ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೂರು ವರ್ಷಗಳಿಂದ ಕಸಾ‍ಪಕ್ಕೆ ಮಹಿಳಾ ಅಧ್ಯಕ್ಷರಿಲ್ಲ: ದೇಶಿಕೇಂದ್ರ ಸ್ವಾಮೀಜಿ

Published 27 ಫೆಬ್ರುವರಿ 2024, 16:06 IST
Last Updated 27 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಕಲಬುರಗಿ: ‘12ನೇ ಶತಮಾನದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದರಿಂದಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸಮುದಾಯದ ಮಹಿಳೆಯರು ವಚನಕಾರ್ತಿಯರಾದರು. ಸಾಹಿತ್ಯ ರಚನೆ ಮಾಡಿದರು. ಆದರೆ, ಈಗ ಶೇ 33ರಷ್ಟು ಮಹಿಳಾ ಮೀಸಲಾತಿ ಇದ್ದರೂ ನೂರು ವರ್ಷ ಪೂರೈಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಮಹಿಳೆಯನ್ನು ಆಯ್ಕೆ ಮಾಡಿಲ್ಲ’ ಎಂದು ಶ್ರೀಶೈಲಂ–ಸುಲಫಲಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ವಿಷಾದಿಸಿದರು.

ನಗರದ ಡಾ. ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಮಹಿಳೆಯರನ್ನು ಕಸಾಪದ ಅಧ್ಯಕ್ಷರನ್ನಾಗಿ ಮಾಡುವ ಔದಾರ್ಯವನ್ನು ಸಾಹಿತ್ಯ ಪ್ರೇಮಿಗಳು ತೋರಿಸಬೇಕು. ಆಯ್ದಕ್ಕಿ ಮಾರಯ್ಯನ ಹೆಂಡತಿ ಲಕ್ಕಮ್ಮ, ಸೂಳೆ ಸಂಕವ್ವೆ 12ನೇ ಶತಮಾನದಲ್ಲೇ ಸಾಧನೆ ಮಾಡಿದ್ದರು‘ ಎಂದರು.

‘ಗಡಿಜಿಲ್ಲೆಯಾದ ಕಲಬುರಗಿಯಲ್ಲಿ ಉರ್ದು, ಹಿಂದಿ, ಮರಾಠಿ ಭಾಷೆಗಳದ್ದೇ ಅಬ್ಬರ ಇದೆ. ಇಲ್ಲಿ ಕನ್ನಡದ ಕಂಪನ್ನು ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕು. ಕನ್ನಡ ಭಾಷೆ ಬರುತ್ತಿದ್ದರೂ ಬೇರೆ ಭಾಷೆ ಮಾತನಾಡುವುದನ್ನು ನಿಲ್ಲಿಸಬೇಕು‘ ಎಂದು ಸಲಹೆ ನೀಡಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ಯುವ ಕವಿಗೋಷ್ಠಿ ನಡೆಯಿತು.

‘ಪ್ರಜಾವಾಣಿ’ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್, ಕಲಾವಿದರಾದ ಸುಬ್ಬಯ್ಯ ನೀಲಾ, ಅಯಾಜುದ್ದೀನ್ ಪಟೇಲ್, ಸೈಯದ್ ನಜಿರೋದ್ದೀನ್ ಮುತ್ತವಲಿ, ಚಂದ್ರಕಾಂತ ದೇಶಮುಖ, ಮಹಾಂತಯ್ಯ ಹಿರೇಮಠ ಹುಲ್ಲೂರ, ಸಿಸ್ಟರ್ ಲಿನೆಟ್ ಸಿಕ್ವೆರಾ, ಮಹಾದೇವಿ ಪಾಟೀಲ, ಸಾವಿತ್ರಿ ಎಸ್. ಜೇವರ್ಗಿ, ಬಿ.ಎ. ಪಾಟೀಲ ಮಹಾಗಾಂವ, ಬಿ.ಎಂ. ಪಾಟೀಲ ಕಲ್ಲೂರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಅಧ್ಯಕ್ಷ, ಜಾನಪದ ವಿ.ವಿ. ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್, ಹಿರಿಯ ಚಿತ್ರಕಲಾವಿದರಾದ ಬಸವರಾಜ ಜಾನೆ, ಮಂಜುಳಾ ಜಾನೆ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಯಶವಂತರಾಯ ಅಷ್ಠಗಿ ಕಾರ್ಯಕ್ರಮ ನಿರೂಪಿಸಿದರು.

ಆರು ನಿರ್ಣಯಗಳ ಮಂಡನೆ

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆರು ನಿರ್ಣಯಗಳನ್ನು ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಂಡಿಸಿದರು.

  • ಹಂಪಿ ಉತ್ಸವದ ಮಾದರಿಯಲ್ಲಿ ಸರ್ಕಾರ ಕಲಬುರಗಿಯಲ್ಲಿ ರಾಷ್ಟ್ರಕೂಟ ಉತ್ಸವ ನಡೆಸಬೇಕು

  • ಕನ್ನಡ ಭವನದಲ್ಲಿರುವ ಬಾಪೂಗೌಡ ರಂಗಮಂದಿರದ ನವೀಕರಣ ಮೂಲಸೌಕರ್ಯಕ್ಕೆ ಕೆಕೆಆರ್‌ಡಿಬಿಯಿಂದ ₹ 5 ಕೋಟಿ ಅನುದಾನ ನೀಡಬೇಕು

  • ಕಲಬುರಗಿಯ ಪ್ರಮುಖ ಬೆಳೆ ತೊಗರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಬೇಕು

  • ಕಲ್ಯಾಣ ಕರ್ನಾಟಕದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು

  • ಸರ್ಕಾರದ ವಿವಿಧ ಅಕಾಡೆಮಿ ನೇಮಕಾತಿ ಹಾಗೂ ಪ್ರಶಸ್ತಿಗಳಿಗೆ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಶ್ರೇಷ್ಠ ಸಾಹಿತಿಗಳ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು

  • ಕಲಬುರಗಿಯಲ್ಲಿ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಸ್ಥಾಪಿಸಬೇಕು

ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಶರಣರು ಸಂತರು ನಡೆದಾಡಿದ್ದರಿಂದ ಈ ನೆಲಕ್ಕೆ ಒಂದು ಸಂಸ್ಕಾರವಿದೆ. ಹೀಗಾಗಿಯೇ ಉತ್ತಮ ಸಾಹಿತ್ಯ ರಚನೆಯಾಗಿದೆ
ಪ್ರೊ. ಲಿಂಗಣ್ಣ ಗೋನಾಲ, ಕನ್ನಡ ವಿಭಾಗದ ಮುಖ್ಯಸ್ಥ, ಉಸ್ಮಾನಿಯಾ ವಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT