ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | 101 ವಾರಸುದಾರರಿಗೆ ಮೊಬೈಲ್ ಹಸ್ತಾಂತರ

300 ಮೊಬೈಲ್‌ ಕಳವು: ₹24.50 ಲಕ್ಷ ಮೌಲ್ಯದ 101 ಮೊಬೈಲ್ ಪತ್ತೆ
Published 15 ಮೇ 2024, 16:16 IST
Last Updated 15 ಮೇ 2024, 16:16 IST
ಅಕ್ಷರ ಗಾತ್ರ

ಕಲಬುರಗಿ: ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ ಬಸ್ ನಿಲ್ದಾಣ, ಮಾರುಕಟ್ಟೆ, ಜನದಟ್ಟಣೆ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಳುವಾದ ಮತ್ತು ಕಳೆದುಕೊಂಡಿದ್ದ 100ಕ್ಕೂ ಹೆಚ್ಚು ವಾರಸುದಾರರಿಗೆ, ಇ–ಸ್ಪಂದನ ಪೋರ್ಟಲ್ ಮೂಲಕ ಪತ್ತೆಹಚ್ಚಿ ವಶಪಡಿಸಿಕೊಂಡಿರುವ ಅವರ ಮೊಬೈಲ್‌ಗಳನ್ನು ಬುಧವಾರ ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಸ್ತಾಂತರ ಮಾಡಲಾಯಿತು.

2024ರ ಸಾಲಿನಲ್ಲಿ ಸಾರ್ವಜನಿಕರು ತಾವು ಕಳೆದು ಕೊಂಡಿದ್ದ ಸುಮಾರು 300 ಮೊಬೈಲ್‌ಗಳ ಪತ್ತೆಗಾಗಿ ಸೆಂಟ್ರಲ್‌ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್‌) ಪೋರ್ಟಲ್‌ ಮತ್ತು ಕೆಎಸ್‌ಪಿ ಇ–ಲಾಸ್ಟ್‌ನಲ್ಲಿ ದೂರು ದಾಖಲಿಸಿದ್ದರು. ಅವುಗಳ ಪೈಕಿ ಇವರೆಗೂ 160 ಮೊಬೈಲ್‌ಗಳನ್ನು ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ ₹24.50 ಲಕ್ಷ ಮೌಲ್ಯದ 101 ಮೊಬೈಲ್‌ಗಳು ವಾರಸುದಾರರ ಕೈಸೇರಿವೆ.

‘ಸೆನ್’ ಮತ್ತು ಇತರೆ ಪೊಲೀಸ್ ಠಾಣೆಗಳ ಸಿಬ್ಬಂದಿ ಕಾಣೆಯಾದ ಮೊಬೈಲ್ ಪ್ರಕರಣಗಳ ತನಿಖೆ ಮಾಡಿದರು. ಆರೋಪಿಗಳ ಬೆನ್ನು ಹತ್ತಿ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗೂ ಹೋಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಚೇತನ್ ಆರ್. ಹೇಳಿದರು.

‘ಸಾರ್ವಜನಿಕರು ವಾಹನ ಹತ್ತುವಾಗ, ಇಳಿಯುವಾಗ, ಪ್ರಯಾಣದ ಸಮಯದಲ್ಲಿ ಹಾಗೂ ವಾಹನ ಚಾಲನೆಯ ವೇಳೆ ಮೊಬೈಲ್‌ಗಳ ಬಗ್ಗೆ ಜಾಗೃತಿ ವಹಿಸಬೇಕು. ಮೊಬೈಲ್ ಕಳುವಾದರೆ ತಕ್ಷಣವೇ ಹತ್ತಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇಲ್ಲವೆ ತಾವು ಇದ್ದಲ್ಲಿಯೇ ಸಿಇಐಆರ್‌ ಪೋರ್ಟಲ್‌ ಮತ್ತು ಕೆಎಸ್‌ಪಿ ಇ– ಲಾಸ್ಟ್‌ ಪೋರ್ಟಲ್‌ನಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ದೂರು ಕೊಡಬಹುದು’ ಎಂದು ತಿಳಿಸಿದರು.

‘ನಗರದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದರೆ, ರಾತ್ರಿ ವೇಳೆ ಗಸ್ತು ಸಹ ತಿರುಗುತ್ತಿದ್ದಾರೆ. ಯಾವುದೇ ಅಪರಾಧಗಳು ನಡೆದರೆ 112ಗೆ ಕರೆ ಮಾಡಬಹುದು. ಇಲ್ಲವೇ ಠಾಣೆಗಳಲ್ಲಿ ದೂರು ಕೊಡಬಹುದು’ ಎಂದರು.

ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ, ಇತರೆ ಸಂಘಟನೆಗಳ ಆರೋಪಕ್ಕೆ ಕಳೆದ ವರ್ಷ ಹಾಗೂ ಈ ವರ್ಷದ ನಾಲ್ಕೂವರೆ ತಿಂಗಳಲ್ಲಿನ ಪ್ರಕರಣಗಳ ಮಾಹಿತಿಯನ್ನು ಹಂಚಿಕೊಂಡರು. 2023ರ ಜನವರಿಯಿಂದ ಮೇ 15ರವರೆಗೆ 1,013 ಪ್ರಕರಣಗಳು ದಾಖಲಾಗಿದ್ದವು. 2024ರ ಜನವರಿ 1ರಿಂದ ಮೇ 15ರವರೆಗೆ ಒಟ್ಟು 900 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಕನ್ನಿಕಾ ಸಿಕ್ರಿವಾಲ್, ‘ಸೆನ್‌’ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸಂತ್ರಸ್ತರಿಗೆ ಗನ್ ಮ್ಯಾನ್ ಭದ್ರತೆ: ಚೇತನ್ ‘ವಿಶ್ವವಿದ್ಯಾಲಯ ಠಾಣೆಯ ವ್ಯಾಪ್ತಿಯ ಪ್ರಕರಣದಲ್ಲಿ ಅಮಾನವೀಯ ಸಂಕಷ್ಟಕ್ಕೆ ಒಳಗಾದ ಮೂವರು ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಜೀವಭಯ ಇರುವವರಿಗೆ ಗನ್ ಮ್ಯಾನ್ ಭದ್ರತೆಯೂ ಕಲ್ಪಿಸಲಾಗುವುದು’ ಎಂದು ಕಮಿಷನರ್ ಚೇತನ್ ಆರ್‌. ಭರವಸೆ ನೀಡಿದರು. ‘ಈ ಪ್ರಕರಣದಲ್ಲಿ ಯಾರೆಲ್ಲ ಆರೋಪಿಗಳು ಇದ್ದಾರೆ ಎಂದು ಹೇಳಲು ಆಗುವುದಿಲ್ಲ. ಆರೋಪಿಗಳ ಹೆಸರು ಬಹಿರಂಗಪಡಿಸಿದರೆ ಅವರು ಬುದ್ಧಿವಂತರಾಗಿ ತಪ್ಪಿಸಿಕೊಳ್ಳುತ್ತಾರೆ. ತನಿಖಾ ಹಂತದಲ್ಲಿ ಎಲ್ಲವನ್ನೂ ಹೊರಹಾಕಲು ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಮೂವರನ್ನು ಕೂಡಿ ಹಾಕಿದ ಕೊಣೆಯಲ್ಲಿ ಮಾರಕಾಸ್ತ್ರಗಳು ಇರುವುದು ಪತ್ತೆಯಾಗಿವೆ. ಬಂಧಿತ ಆರೋಪಿಗಳ ಪೈಕಿ ಕೆಲವರ ಮೇಲೆ ಈ ಹಿಂದೆಯೂ ಪ್ರಕರಣಗಳ ದಾಖಲಾಗಿದ್ದವು. ಅವುಗಳ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹೇಳಿದರು. ಮಹಿಳೆಯರ ಜೋಡಿ ಕೊಲೆಗೆ ಪ್ರತಿಕ್ರಿಯಿಸಿದ ಕಮಿಷನರ್ ‘ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ತನಿಖಾ ತಂಡಗಳನ್ನು ರಚಿಸಲಾಗಿದೆ’ ಎಂದರು.

ನಾಲ್ಕೂವರೆ ತಿಂಗಳಲ್ಲಿ ದಾಖಲಾದ ಪ್ರಮುಖ ಪ್ರಕರಣಗಳು ಪ್ರಕರಣಗಳು;2023ರ ಜ.1ರಿಂದ ಮೇ 15;2024ರ ಜ.1ರಿಂದ ಮೇ 15 ಕೊಲೆ ಯತ್ನ;18;15 ಹಗಲು ಕಳವು;13;5 ರಾತ್ರಿ ಕಳವು;42;27 ಸೈಬರ್ ಕ್ರೈಮ್;6;9 ದರೋಡೆ;19;16 ಕಳವು;173;104 ಪೊಕ್ಸೊ;7;6 ಕೊಲೆ;13;9 ಭೀಕರ ವಾಹನ ಅ‍ಪಘಾತ;48;33 ಸಾಧಾರಣ ವಾಹನ ಅಪಘಾತ;147;129 ಗಾಯ ಕೇಸ್;97;71 ಹಿಂಸೆ;17;19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT