ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಯಾಣ’ದ ಕಣದಲ್ಲಿ ತ್ರಿಕೋನ ಸ್ಪರ್ಧೆ

ಚಂದ್ರಶೇಖರ ಪಾಟೀಲ, ಅಮರನಾಥ ಪಾಟೀಲ, ಪ್ರತಾಪ್ ರೆಡ್ಡಿ ಸೇರಿ 19 ಜನ ಕಣದಲ್ಲಿ
Published 26 ಮೇ 2024, 0:45 IST
Last Updated 26 ಮೇ 2024, 0:45 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ ಹುಮನಾಬಾದ್‌ ಹಾಗೂ ಬಿಜೆಪಿಯ ಅಮರನಾಥ ಪಾಟೀಲ ಅವರ ಗೆಲುವಿನ ಓಟಕ್ಕೆ ಪಕ್ಷೇತರ ಅಭ್ಯರ್ಥಿ ಎನ್‌. ಪ್ರತಾಪ ರೆಡ್ಡಿ ‘ಮೂಗುದಾರ’ ಹಾಕುತ್ತಿದ್ದಾರೆ.

ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಕಳೆದ ಬಾರಿ ಮೊದಲ ಸಲ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಳ್ಳಾರಿಯ ಎನ್. ಪ್ರತಾಪ್ ರೆಡ್ಡಿ ಅವರು ಈ ಬಾರಿ ಗೆಲುವು ಸಾಧಿಸಲೇಬೇಕು ಎಂಬ ಹಂಬಲದಿಂದ ವರ್ಷಗಳ ಹಿಂದೆಯೇ ಭೂಮಿಕೆ ಸಜ್ಜು ಮಾಡಿಕೊಂಡಿದ್ದು, ಇವರಿಗೆ ಆಮ್ ಆದ್ಮಿ ಪಕ್ಷ ಬಾಹ್ಯ ಬೆಂಬಲವನ್ನೂ ನೀಡಿದೆ.

ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಬಿಜೆಪಿ ಈ ಬಾರಿ ತೀವ್ರ ಪ್ರಯತ್ನ ನಡೆಸಿದೆ. ಕಳೆದ ಬಾರಿ ಬಿಜೆಪಿಯು ಕಲಬುರಗಿಯ ಅಮರನಾಥ ಪಾಟೀಲ ಬದಲು ಹೊಸಪೇಟೆಯ ಕೆ.ಬಿ.ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಮತ್ತೆ ಅಮರನಾಥ ಪಾಟೀಲ ಅವರಿಗೇ ಮಣೆ ಹಾಕಿದೆ. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಯಾದಗಿರಿ ಜಿಲ್ಲೆಯ ಮುಖಂಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಅವರ ಮನವೊಲಿಸಿ ಕಣದಿಂದ ಹಿಂದೆ ಸರಿಸುವಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಇನ್ನೂ ಕಾಣಿಸಿಕೊಳ್ಳುತ್ತಿದೆ. ಹಾಲಿ ಸದಸ್ಯ ಚಂದ್ರಶೇಖರ ಪಾಟೀಲ ಹುಮನಾಬಾದ್ ಅವರನ್ನೇ ಕಾಂಗ್ರೆಸ್ ಕಣಕ್ಕೆ ಇಳಿಸಿದೆ.

ಕ್ಷೇತ್ರದಲ್ಲಿ ಬಿಜೆಪಿ ಹೊರತುಪಡಿಸಿದರೆ ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪ್ ರೆಡ್ಡಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಅಷ್ಟಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ ಅಭ್ಯರ್ಥಿ, ವಿಧಾನಪರಿಷತ್ ಹಾಲಿ ಸದಸ್ಯ ಚಂದ್ರಶೇಖರ ಪಾಟೀಲ ಅವರು ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನ ಮಾಡಿಲ್ಲ ಎಂಬುದು ಮತದಾರರ ಆರೋಪ. ಇದರ ನಡುವೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ತಮಗೆ ಹೆಚ್ಚು ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಚಂದ್ರಶೇಖರ ಇದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತೋರಿಸಿದ ಹುಮ್ಮಸ್ಸನ್ನು ಕಾಂಗ್ರೆಸ್ ಮುಖಂಡರು ಪರಿಷತ್ ಚುನಾವಣೆಯಲ್ಲಿ ತೋರಿಸುತ್ತಿಲ್ಲ. ಚಂದ್ರಶೇಖರ ಪಾಟೀಲ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಹೊರತುಪಡಿಸಿದರೆ ಸಚಿವರು, ಶಾಸಕರು ಕಂಡು ಬರಲಿಲ್ಲ. ಇದಕ್ಕೆ ವ್ಯತಿರಿಕ್ತವೆಂಬಂತೆ ಬಿಜೆಪಿ ಪ್ರಮುಖರುತಮ್ಮ ಪಕ್ಷದ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಸುನೀಲ ವಲ್ಯಾಪುರೆ ಹಾಗೂ ಪಕ್ಷದ ಶಾಸಕರು ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಕಲಬುರಗಿಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಪ್ರಚಾರ ಸಭೆಯೊಂದು ನಡೆದಿದ್ದು ಬಿಟ್ಟರೆ ತಳಮಟ್ಟದ ಕಾರ್ಯಕರ್ತರ ಸ್ಪಂದನೆ ಹೇಳಿಕೊಳ್ಳುವಂತೆ ಕಂಡುಬರುತ್ತಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯೇ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಬಿಜೆಪಿ ಮುಖಂಡರಾದ ಡಾ.ಎಂ.ಆರ್. ತಂಗಾ ಅವರು ಮೂರು ಬಾರಿ, ಮನೋಹರ ಮಸ್ಕಿ, ಅಮರನಾಥ ಪಾಟೀಲ ತಲಾ ಒಂದು ಬಾರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ್ ಕಳೆದ ಬಾರಿ ಬಿಜೆಪಿಯ ಕೋಟೆ ಛಿದ್ರಗೊಳಿಸಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು. 

ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಲ್ಲದೇ, ಪಕ್ಷೇತರ ಅಭ್ಯರ್ಥಿಗಳಾಗಿ ಅನಿಮೇಶ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್ ಅಬ್ದುಲ್ ರೆಹಮಾನ್ ಗೋಳಾ, ಕಾಶಿನಾಥ ಎಂ. ಸೋಮಪ್ಪ, ಗವಿಸಿದ್ದಪ್ಪ ಚಂದ್ರಶೇಖರ, ಎನ್.ಗೌರಣ್ಣ, ಪ್ರಭು ನಾರಾಯಣ, ಶರಣ ಐಟಿ ಸೇರಿದಂತೆ 19 ಜನ ಕಣದಲ್ಲಿದ್ದಾರೆ.

ಅಮರನಾಥ ಪಾಟೀಲ
ಅಮರನಾಥ ಪಾಟೀಲ
ಎನ್‌. ಪ್ರತಾಪ್ ರೆಡ್ಡಿ
ಎನ್‌. ಪ್ರತಾಪ್ ರೆಡ್ಡಿ

ಎನ್‌ಪಿಎಸ್ ಬದಲು ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರು ತಿಂಗಳಾನುಗಟ್ಟಲೇ ಧರಣಿ ನಡೆಸಿದರೂ ಬಿಜೆಪಿ ಸರ್ಕಾರ ಕ್ಯಾರೆ ಎನ್ನಲಿಲ್ಲ. ನಮ್ಮ ಸರ್ಕಾರ ಅವರ ಬೇಡಿಕೆ ಈಡೇರಿಸಲಿದೆ. ಹೀಗಾಗಿ ನನ್ನನ್ನು ಗೆಲ್ಲಿಸಲಿದ್ದಾರೆ

-ಡಾ.ಚಂದ್ರಶೇಖರ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ

ಈಗಾಗಲೇ ಒಂದು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದರಿಂದ ಪದವೀಧರರ ಸಮಸ್ಯೆಗಳ ಅರಿವು ಇದೆ. ಸದನದಲ್ಲಿ ಒತ್ತಡ ಹೇರಿ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿದ್ದೆ. ಮತದಾರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಹೀಗಾಗಿ ಗೆಲುವು ನಿಶ್ಚಿತ

- ಅಮರನಾಥ ಪಾಟೀಲ ಬಿಜೆಪಿ ಅಭ್ಯರ್ಥಿ

ಆರು ವರ್ಷಗಳಿಂದ ಮತದಾರರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ. ಜೆಡಿಎಸ್ ಬಿಜೆಪಿ ಕಾಂಗ್ರೆಸ್‌ನ ನನ್ನ ಹಳೆಯ ಗೆಳೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಬಾಹ್ಯ ಬೆಂಬಲ ನೀಡಿದೆ. ನನ್ನ ಪರವಾದ ಅಲೆ ಇದೆ

-ಎನ್. ಪ್ರತಾಪ್ ರೆಡ್ಡಿ ಪಕ್ಷೇತರ ಅಭ್ಯರ್ಥಿ

ಮತದಾರರ ವಿವರ ಪುರುಷರು ; 99121 ಮಹಿಳೆಯರು ; 57483 ಇತರೆ; 19 ಒಟ್ಟು; 156623 ** ಹಾಲಿ ಪ್ರತಿನಿಧಿ ಡಾ.ಚಂದ್ರಶೇಖರ ಪಾಟೀಲ; ಕಾಂಗ್ರೆಸ್ ಗೆಲುವಿನ ಅಂತರ; 321 ಮತಗಳು ಸಮೀಪದ ಪ್ರತಿಸ್ಪರ್ಧಿ ಕೆ.ಬಿ. ಶ್ರೀನಿವಾಸ್; ಬಿಜೆಪಿ **  ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳು ಕಲಬುರಗಿ ಬೀದರ್ ಯಾದಗಿರಿ ರಾಯಚೂರು ಕೊಪ್ಪಳ ಬಳ್ಳಾರಿ ವಿಜಯನಗರ

ಚುನಾವಣಾ ವಿಷಯಗಳೇನು? ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಇತ್ತೀಚಿನ ವರ್ಷಗಳಲ್ಲಿ ಯಥೇಚ್ಛ ಅನುದಾನ ಹರಿದು ಬರುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಈ ಭಾಗದ ಅಭಿವೃದ್ಧಿ ಆಗುತ್ತಿಲ್ಲ. ನಿರುದ್ಯೋಗದ ಭೂತ ಬೃಹದಾಕಾರವಾಗಿ ಬೆಳೆದಿದ್ದು ವಿಶ್ವವಿದ್ಯಾಲಯಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಆಗುತ್ತಿಲ್ಲ. ಹೀಗಾಗಿ ಉನ್ನತ ಪದವಿ ಪ‍ಡೆದವರೂ ನಿರುದ್ಯೋಗಿಳಾಗಿದ್ದಾರೆ. ಕುಟುಂಬ ಸಲುಹಲು ಅತಿಥಿ ಉಪನ್ಯಾಸಕರಾಗಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಪದವೀಧರರು ಉದ್ಯೋಗ ಹುಡುಕಿಕೊಂಡು ಬೆಂಗಳೂರು ಹೈದರಾಬಾದ್‌ಗೆ ವಲಸೆ ಹೋಗುವುದು ಹೆಚ್ಚುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT