ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌‘ಪಿ.ಎಂ. ಬಿರಾದಾರ ಡಯಾಲಿಸಿಸ್ ಕೇಂದ್ರಕ್ಕೆ ₹ 5 ಲಕ್ಷ ನೆರವು’

Published 29 ಫೆಬ್ರುವರಿ 2024, 16:04 IST
Last Updated 29 ಫೆಬ್ರುವರಿ 2024, 16:04 IST
ಅಕ್ಷರ ಗಾತ್ರ

ಕಲಬುರಗಿ: ನಿಸ್ವಾರ್ಥದಿಂದ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ಸಲ್ಲಿಸುತ್ತಿರುವ ನಗರದ ಶ್ರೀಮತಿ ಪೂರ್ಣಿಮಾ ಪಿ.ಎಂ. ಬಿರಾದಾರ ಚಾರಿಟಬಲ್ ಡಯಾಲಿಸಿಸ್ ಕೇಂದ್ರಕ್ಕೆ ₹ 5 ಲಕ್ಷ ನೆರವು ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಘೋಷಿಸಿದರು.

ಕೇಂದ್ರದ ಮೂರನೇ ವಾರ್ಷಿಕೋತ್ಸವ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಪಿ.ಎಂ. ಬಿರಾದಾರ ಅವರಿಗೆ ಗುರುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಯಾಲಿಸಿಸ್ ಸೇವೆಯನ್ನು ಕಳೆದ ಮೂರು ವರ್ಷಗಳಿಂದ ಶರಣು ಪಪ್ಪಾ ಅವರು ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಗುಣಮಟ್ಟದ ಡಯಾಲಿಸಿಸ್ ಸೇವೆ ಇಲ್ಲಿ ಸಿಗುತ್ತಿದೆ’ ಎಂದರು.

ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್. ಮಾತನಾಡಿ, ‘ಕಿಡ್ನಿ ವೈಫಲ್ಯಗೊಂಡ ರೋಗಿಗಳು ಡಯಾಲಿಸಿಸ್‌ಗಾಗಿ ಪರದಾಡುವ ಸನ್ನಿವೇಶ ಎಲ್ಲೆಡೆ ಕಾಣುತ್ತೇವೆ. ಪ್ರತಿ ಜಿಲ್ಲೆಯಲ್ಲಿಯೂ ಉಚಿತ ಹಾಗೂ ಸ್ವಚ್ಛತೆಯಿಂದ ಕೂಡಿದ ಡಯಾಲಿಸಿಸ್ ಕೇಂದ್ರಗಳು ಆರಂಭವಾಗಬೇಕು. ಪೂರ್ಣಿಮಾ ಪಿ.ಎಂ. ಬಿರಾದಾರ ಡಯಾಲಿಸಿಸ್ ಕೇಂದ್ರವು ಆ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಚಾರಿಟಬಲ್ ಡಯಾಲಿಸಿಸ್ ಕೇಂದ್ರದ ಮುಖ್ಯಸ್ಥ ಶರಣು ಪಪ್ಪಾ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಒಟ್ಟು 10 ಸಾವಿರ ಡಯಾಲಿಸಿಸ್‌ಗಳನ್ನು ಮಾಡಲಾಗಿದೆ. ಉತ್ತಮ ಗುಣಮಟ್ಟದ ಡಯಾಲಿಸಿಸ್‌ಗೆ ಕೇಂದ್ರವು ಹೆಸರುವಾಸಿಯಾಗಿದ್ದು, ದಾನಿಗಳ ನೆರವಿನಿಂದ ನಡೆಸಿಕೊಂಡು ಬರುತ್ತಿದ್ದೇವೆ’ ಎಂದರು.

ಗೌರವ ಡಾಕ್ಟರೇಟ್ ಪಡೆದ ಡಾ. ಪಿ.ಎಂ. ಬಿರಾದಾರ ಅವರನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಶಿವಾನಂದ ಪಿಸ್ತಿ, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ, ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಡಿ. ಕಿಶೋರಬಾಬು, ನೀಲಕಂಠರಾವ್ ಮೂಲಗೆ, ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಹಾಗೂ ಚಾರಿಟಬಲ್ ಡಯಾಲಿಸಿಸ್ ಕೇಂದ್ರ ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT