ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಒಆರ್‌ಎಸ್‌ ಪ್ಯಾಕೆಟ್‌, ಆಂಬುಲೆನ್ಸ್ ಸಜ್ಜಾಗಿರಿಸಿ’

ಮತದಾರರನ್ನು ಆಕರ್ಷಿಸುವಂತೆ ಮಾದರಿ ಮತಗಟ್ಟೆಗಳ ಸ್ಥಾಪಿಸಲು ಸಲಹೆ
Published 30 ಏಪ್ರಿಲ್ 2024, 6:07 IST
Last Updated 30 ಏಪ್ರಿಲ್ 2024, 6:07 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಥಮ ಚಿಕಿತ್ಸಾ ಕಿಟ್, ಒಆರ್‌ಎಸ್‌ ಪ್ಯಾಕೆಟ್‌ ಒದಗಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 4ರಿಂದ 5ರಂತೆ ಆಂಬುಲೆನ್ಸ್‌ ವಾಹನಗಳನ್ನು ನಿಯೋಜಿಸಿ ಸನ್ನದ್ಧವಾಗಿರಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಸೂಚಿಸಿದರು.

ಸೋಮವಾರ ತಮ್ಮ ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಮಾದರಿ ಮತಗಟ್ಟೆ ಸ್ಥಾಪನೆ, ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ‌ ಕಲ್ಪಿಸುವ ಸಂಬಂಧ ಕರೆಯಲಾದ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲಿಯಾದರೂ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಅರ್ಧ ಗಂಟೆ ಒಳಗೆ ಆಂಬುಲೆನ್ಸ್ ಸೇವೆ ಲಭಿಸಬೇಕು. ಇದಲ್ಲದೆ ತಾಲ್ಲೂಕು ಕೇಂದ್ರಸ್ಥಾನದಲ್ಲಿ 4-5 ಹಾಸಿಗೆ ಮೀಸಲಿಟ್ಟು, ಮೇ‌ 6 ಮತ್ತು 7 ರಂದು ಕಡ್ಡಾಯವಾಗಿ ವೈದ್ಯರು ಇರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಅವರಿಗೆ ನಿರ್ದೇಶನ ನೀಡಿದರು.

‘ಪ್ರತಿ ಮತಗಟ್ಟೆಗೆ ನಿಗದಿಯಾದ‌ ಆಂಬುಲೆನ್ಸ್ ವಾಹನ, ಚಾಲಕರ ಮೊಬೈಲ್ ಸಂಖ್ಯೆ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು’ ಎಂದರು.

ಮತಗಟ್ಟೆ ಅಂದಗಾಣಿಸಿ: ‘ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಆಕರ್ಷಿಸುವಂತೆ ಮಾದರಿ ಮತಗಟ್ಟೆಗಳನ್ನು ಸುಣ್ಣ-ಬಣ್ಣದ ಜೊತೆಗೆ ಕನಿಷ್ಠ ಮೂಲಸೌಕರ್ಯ ಒಳಗೊಂಡಂತೆ ಸ್ಥಾಪಿಸಬೇಕು’ ಎಂದು ಫೌಜಿಯಾ ತರನ್ನುಮ್ ಸೂಚಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಸಖಿ ಮತಗಟ್ಟೆ, ತಲಾ‌ ಒಂದು ಮಾದರಿ ಮತಗಟ್ಟೆ, ಯುವ ಮತಗಟ್ಟೆ, ಅಂಗವಿಕಲ ಸ್ನೇಹಿತ ಮತಗಟ್ಟೆ ನಿರ್ಮಿಸಬೇಕು. ಈ ಮತಗಟ್ಟೆಗಳು ಕನಿಷ್ಠ ಮೂಲಸೌಕರ್ಯಗಳ ಜೊತೆಗೆ ಕುಡಿಯುವ ನೀರು, ಶೌಚಾಲಯ ಹೊಂದಿರಬೇಕು. ವಿಶೇಷ ಮತಗಟ್ಟೆಗಳು ಸಂದೇಶ ಸಾರುವಂತಿರಬೇಕು’ ಎಂದರು.

‘ಮಾದರಿ ಮತಗಟ್ಟೆಗಳ ಸ್ಥಾಪನೆಗೆ ಸ್ವೀಪ್ ಸಮಿತಿ ಅಥವಾ ಸ್ಥಳೀಯ ಪೌರ ಸಂಸ್ಥೆ, ಗ್ರಾಮ ಪಂಚಾಯಿತಿಯಿಂದ ಅನುದಾನ ಭರಿಸಬೇಕು. ಏ.30ರಿಂದ ಕೆಲಸ‌ ಆರಂಭಿಸಿ ಮೇ‌ 3ರೊಳಗೆ ಸಿವಿಲ್ ಕೆಲಸ ಮತ್ತು ಮೇ‌ 6ರ ಮಧ್ಯಾಹ್ನದೊಳಗೆ ಅಲಂಕಾರ ಕಾರ್ಯ ಮುಗಿಸಬೇಕು’ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಮತಗಟ್ಟೆಯ ಪೋಲಿಂಗ್ ಸಿಬ್ಬಂದಿ, ಮೈಕ್ರೋ‌ ವೀಕ್ಷಕರು, ಬಿ.ಎಲ್.ಓ, ಪೊಲೀಸ್ ಹಾಗೂ ಇತರೆ ಸಿಬ್ಬಂದಿಗಳಿಗೆ‌ ಮೇ‌ 6 ಮತ್ತು 7ರಂದು ಅಕ್ಷರ ದಾಸೋಹ ಶಾಖೆಯಿಂದ ಸಮಯಕ್ಕೆ ಸರಿಯಾಗಿ ಉಪಾಹಾರ, ಊಟ ಪೂರೈಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚಿಸಿದ ಫೌಜಿಯಾ ತರನ್ನುಮ್, ‘ಡಿ.ಡಿ.ಪಿ.ಐ, ಡಿ.ಡಿ.ಪಿ.ಯು ಇದರ‌ ಮೇಲುಸ್ತುವಾರಿ ವಹಿಸಬೇಕು’ ಎಂದರು.

ಕನಿಷ್ಠ ಸೌಕರ್ಯ ಖಾತ್ರಿಪಡಿಸಿಕೊಳ್ಳಿ: ಜಿಲ್ಲೆಯ ಪ್ರತಿ ಮತಗಟ್ಟೆ ನೀರು, ಶೌಚಾಲಯ, ರ‌್ಯಾಂಪ್, ಅಗತ್ಯವಿದ್ದೆಡೆ ಶಾಮಿಯಾನ, ವಿದ್ಯುತ್, ಕಾಯುವ ಕೊಠಡಿ, ಕೊಠಡಿಗಳ ದುರಸ್ತಿ ಒಳಗೊಂಡಂತೆ ಕನಿಷ್ಠ ಮೂಲಸೌಕರ್ಯ ಇರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಇ.ಒ ಮತ್ತು ಪೌರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತರನ್ನುಮ್ ನಿರ್ದೇಶನ ನೀಡಿದರು.

ಕರಪತ್ರ ಬಿಡುಗಡೆ: ಇದೇ‌ ಸಂದರ್ಭದಲ್ಲಿ ಪ್ರತಿ ಸರ್ಕಾರಿ, ಖಾಸಗಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಕಚೇರಿಯಲ್ಲಿ ಮತದಾರರ ಜಾಗೃತಿ ವೇದಿಕೆ ಸ್ಥಾಪಿಸಿದ್ದು, ಅದರ‌ ವಿವರವುಳ್ಳ ಕರಪತ್ರಗಳನ್ನು ಬಿ.ಫೌಜಿಯಾ ತರನ್ನುಮ್ ಅವರು ಬಿಡುಗಡೆ ಮಾಡಿದರು.

ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್ ಅವರು ಸ್ವೀಪ್ ಚಟುವಟಿಕೆ ಮತ್ತು ಮತದಾರರ ಜಾಗೃತಿ ವೇದಿಕೆ ರಚನೆಯ ಉದ್ದೇಶ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್ ದೌಲಾ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ತಾಲ್ಲೂಕು ಪಂಚಾಯಿತಿ ಇಒಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಹಾಗೂ ಪೌರ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT