ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಸರಣಿ ಸಮಸ್ಯೆಗಳು: ಮಳೆಗಾಲಕ್ಕೆ ಸಾಲದ ಸಿದ್ಧತೆ

Published 27 ಮೇ 2024, 5:04 IST
Last Updated 27 ಮೇ 2024, 5:04 IST
ಅಕ್ಷರ ಗಾತ್ರ

ಕಲಬುರಗಿ: ವರುಣ ಕೃಪೆ ತೋರಿ ಮಳೆ ಸುರಿಸುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಆದರೆ, ನಗರ, ಪಟ್ಟಣಗಳ ನಿವಾಸಿಗಳಿಗೆ ಮಳೆ ಶುರುವಾಗುತ್ತಿದ್ದಂತೆಯೇ ಮೈ ಕಂಪಿಸುತ್ತದೆ. ಮಳೆ ತಂದೊಡ್ಡುವ ಸಮಸ್ಯೆಗಳ ಸರಮಾಲೆಗೆ ಯಾತನೆ ಅನುಭವಿಸುತ್ತಾರೆ.‌

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಾಲುವೆ ಜಾಲಗಳು ಸೇರಿ 24 ಕಿ.ಮೀ ಇದೆ. ಇದರಲ್ಲಿ ಕೆಲವೆಡೆ ಒತ್ತುವರಿಗೆಯಾಗಿ ಕಟ್ಟಡ ನಿರ್ಮಾಣಗೊಂಡಿದ್ದರೆ, ಹಲವೆಡೆ ಮಣ್ಣು, ಪ್ಲಾಸ್ಟಿಕ್, ಗಿಡ ಗಂಟಿಗಳಿಂದ ಆವೃತವಾಗಿವೆ.

ಗಂಜ್ ಪ್ರದೇಶ, ಸೂರ್ಯನಗರ, ಜ್ಯೋತಿನಗರ, ಪೂಜಾ ಕಾಲೊನಿ, ಯಮುನಾ ಕಾಲೊನಿ, ಜಿಡಿಎ ಬಡಾವಣೆ ಸೇರಿ ಹಲವೆಡೆ ಮುಖ್ಯ ಚರಂಡಿ, ಒಳಚರಂಡಿ, ಅಡ್ಡರಸ್ತೆ ಸೌಲಭ್ಯವಿಲ್ಲ. ಶೆಟ್ಟಿ ಕಾಂಪ್ಲೆಕ್ಸ್‌– ಅಗ್ನಿಶಾಮಕ ಠಾಣೆ – ಕೋಟೆ ಗೋಡೆ– ಚಿಲ್ಡ್ರನ್‌ ಪಾರ್ಕ್‌ – ಧೋಬಿಘಾಟ್ ಮೂಲಕ ಸಾಗುವ ರಾಜಕಾಲುವೆಯ ಚರಂಡಿಯು ಮಳೆಗಾಲದಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಬುಡ್ಗ ಜಂಗಮ, ಗುಲ್ಲಾಬಾವಡಿ, ರಾಜಾಪುರ, ಮಾಂಗರವಾಡಿ, ಹೀರಾನಗರ, ವಿಜಯನಗರ, ಬಾಪುನಗರ ಸೇರಿದಂತೆ ಇತರೆ ಸ್ಲಂಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನರಕ ಸದೃಶ ಬದುಕನ್ನು ಮಳೆಗಾಲ ಪರಿಚಯಿಸುತ್ತದೆ ಎನ್ನುತ್ತಾರೆ ಸ್ಥಳೀಯರು.

ಮಹಾನಗರ ಪಾಲಿಕೆಗಳ ಪೈಕಿ ಕಲಬುರಗಿಯಲ್ಲೇ 173 ಅನಧಿಕೃತ ಬಡಾವಣೆಗಳಿವೆ. ನೈಸರ್ಗಿಕ ಚರಂಡಿಗಳು, ಕೆರೆಗಳು, ಜಲಾನಯನ ಪ್ರದೇಶಗಳು, ಬಯಲು ಪ್ರದೇಶಗಳಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿದ್ದು, ಅಲ್ಲಲ್ಲಿ ಮಳೆ ನೀರು ನಿಂತು, ಕೆಲವೆಡೆ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ.

ಜಾಜಾ ಬಂದಾ ನವಾಜ್ ದರ್ಗಾ ಪ್ರದೇಶದಿಂದ ಸಾಯಿ ನಗರದತ್ತ ಹರಿಯುವ ರಾಜಕಾಲುವೆಯ ಹಲವೆಡೆ ಮಣ್ಣು, ಪ್ಲಾಸ್ಟಿಕ್, ಗಿಡ ಗಂಟಿ ತುಂಬಿಕೊಂಡಿದೆ. ಕಾಲುವೆಯ ಎರಡೂ ಬದಿಯಲ್ಲಿ ಮುಳ್ಳುಕಂಟಿ, ಕುರುಚಲು ಗಿಡಗಳು ಬೆಳೆದಿವೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ವೀರೇಶ ನಗರ ವ್ಯಾಪ್ತಿಯಲ್ಲಿ ರಾಜಕಾಲುವೆಯ ಕೊಳಚೆ ನೀರು ಜಮೀನುಗಳಲ್ಲಿ ನಿಂತು ಸಹಿಸಲು ಸಾಧ್ಯವಾಗದಷ್ಟು ವಾಸನೆ ಹರಡುತ್ತಿದೆ.

ಗುಂಡಿ ಮುಚ್ಚದಿದ್ದರೆ ಗಂಡಾಂತರ: ಕಟ್ಟಡ ನಿರ್ಮಾಣ, ಚರಂಡಿಗಾಗಿ ತೋಡಿರುವ ಗುಂಡಿಗಳನ್ನು ಮುಚ್ಚದೆ ಇದ್ದರೆ ಗಂಡಾಂತರ ಎದುರಾಗುವ ಸಂಭವವಿದೆ. ಕಳೆದ ವರ್ಷದ ಜುಲೈ 23 ಮತ್ತು 24ರಂದು ಮಳೆ ನೀರು ತುಂಬಿದ್ದ ಗುಂಡಿಗಳಲ್ಲಿ ಬಿದ್ದು 4 ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದರು. ಹೀಗಾಗಿ, ಈ ಬಾರಿ ಅಂತಹ ಅವಘಡಗಳು ಮರುಕಳಿಸದಂತೆ ಮಹಾನಗರ ಪಾಲಿಕೆ ಎಚ್ಚರ ವಹಿಸಬೇಕು ಎನ್ನುತ್ತಾರೆ ನಿವಾಸಿಗಳು.

ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಪರದಾಡುತ್ತಾ ಸಾಗಿದ ಬೈಕ್ ಸವಾರರು
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಪರದಾಡುತ್ತಾ ಸಾಗಿದ ಬೈಕ್ ಸವಾರರು
ಕಲಬುರಗಿಯ ದರ್ಗಾ ರಸ್ತೆಯ ಚರಂಡಿಯಲ್ಲಿ ತುಂಬಿದ ಮಣ್ಣು ಪ್ಲಾಸ್ಟಿಕ್ ತ್ಯಾಜ್ಯ
ಕಲಬುರಗಿಯ ದರ್ಗಾ ರಸ್ತೆಯ ಚರಂಡಿಯಲ್ಲಿ ತುಂಬಿದ ಮಣ್ಣು ಪ್ಲಾಸ್ಟಿಕ್ ತ್ಯಾಜ್ಯ
ಪಾಲಿಕೆಯ ಅಧಿಕಾರಿಗಳ ಕಾಟಾಚಾರದ ಸಿದ್ಧತೆ ಕ್ರಮಗಳಿಂದ ಪ್ರತಿ ವರ್ಷ ಎದುರಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಸುಸಜ್ಜಿತವಾದ ಯೋಜನೆಗಳನ್ನು ಹಾಕಿಕೊಳ್ಳಬೇಕು
-ಅಲ್ಲಮಪ್ರಭು ನಿಂಬರ್ಗಾ ಸ್ಲಂ ಜನಾಂದೋಲನ ಸಮಿತಿ ಮುಖಂಡ
ದರ್ಗಾ ರಸ್ತೆಯ ರೋಜಾ ಪೊಲೀಸ್ ಠಾಣೆ ಸಮೀಪದ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡು ಗಬ್ಬು ವಾಸನೆ ಹಬ್ಬುತ್ತಿದೆ ಸ್ವಚ್ಛಗೊಳಿಸುವಂತೆ ಪಾಲಿಕೆಗೆ ಮನವಿ ಮಾಡಿದರು ಸ್ಪಂದಿಸಿಲ್ಲ
ವಾಸಿಂ ಮೋಮಿನಪುರ ನಿವಾಸಿ

‘ಸಕಲ ಸಿದ್ಧತೆ ತ್ವರಿತ ಸ್ಪಂದನೆ ತಂಡ ರಚನೆ’

‘ಮಳೆಗಾಲವನ್ನು ಎದುರಿಸಲು ಪಾಲಿಕೆಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಳೆ ನೀರು ನುಗ್ಗಿ ತಂದೊಡ್ಡುವ ಸಮಸ್ಯೆಗಳ ನಿರ್ವಹಣೆಗೆ ತ್ವರಿತ ಸ್ಪಂದನೆ ತಂಡವನ್ನು ರಚಿಸಲಾಗಿದೆ. ವಲಯ ಆಯುಕ್ತರ ನೇತೃತ್ವದಲ್ಲಿ ಕಿರಿಯ ಎಂಜಿನಿಯರ್ ಆರೋಗ್ಯ ಅಧಿಕಾರಿಗಳ ತಂಡಗಳು ಕಾರ್ಯನಿರ್ವಹಿಸಲಿವೆ’ ಎಂದು ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವಾರದಿಂದ ಚರಂಡಿಗಳ ಸ್ವಚ್ಛತೆಯು ಭರದಿಂದ ಸಾಗುತ್ತಿದ್ದು ಕೆಲವು ದಿನಗಳಲ್ಲಿ ಮುಗಿಯಲಿದೆ. ಸೂಕ್ಷ್ಮ ಮತ್ತು ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದರು. ‘ನಿರ್ಮಾಣ ಪ್ರದೇಶದಲ್ಲಿ ಮುನ್ನೆಚ್ಚರಿಕೆಯಿಂದ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಸುತ್ತಲೂ ಬೇಲಿ ಹಾಕುವಂತೆ ಸಭೆ ನಡೆಸಿ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಓವರ್ ಹೆಡ್‌ ಟ್ಯಾಂಕ್‌ಗಳನ್ನೂ ಸ್ವಚ್ಛ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘50 ಕಾರ್ಮಿಕರ ನಿಯೋಜನೆ: ₹ 10 ಲಕ್ಷ ಮೀಸಲು’

‘ಪಾಲಿಕೆಯು 50 ಕಾರ್ಮಿಕರನ್ನು ನಿಯೋಜನೆ ಮಾಡಿ ಚರಂಡಿಗಳ ಸ್ವಚ್ಛತೆ ಮಾಡುತ್ತಿದೆ. ಹೆಚ್ಚುವರಿಯಾಗಿ 50 ಕಾರ್ಮಿಕರನ್ನು ನಿಯೋಜನೆಯೂ ಮಾಡಲಾಗುವುದು. ಪಾಲಿಕೆಯದ್ದೇ ಯಂತ್ರ ವಾಹನಗಳು ಇರುವುದರಿಂದ ₹ 10 ಲಕ್ಷ ಅನುದಾನವನ್ನು ಮಳೆ ಸಂಬಂಧಿತ ಕಾರ್ಯಾಚರಣೆಗೆ ಮೀಸಲಿಡಲಾಗಿದೆ’ ಎಂದು ಪಾಲಿಕೆಯ ಉಪ ಆಯುಕ್ತ ಆರ್.ಪಿ. ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಮಿನಿ ಇಟಾಚಿ ಐದಾರು ಜೆಸಿಬಿಗಳು ಚರಂಡಿ ಸ್ವಚ್ಛತೆಯಲ್ಲಿ ನಿರತವಾಗಿವೆ. ಅಲ್ಲಲ್ಲಿ ರಾಜಕಾಲುವೆ ಒತ್ತವರಿಯಾಗಿದ್ದು ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ. ಸಿದ್ದಿ ಪಾಷಾ ದರ್ಗಾ ಬಳಿಯ ಮುಖ್ಯರಸ್ತೆಗೆ ಸ್ಲ್ಯಾಬ್ ಹಾಕಬೇಕಿದ್ದು ಪಿಡಬ್ಲ್ಯುಡಿ ಕಾಮಗಾರಿ ನಡೆಸುತ್ತಿದೆ. ಹಳೆಯ ಜೇವರ್ಗಿ ರಸ್ತೆ ಕೋರ್ಟ್ ರಸ್ತೆ ಸೇರಿದಂತೆ ಹಲವೆಡೆಗಳ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು’ ಎಂದರು.

ಮಳೆ ನೀರು ನಿಲ್ಲುವ ರಸ್ತೆ ಪ್ರದೇಶಗಳು

ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ರೈಲ್ವೆ ಅಂಡರ್‌ಪಾಸ್‌ ವಿದ್ಯಾನಗರದ ಎಸ್‌ಬಿಆರ್ ಕಾಲೇಜು ರಸ್ತೆ ಸಂಗಮೇಶ್ವರ ಕಾಲೊನಿಯ ರಸ್ತೆ ಎನ್‌ವಿ ಮೈದಾನ–ಸಾರ್ವಜನಿಕ ಉದ್ಯಾನ ರಸ್ತೆ ಸಿದ್ದಿ ಪಾಷಾ ದರ್ಗಾ ಆನಂದ್ ಹೋಟೆಲ್‌ ವೃತ್ತ ಬಂಬೂ ಬಜಾರ್ ಹಳೆ ಜೇವರ್ಗಿ ರಸ್ತೆಯ ಮಹಿಳಾ ಪದವಿ ಕಾಲೇಜು ಮುಂಭಾಗ ಹಳೇ ಜೇವರ್ಗಿ ರಸ್ತೆಯ ರೈಲ್ವೆ ಅಂಡರ್‌ಪಾಸ್ ಖರ್ಗೆ ಪೆಟ್ರೋಲ್ ಬಂಕ್ ಲಾಲಗೇರಿ ಕ್ರಾಸ್ ಸೇರಿ ಇತರೆಡೆ ಮಳೆ ನೀರು ನಿಲ್ಲುವುದು ಸಾಮಾನ್ಯವಾಗಿದೆ.

ಶಹಾಬಾದ್: ಚರಂಡಿಗಳ ಸ್ವಚ್ಛತೆ

ಶಹಾಬಾದ್: ಸ್ವಲ್ಪವೇ ಮಳೆ ಬಿದ್ದರೆ ಮಳೆಯ ನೀರು ಚರಂಡಿಯಲ್ಲಿ ಹರಿದು ಹೋಗದೆ ರಸ್ತೆಯ ಮೇಲೆ ನಿಲ್ಲುತ್ತದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತೆ ಸ್ಥಿತಿ ನಿರ್ಮಾಣವಾಗುತ್ತದೆ. ಜೋರಾಗಿ ಮಳೆ ಸುರಿದರೆ ಭೀಮಶಪ್ಪ ನಗರದಲ್ಲಿನ ಹಳ್ಳದ ಬ್ರಿಡ್ಜ್‌ ಮೇಲೆ ನೀರು ಹರಿದು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ವರ್ಷ ಮುಂಜಾಗ್ರತ ಕ್ರಮವಾಗಿ ಹಳ್ಳದಲ್ಲಿನ ತ್ಯಾಜ್ಯ ತೆಗೆದು ಸ್ವಚ್ಛ ಮಾಡಲಾಗಿದೆ. ‘ಮಳೆಯಿಂದ ತುಂಬುವಂತಹ ಚರಂಡಿಗಳನ್ನು ಗುರುತಿಸಿ ಸ್ವಚ್ಛ ಮಾಡಲಾಗಿದೆ.

ಮಳೆ ಸಂಬಂಧಿತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ 8 ಜನರ ತಂಡ ರಚಿಸಲಾಗಿದೆ’ ಎನ್ನುತ್ತಾರೆ ನಗರ ಸಭೆಯ ಪೌರಾಯುಕ್ತ ಕೆ ಗುರುಲಿಂಗಪ್ಪ. ‘ಮಳೆಯ ನೀರಿನಿಂದ ಜನರ ಆರೋಗ್ಯ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳಿಗೆ ನಿತ್ಯ ಶುದ್ಧೀಕರಣದ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಗಿದೆ. ಎರಡು ಫಾಗಿಂಗ್‌ ಯಂತ್ರಗಳನ್ನು ಖರೀದಿಸಲಾಗಿದೆ’ ಎಂದರು.

ನಗರದಲ್ಲಿ ಹಾದು ಹೋದ ಪ್ರಮುಖ ಕಾಲುವೆಗಳು

ಕುಸನೂರು– ಶಹಾಬಾದ್ ರಸ್ತೆ ಗೀತಾ ಸಾಮಿಲ್‌– ರಂಗ ಮಂದಿರ (ಜಗತ್ ವೃತ್ತ)

ಇಕ್ಬಾಲ್‌ ಕಾಲೊನಿ– ಹಿರಾಪುರ (ಹುಸೇನ್‌ ಗಾರ್ಡನ್‌)

ಪಿಡಿಎ ಎಂಜಿನಿಯರ್ ಕಾಲೇಜ್ ಅಂಡರ್ ಬ್ರಿಡ್ಜ್– ರಿಂಗ್ ರೋಡ್ (ವಾಯಾ ದರಿಯಾಪುರ ಲೇಔಟ್)

ದರ್ಗಾ ಪಾಯನ್ ರಸ್ತೆ– ಎಂ.ಬಿ. ನಗರ ಎಂ.ಬಿ. ನಗರ– ರೈಲು ಮಾರ್ಗ (ವಾಯಾ ರಾಜಪುರ)

ರಂಗ ಮಂದಿರ– ರಾಜಪುರ(ವಾಯಾ ಏಷ್ಯನ್ ಮಾಲ್)

ರಿಂಗ್ ರೋಡ್– ತಿಮ್ಮಾಪೂರಿ ಲೇಔಟ್‌ ಮಹಾದೇವ ನಗರ–ರಂಗ ಮಂದಿರ

(ವಾಯಾ ಲಾಲಗಿರಿ) ಕೇಂದ್ರ ಬಸ್ ನಿಲ್ದಾಣ– ಶಕ್ತಿ ನಗರ ರೈಲ್ವೆ ಹಳಿ ಮಾರ್ಗ ದತ್ತ ನಗರ– ರಿಂಗ್ ರೋಡ್ (ವಾಯಾ ಜಯತೀರ್ಥ ಕಲ್ಯಾಣ ಮಂಟಪ)

ರಿಂಗ್‌ ರೋಡ್ ಪೀರ್‌ ಬಂಗ್ಲಿ ದರ್ಗಾ– ಕೆಬಿಎನ್‌ ಮುಖ್ಯ ರಸ್ತೆ

ಪೂರಕ ಮಾಹಿತಿ: ನಿಂಗಣ್ಣ ಜಂಬಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT