ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ

ನಗರದ ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಕೆ; ವಿವಿಧೆಡೆ ಪ್ರಸಾದ ವಿತರಣೆ
Published 9 ಮಾರ್ಚ್ 2024, 5:02 IST
Last Updated 9 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬದ ದಿನವಾದ ಶುಕ್ರವಾರ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಬೆಳಿಗ್ಗೆಯಿಂದಲೇ ಎಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರುಗಿದವು.

ಎಲ್ಲ ಶಿವಮಂದಿರ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಬಂದು ಸರದಿ ಸಾಲಿನಲ್ಲಿ ದರ್ಶನ ಪಡೆಯುವುದು ಕಂಡು ಬಂತು. ಇಡೀ ದಿನ ಪ್ರಮುಖ ಶಿವಮಂದಿರಗಳು ಭಕ್ತರ ದಂಡು ತುಂಬಿ ತುಳುಕುತ್ತಿದ್ದವು. ಭಕ್ತರು ಶಿವಲಿಂಗಕ್ಕೆ ಹೂ–ಕಾಯಿ, ಕರ್ಪೂರ ಅರ್ಪಿಸಿ, ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಪಡೆದರು.

ರಾಮತೀರ್ಥ– ಹರಿದು ಬಂದ ಭಕ್ತಗಣ:

ನಗರದ ಆಳಂದ ರಸ್ತೆಯಲ್ಲಿ ಇರುವ ರಾಮತೀರ್ಥ ದೇವಸ್ಥಾನದಲ್ಲಿ ರಾಮತೀರ್ಥ ಅಮರನಾಥ ಸೇವಾ ಸಮಿತಿಯಿಂದ ಸುಮಾರು 49 ವರ್ಷಗಳಿಂದ ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ, ದಾಸೋಹ ಸೇವೆ ಮಾಡಲಾಯಿತು.

ಸಮಿತಿ ಅಧ್ಯಕ್ಷ ಅರ್ಜುನದಾಸ್‌ ಬೂದವಾನಿ ನೇತೃತ್ವದಲ್ಲಿ ಶುಕ್ರವಾರ ಶಿವಲಿಂಗಕ್ಕೆ ವಿಶೇಷ ಪೂಜೆ, ರುದ್ರಾಭಿಷೇಕ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಬಂದು ಭಕ್ತರು ದೇವರ ದರ್ಶನವನ್ನು ಪಡೆದರು. ಬಂದ ಭಕ್ತರಿಗೆಲ್ಲ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9ರವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬಂದು ದರ್ಶನ ಪಡೆದರು ಎಂದು ಸಮಿತಿ ಕಾರ್ಯದರ್ಶಿ ರವೀಂದ್ರ ಕೋಡ್ಲಿ ತಿಳಿಸಿದರು.

ಜಾಗರಣೆ ನಿಮಿತ್ತ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ನೂರಾರು ಜನರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಹೋರಾತ್ರಿ ಶಿವನ ಕುರಿತು ನೂರಾರು ಹಾಡುಗಳನ್ನು ಹಾಡುವ ಮೂಲಕ ಭಕ್ತಿ ಮೆರೆದರು.

ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ: ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಶರಣ ಬಸವೇಶ್ವರರ ಕರ್ತೃ ಗದ್ದುಗೆಗೆ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಯಿತು.

ಹಣ್ಣುಗಳಾದ ದಾಳಿಂಬೆ, ಲಿಂಬೆ, ಚಕ್ಕು, ಮೂಸಂಬಿ, ಖರ್ಜೂರ, ದ್ರಾಕ್ಷಿಯಿಂದ ದೇವಸ್ಥಾನದಲ್ಲಿರುವ ಕರ್ತೃ ಗದ್ದುಗೆಯನ್ನು ಸಿಂಗಾರಗೊಳಿಸಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಿದರು.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದೇವಸ್ಥಾನದಲ್ಲಿರುವ ಆಭರಣಗಳ ಮಾರಾಟವೂ ಭರದಿಂದ ನಡೆಯಿತು. ಮಕ್ಕಳ ಆಟಿಕೆ, ರುದ್ರಾಕ್ಷಿ, ಕುಂಕುಮ, ವಿಭೂತಿ, ಶಿವನ ಹಾಗೂ ಶರಣ ಬಸವೇಶ್ವರ ಭಾವಚಿತ್ರಗಳ ಮಾರಾಟವೂ ಜೋರಾಗಿತ್ತು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ: ಸೇಡಂ ರಸ್ತೆಯ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷವಾದ ಮಾದರಿಯಲ್ಲಿ ಲಿಂಗವನ್ನು ತಯಾರಿಸಿ ಕುಂದನ ಹರಳುಗಳಿಂದ ಶೃಂಗರಿಸಿ ಅಲ್ಲಿ ಶಿವಲಿಂಗ ಸ್ಥಾಪನೆ ಮಾಡಿರುವುದು ವಿಶೇಷ ಗಮನ ಸೆಳೆಯಿತು.

ಇಲ್ಲಿಗೆ ಭೇಟಿ ನೀಡಿದ ಸಾರ್ವಜನಿಕರು ಬೃಹತ್ ಶಿವಲಿಂಗ, ದೇಶದ ವಿವಿಧ ಸ್ಥಳಗಲ್ಲಿರುವ 12 ಜ್ಯೋರ್ತಿಲಿಂಗಗಳ ಮಾದರಿಯ ಲಿಂಗಗಳು ಅವುಗಳಿಗೆ ಮಾಡಲಾದ ಅಲಂಕಾರಗಳನ್ನು ನೋಡುಗರ ಮನ ತಣಿಸಿದವು. ಎಲ್ಲೆಡೆ ಶಿವನ ಸಂದೇಶವನ್ನು ಹೇಳುವ ಸಂದೇಶದ ಬರಹಗಳು ಹಾಕಲಾಗಿತ್ತು. ಶಿವನ ಜೀವನದ ರೀತಿ ಬಗ್ಗೆ ಸಹೋದರಿಯರು ಮಾರ್ಗದರ್ಶನ ಮಾಡಿದರು.

ವಿವಿಧ ದೇವಸ್ಥಾನಗಲ್ಲಿ ವಿಶೇಷ ಪೂಜೆ: ಕಲಬುರಗಿಯ ಜಯನಗರದ ಶಿವಮಂದಿರ, ಗೋದುತಾಯಿ ನಗರದ ಪಂಚಲಿಂಗೇಶ್ವರ ಮಂದಿರ, ಬ್ರಹ್ಮಪುರ ಬಡಾವಣೆಯ ಶರಣಬಸವೇಶ್ವರ ದೇವಾಲಯ, ಈಶ್ವರ ಗುಡಿ, ಶಿವನ ದೇವಾಲಯ, ಜಗತ್‌ ಬಡಾವಣೆಯ ಬಸವೇಶ್ವರ ಗುಡಿ, ಕೈಲಾಸ ನಗರ ಮಲ್ಲಿಕಾರ್ಜುನ ದೇವಾಲಯ, ಬಸವೇಶ್ವರ ಕಾಲೊನಿ, ಗುಬ್ಬಿ ಕಾಲೊನಿ, ಜಿಡಿಎ ಲೇಔಟ್‌ನ ಧರಿಯಾಪುರ ಬಡಾವಣೆಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಕೋರಂಟಿ ಹನುಮಾನ ದೇವಾಲಯ, ರಾಜಾಪುರದ ಮಲ್ಲಿಕಾರ್ಜುನ ದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಕಲಬುರಗಿಯ ರಾಮತೀರ್ಥ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ದೇವರ ದರ್ಶನ ಪಡೆಯಲು ಸಾಲಾಗಿ ನಿಂತಿದ್ದ ಭಕ್ತರು
ಕಲಬುರಗಿಯ ರಾಮತೀರ್ಥ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ದೇವರ ದರ್ಶನ ಪಡೆಯಲು ಸಾಲಾಗಿ ನಿಂತಿದ್ದ ಭಕ್ತರು
ಶರಣಬಸವೇಶ್ವರರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಶರಣಬಸವೇಶ್ವರರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು
–ಪ್ರಜಾವಾಣಿ ಚಿತ್ರ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು –ಪ್ರಜಾವಾಣಿ ಚಿತ್ರ
ಸೈಯದ್‌ ಚಿಂಚೋಳಿ ರಸ್ತೆಯಲ್ಲಿರುವ ವೈಷ್ಣವಿದೇವಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು
ಸೈಯದ್‌ ಚಿಂಚೋಳಿ ರಸ್ತೆಯಲ್ಲಿರುವ ವೈಷ್ಣವಿದೇವಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು
ಕಲಬುರಗಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಗೀತಾ ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಅಂಗವಾಗಿ ಭಕ್ತರು ವಿವಿಧ ಲಿಂಗಗಳನ್ನು ವೀಕ್ಷಿಸಿದರು
–ಪ್ರಜಾವಾಣಿ ಚಿತ್ರ
ಕಲಬುರಗಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಗೀತಾ ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಅಂಗವಾಗಿ ಭಕ್ತರು ವಿವಿಧ ಲಿಂಗಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ

ವೈಷ್ಣವಿದೇವಿ ಮಂದಿರದಲ್ಲಿ ಪೂಜೆ

ಕಲಬುರಗಿಯ ಸೈಯದ್‌ ಚಿಂಚೋಳಿ ರಸ್ತೆಯಲ್ಲಿರುವ ಗಬರಾಬಾದಿ ರಿಲಿಜಿಯಸ್‌ ಟ್ರಸ್ಟ್‌ನ ವೈಷ್ಣವಿ ದೇವಿ ಮಂದಿರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ವೈಷ್ಣವಿ ದೇವಿಗೆ ಬೆಳಿಗ್ಗೆ ವಿಶೇಷ ಪೂಜೆ ರುದ್ರಾಭಿಷೇಕ ಮಹಾಮಂಗಳಾತಿ ನೈವೇದ್ಯ ಅರ್ಪಿಸಲಾಯಿತು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ದೇವಿಗೆ ಅಭಿಷೇಕವನ್ನು ಮಾಡಿ ತಮ್ಮ ಭಕ್ತಿ ಸಮರ್ಪಿಸಿದರು. ಹಬ್ಬದ ದಿನವಾದ ಶುಕ್ರವಾರ 5 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿ ದರ್ಶನ ಪಡೆದರು ಎಂದು ದೇವಸ್ಥಾನ ಸಮಿತಿಯ ವಿಕಾಸ ಗಬರಾಬಾದಿ ತಿಳಿಸಿದರು. ಉಪವಾಸ ವ್ರತ ಆಚರಣೆ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಹಿಂದೂ ಸಮಾಜದ ಮಹಿಳೆ ಹಾಗೂ ಪುರುಷರು ಹಾಗೂ ಮಕ್ಕಳು ಉಪವಾಸ ವ್ರತ ಆಚರಣೆ ಮಾಡಿದರು. ಬೆಳಿಗ್ಗೆಯಿಂದ ಉಪವಾಸವಿದ್ದು ಶಿವನಿಗೆ ಭಕ್ತಿಯನ್ನು ಅರ್ಪಣೆ ಮಾಡಿ ಸಂಜೆ ಖರ್ಜೂರ ಹಣ್ಣು ಎಳೆನೀರು ಸೇವಿಸಿದರು.

Cut-off box - ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ ಮಹಾ ಶಿವಾರಾತ್ರಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ದರಗಳಲ್ಲಿ ಹಣ್ಣುಗಳು ಮಾರಾಟವಾದವು. ದ್ರಾಕ್ಷಿ ಪ್ರತಿ ಕೆ.ಜಿಗೆ ₹ 40ರಿಂದ ₹ 60 ಬಾಳೆ ಹಣ್ಣು ಡಜನ್‌ಗೆ ₹ 50 ಸೇಬು ಹಣ್ಣು ಕೆಜಿಗೆ ₹ 100ರಿಂದ ₹ 120 ದಾಳಿಂಬೆ ಕೆಜಿಗೆ ₹ 80 ರಿಂದ ₹ 100 ಗೆಣಸು ₹ 50ರಿಂದ ₹ 70ರವರೆಗೆ ಕಲ್ಲಂಗಡಿ ಪ್ರತಿ ಕೆ.ಜಿ.ಗೆ ₹ 30ರಿಂದ ₹ 40ರಂತೆ ಮಾರಾಟವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT