ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಬಾರದ ಫಸಲು, ಹೆಸರು ಬೆಳೆ ನಾಶ

ಬಿತ್ತನೆಗೆ ಮಾಡಿದ್ದ ಖರ್ಚು ಸಿಗದ ಸ್ಥಿತಿಗೆ ಮರುಗಿದ ರೈತರು
Published 19 ಆಗಸ್ಟ್ 2023, 6:28 IST
Last Updated 19 ಆಗಸ್ಟ್ 2023, 6:28 IST
ಅಕ್ಷರ ಗಾತ್ರ

ವಾಡಿ: ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕೆನ್ನಾಲಿಗೆಗೆ ಹೆಸರು ಬೆಳೆಗಾರರು ಅಕ್ಷರಶಃ ನಲುಗಿ ಹೋಗಿದ್ದಾರೆ. ನಿರೀಕ್ಷಿತ ಫಸಲು ಬಾರದೇ ರೈತರು ಹತಾಶೆಯಿಂದ ಬೆಳೆಯನ್ನೇ ಹರಗುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಕಪ್ಪು ಹಾಗೂ ಕೆಂಪು ಮಣ್ಣು ಪ್ರದೇಶಗಳಲ್ಲಿ ತೇವಾಂಶ ಕೊರತೆಯಿಂದ ಹೆಸರಿನ ಫಸಲು ಸಮೃದ್ಧವಾಗಿ ಬಾರದಿರುವುದು ರೈತರ ಚಿಂತೆಗೆ ಕಾರಣವಾಗಿದೆ.

ಬಿತ್ತನೆಗಾಗಿ ಮಾಡಿದ್ದ ಖರ್ಚೂ ಸಿಗದಿದ್ದರಿಂದ ರೈತರು ಮರಗುತ್ತಿದ್ದಾರೆ. ಮೈತುಂಬಾ ಕಾಯಿ ತುಂಬಿಕೊಂಡು ಹಚ್ಚ ಹಸಿರಿನಿಂದ ನಳನಳಿಸುತ್ತ ರೈತರ ಮುಖದಲ್ಲಿ ಮಂದಹಾಸ ಮೂಡಿಸಬೇಕಾಗಿದ್ದ ಮುಂಗಾರು ಹೆಸರು ಈ ವರ್ಷ ರೈತರ ಕಣ್ಣೀರಿಗೆ ಕಾರಣವಾಗುತ್ತಿದೆ.

ಮಳೆ ಕೊರತೆಯಿಂದ ಹೆಸರು ಉತ್ತಮವಾಗಿ ಬೆಳೆದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕಾಯಿ ಕಟ್ಟದೇ ಒಣಗಿದೆ. ಗಿಡದಲ್ಲಿ 2–3 ಕಾಯಿಗಳು ಮಾತ್ರ ಇದ್ದು, ಬಿಡಿಸಿದ ಕೂಲಿ ಹಣವೂ ಬರುವುದಿಲ್ಲ ಎಂದು ತಿಳಿದ ರೈತರು ಸಂಪೂರ್ಣ ಬೆಳೆಯನ್ನೇ ಹರಗಿ ಮಣ್ಣಿಗೆ ಸೇರಿಸುತ್ತಿದ್ದಾರೆ.

ಲಾಡ್ಲಾಪುರ, ಹಲಕರ್ಟಿ, ಯಾಗಪುರ, ರಾವೂರು, ಕೊಲ್ಲೂರು, ಬಳವಡಗಿ, ತರಕಸ್ಪೇಟ್ ಸೇರಿ ವಿವಿಧೆಡೆ ಹೆಸರು ಬೆಳೆ ಹರಗುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.

ಅಲ್ಪ ಕಾಲಾವಧಿಯ ಹೆಸರು ಬೆಳೆ ಜೂನ್ ತಿಂಗಳಲ್ಲಿ ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಮಳೆ ಕೊರತೆ, ನಂತರ ನಿರಂತರ ಸುರಿದ ಮಳೆ ಹೀಗೆ ಅನಾವೃಷ್ಟಿ ಹಾಗೂ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಬೆಳೆ ಹಾಳಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಅಲ್ಪ ಕಾಲದಲ್ಲಿಯೇ ಕೈತುಂಬಾ ದುಡ್ಡು ತಂದು ಕೊಡುತ್ತದೆ ಎನ್ನುವ ವಿಶ್ವಾಸದಲ್ಲಿ ಬಿತ್ತನೆ ಮಾಡಿದ್ದ ರೈತರು, ಈಗ ಬಿತ್ತನೆ ಬೀಜ, ರಸಗೊಬ್ಬರ, ಬಿತ್ತನೆ ಕೂಲಿ ಎಲ್ಲವೂ ಮಣ್ಣು ಪಾಲಾಗುತ್ತಿರುವುದನ್ನು ನೋಡಿ ಮಮ್ಮಲ ಮರಗುತ್ತಿದ್ದಾರೆ.

ಚಿತ್ತಾಪುರ ತಾಲ್ಲೂಕಿನಲ್ಲಿ ಒಟ್ಟು 4,100 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬೆಳೆಯಾಗಿ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಗಿಡ ಬೆಳೆಯದಿರುವುದು, ಕಾಯಿ ಕಟ್ಟದಿರುವುದು ಹಾಗೂ ಬೆಳೆಗಳ ಮಧ್ಯೆ ವ್ಯಾಪಕವಾಗಿ ಕಳೆ ಬೆಳೆದಿರುವುದರಿಂದ ಕಂಗೆಟ್ಟಿರುವ ರೈತರು ಅನಿವಾರ್ಯವಾಗಿ ಹೆಸರು ಬೆಳೆ ಹರಗುತ್ತಿದ್ದಾರೆ.

ವಾಡಿ ಸಮೀಪದ ಹಲಕರ್ಟಿ ಗ್ರಾಮದ ಜಮೀನೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಹೆಸರು ಬೆಳೆ ಹರಗುತ್ತಿರುವುದು
ವಾಡಿ ಸಮೀಪದ ಹಲಕರ್ಟಿ ಗ್ರಾಮದ ಜಮೀನೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಹೆಸರು ಬೆಳೆ ಹರಗುತ್ತಿರುವುದು
ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೆ. ಸಕಾಲಕ್ಕೆ ಮಳೆ ಬಾರದಿರುವುದರಿಂದ ಹೆಸರು ಕಾಯಿ ಕಟ್ಟಲಿಲ್ಲ. ಹೀಗಾಗಿ ನಾವು ಇಡೀ ಬೆಳೆ ಹರಗುತ್ತಿದ್ದೇವೆ.
-ಶರಣಪ್ಪ ಮದ್ರಿ ಹಲಕರ್ಟಿ ರೈತ
ಮಳೆಯ ಕೊರತೆಯಿಂದ ಬಿತ್ತನೆ ವಿಳಂಬವಾಗಿರುವುದು ಹೆಸರು ಬೆಳೆಯ ಇಳುವರಿ ಕುಂಠಿತಕ್ಕೆ ಪ್ರಮುಖ ಕಾರಣವಾಗಿದೆ.
-ಸಂಜೀವಕುಮಾರ ಮಾನಕರ ಕೃಷಿ ಸಹಾಯಕ ನಿರ್ದೇಶಕ ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT