧ್ಯೆ ಇಳಿಯುವ ಮಹಿಳೆಯರು: ಬಸ್‌ ನಿರ್ವಾಹಕರಿಗೆ ಅನಗತ್ಯ ಕಿರಿಕಿರಿ
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 11 ಜೂನ್ 2024, 6:59 IST
Last Updated 11 ಜೂನ್ 2024, 6:59 IST
ಅಕ್ಷರ ಗಾತ್ರ

ಕಲಬುರಗಿ: ಬಸ್‌ ನಿರ್ವಾಹಕರು (ಕಂಡಕ್ಟರ್‌) ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಟಿಕೆಟ್‌ ಕೊಡುವ ಜೊತೆಗೆ ಅವರು ಟೆಕೆಟ್‌ ಪಡೆದ ಸ್ಥಳ ಅಥವಾ ಊರಿನಲ್ಲಿಯೇ ಇಳಿಯುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಚಾರ ಹೆಚ್ಚಾಗಿದೆ. ಈ ಯೋಜನೆಯ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. 

ಆಧಾರ್‌ ಕಾರ್ಡ್‌ ಪ್ರದರ್ಶಿಸಿ ಉಚಿತವಾಗಿ ಟಿಕೆಟ್‌ ಪಡೆಯುವ ಕೆಲ ಮಹಿಳೆಯರು, ತಾವು ಟೆಕೆಟ್‌ ಪಡೆದ ಊರುಗಳಲ್ಲಿ ಇಳಿಯುತ್ತಿಲ್ಲ. ಇದರಿಂದ ಬಸ್‌ ನಿರ್ವಾಹಕರು ಅನಗತ್ಯ ಸಮಸ್ಯೆ ಎದುರಿಸುವ ಜೊತೆಗೆ ಅಮಾನತಿನಂತಹ ಶಿಕ್ಷೆಗೂ ಗುರಿಯಾಗಬೇಕಾಗಿದೆ.

ಪ್ರಕರಣ–1: ಈಚೆಗೆ ಕಲಬುರಗಿ–ಯಾದಗಿರಿ ಬಸ್‌ ಹತ್ತಿದ ಇಬ್ಬರು ಮಹಿಳೆಯರು ಹಲಕರ್ಟಿಗೆ ಟಿಕೆಟ್‌ ಪಡೆದಿದ್ದರು. ಆದರೆ, ಮಾರ್ಗಮಧ್ಯದ ವಾಡಿಯಲ್ಲಿ ಇಳಿದುಕೊಂಡರು. ಇದನ್ನು ಗಮನಿಸಿದ ನಿರ್ವಾಹಕ, ‘ನೀವು ಹಲಕರ್ಟಿವರೆಗೂ ಟಿಕೆಟ್‌ ಪಡೆದಿದ್ದೀರಿ. ಅಲ್ಲಿಯೇ ಇಳಿದುಕೊಳ್ಳಬೇಕು’ ಎಂದು ತಾಕೀತು ಮಾಡಿದರು. ಈ ಮಧ್ಯೆಯೇ ಒಬ್ಬ ಮಹಿಳೆ, ‘ನಾನು ವಾಡಿಯಿಂದ ಅಗತ್ಯವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕು’ ಎನ್ನುತ್ತಲೇ ಬಸ್‌ನಿಂದ ದೂರ ಸಾಗಿದರು.

ಮತ್ತೊಬ್ಬ ಮಹಿಳೆ ವಾಪಸ್‌ ಬಸ್‌ ಹತ್ತಿ ಕುಳಿತರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡ ಕಂಡಕ್ಟರ್‌, ‘ಫ್ರೀ ಟಿಕೆಟ್‌ ಇದೆ ಎಂದು ತಮಗೆ ಇಷ್ಟ ಬಂದಲ್ಲಿ ಇಳಿಯುವುದಲ್ಲ. ಇದರಿಂದ ನಮ್ಮ ಕರ್ತವ್ಯಕ್ಕೆ ತೊಂದ್ರೆಯಾಗ್ತದೆ. ಸಸ್ಪೆಂಡ್‌ ಮಾಡ್ತಾರೆ’ ಎಂದು ಅಸಮಾಧಾನ ಹೊರಹಾಕಿದರು. ಅದಕ್ಕೆ ಮಹಿಳೆ, ‘ವಾಡಿಯಿಂದ ಮನೆಗೆ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ತಗೊಂಡು ಹೋಗಬೇಕಿತ್ತು’ ಎಂದು ಸಮಜಾಯಿಷಿ ನೀಡಿದರು. ಮಾತಿಗೆಮಾತು ಬೆಳೆಯುತ್ತಲೇ ಹಲಕರ್ಟಿ ಬಂತು. ಕೊನೆಗೆ ತನ್ನ ತಪ್ಪು ಒಪ್ಪಿಕೊಂಡ ಮಹಿಳೆ, ‘ಮತ್ತೊಮ್ಮೆ ಹೀಗೆ ಮಾಡಲ್ಲ’ ಎಂದು ಬಸ್‌ನಿಂದ ಕೆಳಗಿಳಿದರು.

ಪ್ರಕರಣ–2: ಅದೇ ಬಸ್‌ ಕೆಲವೇ ನಿಮಿಷಗಳಲ್ಲಿ ಲಾಡ್ಲಾಪುರಕ್ಕೆ ತಲುಪಿತು. ನಿರ್ವಾಹಕ ಪಕ್ಕದ ಸೀಟ್‌ನಲ್ಲಿ ಕುಳಿತ್ತಿದ್ದ ವೃದ್ಧೆಯೊಬ್ಬರು ತನ್ನ ಮೊಮ್ಮಗನೊಂದಿಗೆ ಬಸ್‌ನಿಂದ ಇಳಿಯತೊಡಗಿದರು. ಆಗ ನಿರ್ವಾಹಕ, ‘ಅಜ್ಜಿ ನಿನ್ನ ಸ್ಟಾಪ್‌ ಬಂದಿಲ್ಲ. ನಾಲವಾರ ಸ್ಟೇಷನ್‌ ಇನ್ನೂ ದೂರ ಇದೆ’ ಎಂದು ತಿಳಿಸಿದರು. ಇದಕ್ಕೆ ಆ ವೃದ್ಧೆ, ‘ಯಪ್ಪಾ ನಾ ಇಲ್ಲೇ ಇಳಿತೀನಿ. ಹಾಜಿಸರ್ವರ್‌ ದರ್ಗಾಕ್ಕೆ ಹೋಗಿ ಆಮೇಲೆ ಊರಿಗೆ ಹೋಗ್ತೀವಿ’ ಎಂದಳು. ಇದರಿಂದ ಅಸಮಾಧಾನಗೊಂಡ ಕಂಡಕ್ಟರ್‌, ‘ಅಜ್ಜಿ, ನೀವು ಹೀಗೆ ಎಲ್ಲೆಂದರಲ್ಲಿ ಇಳಿಯುವುದರಿಂದ ನನ್ ಕೆಲಸ ಹೋಗ್ತದ’ ಎಂದು ಹೇಳುತ್ತಿರುವಾಗಲೇ ಆ ಅಜ್ಜಿ ಮೊಮ್ಮಗನ ಕೈಹಿಡಿದು ಸರಸರನೇ ಇಳಿದು ಹೊರಟರು.

ಪ್ರಕರಣ–3: ‘ನನ್ನ ಗೆಳೆಯನೊಬ್ಬ ವಿಜಯಪುರ–ಕಲಬುರಗಿ ಬಸ್‌ನಲ್ಲಿ ನಿರ್ವಾಹಕನಾಗಿದ್ದಾನೆ. ವಿಜಯಪುರದಲ್ಲಿ ಬಸ್‌ ಹತ್ತಿದ ಐವರು ಮಹಿಳೆಯರು ಕಲಬುರಗಿಗೆ ಉಚಿತ ಟಿಕೆಟ್‌ ಪಡೆದು ಸಿಂದಗಿಯಲ್ಲಿ ಇಳಿದಿದ್ದಾರೆ. ಬಸ್‌ ಸಿಂದಗಿ ನಿಲ್ದಾಣದಿಂದ ಮುಂದೆ ಸಾಗುತ್ತಿದ್ದಂತೆ ಮಾರ್ಗಮಧ್ಯೆ ಇನ್‌ಸ್ಪೆಕ್ಟರ್‌ ಬಂದು ಟಿಕೆಟ್‌ ಪರಿಶೀಲಿಸಿ, ಐವರು ಮಹಿಳಾ ಪ್ರಯಾಣಿಕರು ಎಲ್ಲಿ? ಎಂದು ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ‘ನಕಲಿ ಟಿಕೆಟ್‌ ಹರಿದು ಸರ್ಕಾರಕ್ಕೆ ವಂಚಿಸಿ, ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ತಂದಿದ್ದೀರಿ ಎಂದು ಶಿಕ್ಷೆಗೆ ಗುರಿ ಮಾಡಿದರು’ ಎಂಬುದನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮತ್ತೊಂದು ಬಸ್‌ ನಿರ್ವಾಹಕ ವಿವರಿಸಿದರು.

‘ಬಸ್‌ಗಳಲ್ಲಿ ಆಸನಕ್ಕಿಂತ ಹೆಚ್ಚಿನ ಜನ ಪ್ರಯಾಣ ಮಾಡಿದ ಸಂದರ್ಭದಲ್ಲಿ ಉಚಿತ ಟಿಕೆಟ್‌ ಪಡೆದ ಮಹಿಳಾ ಪ್ರಯಾಣಿಕರನ್ನು ಕಾಯಲು ಆಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಪರಿಶೀಲನೆ ವೇಳೆ ಟಿಕೆಟ್‌ ಇನ್‌ಸ್ಪೆಕ್ಟರ್‌ ಮಾನವೀಯತೆ ಆಧಾರದಲ್ಲಿ ಸಮಸ್ಯೆ ಇತ್ಯರ್ಥಪಡಿಸಬೇಕು. ತಪ್ಪಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ನಿರ್ವಾಹಕರಿಗೆ ಎಚ್ಚರಿಕೆ ನೀಡಿ ಬಿಡಬೇಕು. ಈ ಬಗ್ಗೆ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ತಂದಿದ್ದು, ಪರಿಹಾರಕ್ಕೆ ಮನವಿ ಮಾಡಲಾಗಿದೆ’ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಗೌರವಾಧ್ಯಕ್ಷ ಭೀಮರಾವ ಯರಗೋಳ ತಿಳಿಸಿದರು.

ಚಿಲ್ಲರೆ ಸಮಸ್ಯೆ: ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಚಿಲ್ಲರೆ ಸಮಸ್ಯೆಯೂ ಹೆಚ್ಚಾಗಿದೆ. ಅಂದಾಜು ಶೇ 40ರಷ್ಟು ಮಾತ್ರ ಪುರುಷರು ಬಸ್‌ನಲ್ಲಿರುತ್ತಾರೆ. ಉಳಿದವರು ಮಹಿಳಾ ಪ್ರಯಾಣಿಕರು. ಇದರಿಂದ ಹಣ ಸಂಗ್ರಹ ಆಗುತ್ತಿಲ್ಲ. ಸಹಜವಾಗಿಯೇ ಚಿಲ್ಲರೆ ಸಮಸ್ಯೆ ಎದುರಾಗುತ್ತಿದೆ ಎಂದು ಬಸ್‌ ನಿರ್ವಾಹಕರು ಅಳಲು ತೋಡಿಕೊಳ್ಳುತ್ತಾರೆ.

ಉಚಿತ ಟಿಕೆಟ್‌ ಎಂದು ಕೆಲ ಮಹಿಳೆಯರು ಎಲ್ಲೆಂದರಲ್ಲಿ ಇಳಿಯುತ್ತಿರುವುದು ಕಂಡುಬಂದಿದೆ. ಇಂತಹ ಪ್ರಕರಣಗಳಲ್ಲಿ ನಿರ್ವಾಹಕರನ್ನು ಅಮಾನತು ಮಾಡುತ್ತಿಲ್ಲ. ನೈಜತೆ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
–ಎಂ. ರಾಚಪ್ಪ, ವ್ಯವಸ್ಥಾಪಕ ನಿರ್ದೇಶಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

‘ಮೊದಲಿನಂತೆ ಸಮಸ್ಯೆ ಇಲ್ಲ’

‘ಉಚಿತ ಟಿಕೆಟ್‌ ಪಡೆದ ಮಹಿಳೆಯರು ಮಾರ್ಗಮಧ್ಯದ ನಿಲ್ದಾಣಗಳಲ್ಲಿ ಇಳಿದು ಹೋದರೆ ಶಕ್ತಿ ಯೋಜನೆ ಜಾರಿಗೆ ಬಂದ ಮೊದಮೊದಲು ಅನುಷ್ಠಾನ ಗೊಂದಲದಿಂದ ಬಸ್‌ನಿರ್ವಾಹಕರು ಸಮಸ್ಯೆ ಎದುರಿಸಬೇಕಿತ್ತು. ಈಗ ಸಾಮಾನ್ಯ ಬಸ್‌ಗಳಲ್ಲಿ ಒಂದೆರಡು ವ್ಯತ್ಯಾಸ ಆದರೂ ಕ್ರಮ ಕೈಗೊಳ್ಳುತ್ತಿಲ್ಲ. ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ಕೂಡ ಒಂದು ಟಿಕೆಟ್‌ ವ್ಯತ್ಯಾಸ ಬಂದರೆ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೇ ವಾಸ್ತವಾಂಶ ನೋಡಿ ಕ್ರಮ ಕೈಗೊಳ್ಳುವಂತೆ ತನಿಖಾ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ. ಈ ಬಗ್ಗೆ ಸಂಸ್ಥೆಯ ಎಂ.ಡಿ ಅವರು ಕೂಡ ನಿರ್ದೇಶನ ನೀಡಿದ್ದಾರೆ’ ಎಂದು ಕೆಕೆಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT