ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ಸಚಿವ ನಾಗೇಂದ್ರ ರಾಜೀನಾಮೆಗೆ ಜೂನ್‌ 6ರ ಗಡವು’

Published 30 ಮೇ 2024, 16:03 IST
Last Updated 30 ಮೇ 2024, 16:03 IST
ಅಕ್ಷರ ಗಾತ್ರ

ಕಲಬುರಗಿ: ‘ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ₹ 187 ಕೋಟಿ ಲೂಟಿ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರ ಹಾಗೂ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿರುವ ಪರಿಶಿಷ್ಟ ಪಂಗಡಗಳ ಇಲಾಖೆ ಸಚಿವ ಬಿ.ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಸಚಿವ ನಾಗೇಂದ್ರ ಅವರು ಜೂನ್‌ 6ರ ಒಳಗೆ ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ ಬಿಜೆಪಿಯಿಂದ ರಾಜ್ಯದಾದ್ಯಂತ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸಚಿವರು ಹಣ ದೋಚುವಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಇವು ಮೃತಪಟ್ಟ ಅಧಿಕಾರಿ ಚಂದ್ರಶೇಖರನ್‌ ಅವರ ಮರಣ ಪೂರ್ವ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಸಚಿವರೇ ನೇರವಾಗಿ ಭಾಗಿಯಾಗಿರುವ ಕಾರಣ ಸರ್ಕಾರ ಇದನ್ನು ಮುಚ್ಚಿ ಹಾಕುವ ಸಾಧ್ಯತೆಗಳಿದ್ದು, ಪ್ರಕರಣದ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಮರಣ ಪೂರ್ವ ಹೇಳಿಕೆಯಲ್ಲಿ ಸಚಿವರ ಎಂದಷ್ಟೇ ಇದ್ದು, ಹೆಸರು ಇಲ್ಲವಲ್ಲ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಜಾಧವ, ‘ಸಚಿವರು ಎಂದು ಮರಣಪೂರ್ವ ಹೇಳಿಕೆಯಲ್ಲಿದ್ದ ಮೇಲೆ ಯಾರಾದರೂ ಹೇಳಿರಲೇಬೇಕಲ್ಲ. ಸಚಿವರ ಮೇಲಿನವರು ಹೇಳಿರಬಹುದು, ಸೂಪರ್‌ ಸಿ.ಎಂ., ಸಿ.ಎಂ. ಇಲ್ಲವೇ ಸ್ಪೆಷಲ್ ಬೇಬಿ ಹೇಳಿರಬಹುದು’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ನವರು ಸುಳ್ಳು ಆರೋಪಗಳನ್ನು ಮಾಡಿ ಪ್ರಚಾರ ತೆಗೆದುಕೊಂಡರು. ಈಶ್ವರಪ್ಪ ವಿರುದ್ಧ ಆರೋಪ ಬಂದಾಗ ಅವರು ಅಧಿಕಾರ ತ್ಯಜಿಸಿದ್ದರು. ಸುರೇಶಕುಮಾರ್‌ ಕೂಡ ಹಾಗೇ ಮಾಡಿದ್ದರು. ಆಗೆಲ್ಲ ಕಾಂಗ್ರೆಸ್‌ನವರು ಹೇಳುತ್ತಿದ್ದ ಮಾನದಂಡವನ್ನು ಅವರೇ ಯಾಕೆ ಪಾಲಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ ಜಾಧವ, ಮುಖಂಡ ಗೌರಿಶಂಕರ ಉಪ್ಪಿನ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT