ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಂತ್ರ ಜಪಿಸಿದ ನಾಯಕರು...!

ಕಲಬುರಗಿಯ ಎನ್.ವಿ. ಮೈದಾನದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಎಲ್ಲ ಸೀಟು ಗೆಲ್ಲುವ ಸಂಕಲ್ಪ
Published 17 ಮಾರ್ಚ್ 2024, 5:06 IST
Last Updated 17 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಕೆಲ ಗಂಟೆಗಳ ಮುನ್ನ ನಗರದ ಎನ್.ವಿ. ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದ ರಾಜ್ಯದ ಘಟಾನುಘಟಿ ನಾಯಕರು, ರಾಜ್ಯದ ಎಲ್ಲ 28 ಸೀಟುಗಳನ್ನೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟವೇ ಪಡೆಯುವ ಸಂಕಲ್ಪ ಮಾಡಿದರು.

ಜೊತೆಗೆ, ಮೋದಿ ಮಂತ್ರವನ್ನೂ ಜಪಿಸುವ ಮೂಲಕ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ‘ಮೋದಿ ನಾಮಬಲ’ ಎಷ್ಟು ಅಗತ್ಯ ಎಂಬುದನ್ನು ಮನದಟ್ಟು ಮಾಡಿದರು.

‘ಅಬ್‌ ಕಿ ಬಾರ್ 400 ಪಾರ್’, ‘ಅಬ್ ಕಿ ಬಾರ್ ಮೋದಿ ಸರ್ಕಾರ್’, ‘ಮೋದಿ ಮೂರನೇ ಬಾರಿ ಪ್ರಧಾನಿಯಾಗಿಸುವ ಸಂಕಲ್ಪ ಮಾಡೋಣ’, ‘ರಾಮಮಂದಿರ ಕಟ್ಟಿದ ಮೋದಿಜಿಗೆ ನಮ್ಮ ಮತ’ ಎಂಬ ಘೋಷಣೆಗಳನ್ನು ಕೂಗಿದರು.

ಮೋದಿ ಅವರು ವೇದಿಕೆಗೆ ಬರುವುದಕ್ಕೆ ಮುನ್ನವೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದ ಡಾ. ಉಮೇಶ ಜಾಧವ, ಮಾಜಿ ಶಾಸಕ ರಾಜೂಗೌಡ (ನರಸಿಂಹನಾಯಕ), ಪಕ್ಷದ ವಿಭಾಗೀಯ ಪ್ರಭಾರಿ ಈಶ್ವರಸಿಂಗ್ ಠಾಕೂರ್ ತಮ್ಮ ಮಾತುಗಳನ್ನು ಮುಗಿಸಿದ್ದರು. ಪ್ರಧಾನಿ ಬಂದ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರನ್ನು ಮಾತನಾಡಲು ಆಹ್ವಾನಿಸಲಾಯಿತಾದರೂ ಸಮಯದ ಅಭಾವ ಇದೆ ಎಂದು ಸಂಘಟಕರು ಹೇಳಿದ ಬಳಿಕ ಅವರು ಮುನಿಸಿಕೊಂಡು ಭಾಷಣ ಮಾಡದೇ ವಾಪಸಾದರು.

ಪ್ರಧಾನಿ ಮೋದಿ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಗಣ್ಯರು ಎದ್ದು ನಿಂತು ಅವರನ್ನು ಸ್ವಾಗತಿಸಿದರು. ಒಂದು ಬದಿಯಿಂದ ಇನ್ನೊಂದು ಬದಿಗೆ ಸಂಚರಿಸಿದ ಮೋದಿ ಅವರು ಸಭಿಕರತ್ತ ಕೈಬೀಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ವೈ. ವಿಜಯೇಂದ್ರ, ‘ರಾಜ್ಯದಲ್ಲಿ 9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ₹ 20 ಸಾವಿರ ಕೋಟಿ ಹಣವನ್ನು ಇವುಗಳಿಗೆ ಖರ್ಚು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಅವರಿಗೆ ಭಾರತರತ್ನ ಕೊಡಲೂ ಪ್ರಧಾನಿ ನರೇಂದ್ರ ಮೋದಿ ಬರಬೇಕಾಯಿತು’ ಎಂದರು.

‘ಸಿದ್ದರಾಮಯ್ಯ ಅವರು ಚುನಾವಣಾ ಬಾಂಡ್‌ಗಳ ಬಗ್ಗೆ ಪ್ರಧಾನಿ ಅವರ ನಿಲುವನ್ನು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ನಾವು ಉತ್ತರ ಕೊಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ‘ರಾಜ್ಯದ ಜನರಿಗೆ ಪಡಿತರ ಮೂಲಕ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ತಾವೇ ನೀಡಿದ್ದಾಗಿ ಪ್ರಚಾರ ಪಡೆಯುತ್ತಿದ್ದಾರೆ. ಇವರು ಅನ್ನ ಹಾಕುವವರಲ್ಲ, ಕನ್ನ ಹಾಕುವವರು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸಮೃದ್ಧವಾಗಿ ಮಳೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೊಮ್ಮೆ ಬರಗಾಲ ಆವರಿಸುತ್ತಿದೆ. ಬರ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ’ ಎಂದು ಟೀಕಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಉಮೇಶ ಜಾಧವ ಅವರು ಮತ್ತೊಮ್ಮೆ ಚುನಾವಣೆಗೆ ನಿಲ್ಲುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ತಳಮಳ ಉಂಟಾಗಿದ್ದು, ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅಷ್ಟು ಭಯ ಹುಟ್ಟಿದೆ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಪಕ್ಷದ ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ಶರಣು ಸಲಗರ, ಡಾ. ಶೈಲೇಂದ್ರ ಬೆಲ್ದಾಳೆ, ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಸುನೀಲ ವಲ್ಯಾಪುರೆ, ಮೇಯರ್ ವಿಶಾಲ ದರ್ಗಿ, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಟಿಸಿ ಮಾಜಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಚಂದು ಪಾಟೀಲ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಶೋಭಾ ಬಾನಿ ಇತರರು ವೇದಿಕೆಯಲ್ಲಿದ್ದರು.

ಮಾಜಿ ಶಾಸಕ ಪಿ. ರಾಜೀವ್ ಕಾರ್ಯಕ್ರಮ ನಿರೂಪಿಸಿದರು. 

ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕಾಗಿ ಬಿಜೆಪಿ ಮಹಿಳಾ ಘಟಕದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿದರಿ ಕಲೆಯಲ್ಲಿ ರೂಪಿಸಲಾದ ಬಸವೇಶ್ವರರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು
ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕಾಗಿ ಬಿಜೆಪಿ ಮಹಿಳಾ ಘಟಕದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿದರಿ ಕಲೆಯಲ್ಲಿ ರೂಪಿಸಲಾದ ಬಸವೇಶ್ವರರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು
ಸಮಾವೇಶದಲ್ಲಿ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ ಯುವತಿ
ಸಮಾವೇಶದಲ್ಲಿ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ ಯುವತಿ
ಪ್ರತಾಪ ಸಿಂಹ ಅವರಿಗೆ ಮೈಸೂರು ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಯುವಕರು ಭಿತ್ತಿಪತ್ರ ಪ್ರದರ್ಶಿಸಿದರು
ಪ್ರತಾಪ ಸಿಂಹ ಅವರಿಗೆ ಮೈಸೂರು ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಯುವಕರು ಭಿತ್ತಿಪತ್ರ ಪ್ರದರ್ಶಿಸಿದರು

ಕಲ್ಯಾಣಕ್ಕೆ ನೀಡಿದ ಕೊಡುಗೆ ಪಟ್ಟಿ ಮಾಡಿದ ಮೋದಿ

34 ನಿಮಿಷಗಳ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಕೊಡುಗೆಗಳನ್ನು ಸಭಿಕರ ಮುಂದೆ ಇಟ್ಟರು. ಆರು ಪಥಗಳ ಗ್ರೀನ್ ಫೀಲ್ಡ್ ಕಾರಿಡಾರ್ ರಸ್ತೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಹುಮನಾಬಾದ್–ಕಲಬುರಗಿ ಮಧ್ಯೆ ರೈಲು ಮಾರ್ಗ ನಿರ್ಮಾಣ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ಅನುದಾನ ಕಲಬುರಗಿ–ಬೆಂಗಳೂರು ಮಧ್ಯೆ ವಂದೇ ಭಾರತ್ ಹಾಗೂ ಎಕ್ಸ್‌‍ಪ್ರೆಸ್ ರೈಲು ಆರಂಭ ಮಾಡಲಾಗಿದೆ.  ‘ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ರಾಜ್ಯದ 80 ಲಕ್ಷ  ಜನ ಉಚಿತವಾಗಿ ದುಬಾರಿ ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ನನಗೆ ಕೆಲಸ ಮಾಡಲು ಇನ್ನಷ್ಟು ಶಕ್ತಿ ಬರುತ್ತಿದೆ. ನಿಮ್ಮ ಹಿತ ಕಾಯಲು ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂಬುದನ್ನು ತಾಯಂದಿರು ಮರೆಯಬಾರದು’ ಎಂದು ಮೋದಿ ಹೇಳಿದರು.

‘60 ವರ್ಷಗಳಲ್ಲಿ ಕಾಂಗ್ರೆಸ್ ನೀಡಿದ್ದು ಬಡತನ’

ಕಾಂಗ್ರೆಸ್ ಪಕ್ಷವು 60 ವರ್ಷಗಳಲ್ಲಿ ಬಡತನ ಬಿಟ್ಟು ಇನ್ನೇನನ್ನೂ ನೀಡಿಲ್ಲ ಎಂದು ಸಂಸದ ಡಾ. ಉಮೇಶ ಜಾಧವ ಟೀಕಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ ಜಾಧವ ಅವರು ಗುರುಮಠಕಲ್ ಕಲಬುರಗಿಯಿಂದ ಸಾವಿರಾರು ಜನರು ಮುಂಬೈ ಪುಣೆ ಹೈದರಾಬಾದ್ ಉತ್ತರ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ಅವರನ್ನು ತಡೆಯಲು ಕಾಂಗ್ರೆಸ್ ಏನು ಮಾಡಿತ್ತು ಎಂದು ಪ್ರಶ್ನಿಸಿದರು. ಪ್ರಧಾನಿಯವರು ದೇಶದಾದ್ಯಂತ ಏಳು ಟೆಕ್ಸ್‌ಟೈಲ್ ಪಾರ್ಕ್‌ಗಳಿಗೆ ಘೋಷಣೆ ಮಾಡಿದಾಗ ಅದರಲ್ಲಿ ಕಲಬುರಗಿ ಜಿಲ್ಲೆಯೂ ಒಂದಾಗಿತ್ತು. ಈ ಪಾರ್ಕ್‌ನಿಂದ ಒಂದು ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಲಿವೆ ಎಂದರು.  ‘ವಂದೇ ಭಾರತ್ ರೈಲಿನ ಮೂಲಕ ಅತಿ ಕಡಿಮೆ ಅವಧಿಯಲ್ಲಿ ರಾಜಧಾನಿ ತಲುಪುವ ಸೇವೆಯನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.

ಪ್ರತಾಪ ಸಿಂಹ ಭಿತ್ತಿಪತ್ರ ಪ್ರದರ್ಶನ

ಮೈಸೂರು ಸಂಸದ ಪ್ರತಾಪ ಸಿಂಹ ಅವರಿಗೆ ಈ ಬಾರಿ ಚುನಾವಣೆಯ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮುಖಂಡರ ಗಮನ ಸಳೆಯಲು ಪ್ರತಾಪ ಸಿಂಹ ಅವರ ಭಾವಚಿತ್ರ ಇರುವ ಭಿತ್ತಿಪತ್ರವನ್ನು ಕೆಲವರು ಪ್ರದರ್ಶಿಸಿ ಗಮನ ಸೆಳೆದರು.  ಪ್ರತಾಪ ಸಿಂಹ ಅವರಿಗೆ ಟಿಕೆಟ್ ನೀಡಬೇಕು. ದೇಶಕ್ಕಾಗಿ ಮೋದಿ ಹಿಂದುತ್ವಕ್ಕಾಗಿ ಸಿಂಹ ಎಂದು ಬರೆಯಲಾಗಿತ್ತು.

ವಿವಿಧೆಡೆ ಸಂಚಾರ ದಟ್ಟಣೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಹಸ್ರಾರು ವಾಹನಗಳಲ್ಲಿ ಕಾರ್ಯಕರ್ತರು ಬರುವ ಸಂದರ್ಭದಲ್ಲಿ ರಸ್ತೆ ಸಂಚಾರದಲ್ಲಿ ವ್ಯತ್ಯಯವುಂಟಾಯಿತು. ಕಲಬುರಗಿ–ಜೇವರ್ಗಿ ರಸ್ತೆಯಲ್ಲಿಯೇ ಕಾರ್ಯಕರ್ತರನ್ನು ಹತ್ತಿಸಿಕೊಂಡಿದ್ದರಿಂದ ಕಲಬುರಗಿ–ವಿಜಯಪುರ ರಸ್ತೆಯಲ್ಲಿ ಭಾರಿ ವ್ಯತ್ಯಯವಾಯಿತು. ಸಾಲುಗಟ್ಟಿ ವಾಹನಗಳು ಬಂದಿದ್ದರಿಂದ ಸುಮಾರು 45 ನಿಮಿಷ ಸಾರಿಗೆ ಸಂಸ್ಥೆಯ ಬಸ್‌ಗಳು ನಿಧಾನವಾಗಿ ಚಲಿಸಬೇಕಾಯಿತು ಎಂದು ಕಲಬುರಗಿಯಿಂದ ದೇವರಹಿಪ್ಪರಗಿಗೆ ಹೊರಟಿದ್ದ ಪ್ರಯಾಣಿಕ ಅರವಿಂದ ದೂರಿದರು. ಸಮಾವೇಶ ಮುಗಿದ ಬಳಿಕವೂ ಎಸ್‌.ಬಿ. ಟೆಂಪಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT