ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಬೋಗಸ್ ಹಾಜರಾತಿಗೆ ಕಡಿವಾಣ ಹಾಜರಾತಿ

ಎನ್‌ಎಂಎಂಎಸ್ ತಂತ್ರಾಂಶದ ಮೂಲಕ ಕಾರ್ಮಿಕರ ಹಾಜರಾತಿ
ಜಗನ್ನಾಥ ಡಿ. ಶೇರಿಕಾರ
Published 30 ಏಪ್ರಿಲ್ 2024, 5:53 IST
Last Updated 30 ಏಪ್ರಿಲ್ 2024, 5:53 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎನ್‌ಎಂಎಂಎಸ್  ಬಳಕೆ ಮಾಡಲಾಗುತ್ತಿದ್ದು ಬೋಗಸ್ ಹಾಜರಾತಿಗೆ ಕಡಿವಾಣ ಹಾಕಲಾಗುತ್ತಿದೆ.

ಈ ಆ್ಯಪ್‌ ಹಿಂದಿನ ವರ್ಷಗಳಿಂದಲೇ ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲ. ಆದರೆ ಪ್ರಸಕ್ತ ವರ್ಷ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಾ.ಪಂ. ಇಒ ಶಂಕರ ರಾಠೋಡ್ ಪ್ರಜಾವಾಣಿಗೆ ತಿಳಿಸಿದರು.

ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳಲ್ಲಿ 2024-25ನೇ ಸಾಲಿನಲ್ಲಿ 9.91ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನಿಗದಿಯಾಗಿದ್ದು ತಾಲ್ಲೂಕಿನಲ್ಲಿ 93ಸಾವಿರ ಕಾರ್ಮಿಕರ ಪೈಕಿ 42 ಸಾವಿರ ಕ್ರಿಯಾತ್ಮಕ ಕಾರ್ಮಿಕರಿದ್ದಾರೆ ಎಂದು ಯೋಜನೆಯ ಸಹಾಯಕ ನಿರ್ದೆಶಕ ಶಿವಶಂಕ್ರಯ್ಯ ಸ್ಥಾವರಮಠ ತಿಳಿಸಿದರು.

ತಾಲ್ಲೂಕಿನ ಬಹುತೇಕ ಎಲ್ಲಾ ಪಂಚಾಯಿತಿಗಳಲ್ಲಿ ನದಿ, ನಾಲಾ, ತೊರೆಗಳು, ಬಾವಿ, ಕೆರೆ, ಕುಂಟೆಗಳ ಹೂಳೆತ್ತುವಂತಹ ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಹೊಸದಾಗಿ ಉದ್ಯೋಗ ಚೀಟಿ ವಿತರಣೆ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಡೆ ಹಿಡಿಯಲಾಗಿದೆ.

ತಾಲ್ಲೂಕಿನಿಂದ ಸಾವಿರಾರು ಮಂದಿ ಉದ್ಯೋಗ ಅರಸಿ ಮುಂಬಯಿ ಪುಣೆ ಹಾಗೂ ಬೆಂಗಳೂರುಗಳಿಗೆ ವರ್ಷದಲ್ಲಿ 6 ತಿಂಗಳು ಗುಳೆ ಹೋಗುವುದು ಮಾಮೂಲಾಗಿದೆ. ಯೋಜನೆಯಲ್ಲಿ ನಡೆಯುತ್ತಿರುವ ಬೋಗಸ್ ಹಾಜರಾತಿಗೆ ಕಡಿವಾಣ ಬಿದ್ದರೆ ಗುಳೆ ಕಾರ್ಮಿಕರು ಇಲ್ಲಿಯೇ ಕೆಲಸ ಮಾಡುತ್ತಾರೆ. ಅಧಿಕಾರಿಗಳ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸ್ಸಪ್ಪ ಮಮಶೆಟ್ಟಿ ತಿಳಿಸಿದರು.

ಕಾಮಗಾರಿ ಪರಿಶೀಲನೆ: ಈಚೆಗೆ ತಾಲ್ಲೂಕಿನ ಕುಂಚಾವರಂ ಬಳಿಯ ಲಿಂಗಾ ನಗರ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ 350ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಜಿ.ಪಂ. ಸಿಇಒ ಭಂವರಸಿಂಗ್ ಮೀನಾ ಪರಿಶೀಲಿಸಿದರು.

ಶಾಮರಾವ್ ತಾಜಲಾಪುರ ಕಾಯಕ ಬಂಧು ಗ್ರಾ.ಪಂ. ಕನಕಪುರ
ಶಾಮರಾವ್ ತಾಜಲಾಪುರ ಕಾಯಕ ಬಂಧು ಗ್ರಾ.ಪಂ. ಕನಕಪುರ
ಶAಕರ ರಾಠೋಡ್ ಇಒ ತಾಪಂ. ಚಿಂಚೋಳಿ
ಶAಕರ ರಾಠೋಡ್ ಇಒ ತಾಪಂ. ಚಿಂಚೋಳಿ
ನರೇಗಾದಿಂದ ನಮಗೆ ತುಂಬಾ ಅನುಕೂಲವಾಗಿದೆ. ನಮ್ಮ ಊರಿನಲ್ಲಿ 150 ಕಾರ್ಮಿಕರನ್ನು ಸಂಘಟಿಸಿ ಕೆಲಸಕ್ಕೆ ಹಚ್ಚಿದ್ದೇನೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ
ಶಾಮರಾವ್ ತಾಜಲಾಪುರ ಕಾಯಕ ಬಂಧು ಕನಕಪುರ ಗ್ರಾ.ಪಂ
ತಾಲ್ಲೂಕಿನಲ್ಲಿ ಈವರೆಗೆ 27 ಸಾವಿರ ಮಾನವ ದಿನಗಳ ಸೃಜನೆ ಮಾಡಲಾಗಿದೆ. ಜೂನ್ ಆರಂಭಕ್ಕಿಂತ ಮೊದಲು 2 ಲಕ್ಷ ತಲುಪುವ ಗುರಿ ಹಾಕಿಕೊಂಡಿದ್ದೇವೆ. ಮೇ ತಿಂಗಳಿನಿಂದ ಕಾರ್ಮಿಕರ ಸಂಖ್ಯೆ ದುಪ್ಪಟ್ಟಾಗಲಿದೆ
ಶಂಕರ ರಾಠೋಡ್ ಇಒ ತಾಪಂ. ಚಿಂಚೋಳಿ
ಅಕ್ರಮಕ್ಕೆ ತಡೆ ಹೇಗೆ?
ಆ್ಯಪ್‌ ತೆರೆದರೆ ಕಾಮಗಾರಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಹಾಜರಾತಿ ಪಟ್ಟಿ ಬರುತ್ತದೆ. ಅದನ್ನು ಪರಿಶೀಲಿಸಿ ಅದೇ ಸ್ಥಳದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರ ಫೋಟೊ ಸೆರೆ ಹಿಡಿದು ಆ್ಯಪ್‌ನಲ್ಲಿ ಅಳವಡಿಸಲಾಗುತ್ತಿದೆ. ಹೀಗೆ ಅಳವಡಿಸಿದ ಫೋಟೊ ಮತ್ತು ಹಾಜರಾತಿ ವಿವರವನ್ನು ಜಿ.ಪಂ. ಅಧಿಕಾರಿಗಳು ಪರಿಶೀಲಿಸುತ್ತಾರೆ. ಒಂದೊಮ್ಮೆ ಫೋಟೊದಲ್ಲಿ ಕಡಿಮೆ ಜನ ಕಂಡು ಬಂದು ಹಾಜರಾತಿ ಹಾಕಿದ್ದರೆ ಮೇಲಧಿಗಳು ಸಂಬಂಧಿಸಿದ ಪಿಡಿಒ ಅಥವಾ ಕೆಲಸ ಮಾಡುತ್ತಿರುವ ಕಾಯಕ ಬಂಧು ಎಂಜಿನಿಯರ್ ಅವರಿಂದ ವಿವರಣೆ ಪಡೆಯಲಾಗುತ್ತದೆ. ಉದ್ಯೋಗ ಖಾತ್ರಿ ಆಯುಕ್ತರು ಮತ್ತು ಆಯಾ ಜಿ.ಪಂ ಸಿಇಒ  ಮೇಲುಸ್ತುವಾರಿಯಿಂದಾಗಿ ಅವ್ಯವಹಾರಗಳಿಗೆ ಬ್ರೇಕ್ ಬೀಳುತ್ತಿದೆ. ಬೋಗಸ್ ಹಾಜರಾತಿ ಕಂಡು ಬಂದರೆ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿ ಸರಿಪಡಿಸಲಾಗುತ್ತಿದೆ. ಇದರಿಂದ ಪ್ರಯೋಜನವಾಗದಿದ್ದಾಗ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT