ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | '1.50 ಲಕ್ಷ ಪದವೀಧರರಿಗಿದೆ ಮತದಾನದ ಹಕ್ಕು'

ವಿಧಾನ ಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜೂನ್ 3ರಂದು ಮತದಾನ
Published 4 ಮೇ 2024, 15:57 IST
Last Updated 4 ಮೇ 2024, 15:57 IST
ಅಕ್ಷರ ಗಾತ್ರ

ಕಲಬುರಗಿ: ಆರು ವರ್ಷಕ್ಕೊಮ್ಮೆ ಬರುವ ವಿಧಾನ‍ ಪರಿಷತ್‌ನ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಒಂದು ಸ್ಥಾನಕ್ಕೆ ಇದೇ 9ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಜೂನ್ 3ರಂದು ಚುನಾವಣೆ ನಡೆಯಲಿದೆ. ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಟ್ಟು 1,50,184 ನೋಂದಾಯಿತ ಪದವೀಧರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 20ರಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. ಜೂನ್ 3ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ. ಜೂನ್ 6ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ’ ಎಂದು ಹೇಳಿದರು.

ನಾಮಪತ್ರಗಳ ನಮೂನೆಗಳನ್ನು ಕಲಬುರಗಿಯ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚುನಾವಣಾ ಶಾಖೆಯಿಂದ ಪಡೆಯಬಹುದು. ಭರ್ತಿ ಮಾಡಿದ ನಾಮಪತ್ರಗಳನ್ನು ಮೇ 9ರಿಂದ 16ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಲ್ಲಿಸಬಹುದು. ಕನಿಷ್ಠ 30 ಮತದಾರರು ಹಾಗೂ 16 ಕಿ.ಮೀ. ವ್ಯಾಪ್ತಿಯೊಳಗೆ ಮತಗಟ್ಟೆ ಸ್ಥಾಪಿಸಲು ಅವಕಾಶವಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುವಂತೆ ಈಗ 160 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

2018ರಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ 82,054 ಮತದಾರರ ಪೈಕಿ 55,471 ಜನ ಮತ ಚಲಾಯಿಸಿದ್ದು, ಶೇ 67.50ರಷ್ಟು ಮತದಾನವಾಗಿತ್ತು. 24,416 ಮತಗಳನ್ನು ಪಡೆಯುವ ಮೂಲಕ ಚಂದ್ರಶೇಖರ ಬಿ. ಪಾಟೀಲ ಹುಮನಾಬಾದ್ ವಿಜೇತರಾಗಿದ್ದರು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾರದರ್ಶಕವಾಗಿ ಚುನಾವಣೆ ನಡೆಸುವ ದೃಷ್ಟಿಯಿಂದ ಫ್ಲೈಯಿಂಗ್ ಸ್ಕ್ವಾಡ್ ಟೀಮ್, ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್, ಸ್ವೀಪ್ ಸಮಿತಿ ಸೇರಿದಂತೆ ವಿವಿಧ ತಂಡಗಳು ಅಧಿಸೂಚನೆ ದಿನದಿಂದ ಚುನಾವಣೆ ಮುಕ್ತಾಯದವರೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ ಎಂದು ಕೃಷ್ಣ ಬಾಜಪೇಯಿ ತಿಳಿಸಿದರು.

ಮತದಾನ ದಿನದಂದು ಮತಗಟ್ಟೆ ಸಿಬ್ಬಂದಿಗೆ ಬಿಸಿಯೂಟದ ವ್ಯವಸ್ಥೆ ಹಾಗೂ ಅತಿ ಉಷ್ಣಾಂಶವಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೇ 6ರವರೆಗೆ ಪದವೀಧರ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ನಮೂನೆ 18 ಸಲ್ಲಿಸುವ ಮೂಲಕ ಹೆಸರು ಸೇರಿಸಬಹುದು. ಜಿಲ್ಲಾಧಿಕಾರಿ ಕಚೇರಿ ಸ್ಥಳೀಯ ಸಂಸ್ಥೆಗಳು ತಹಶೀಲ್ದಾರ್ ಕಚೇರಿಗಳಲ್ಲಿ ಕೊಡಬಹುದು

-ಕೃಷ್ಣ ಬಾಜಪೇಯಿ ಪ್ರಾದೇಶಿಕ ಆಯುಕ್ತ ಕಲಬುರಗಿ

ಪದವೀಧರ ಕ್ಷೇತ್ರದ ಮತದಾರರ ವಿವರ ಜಿಲ್ಲೆ; ಪುರುಷರು; ಮಹಿಳೆಯರು; ಇತರೆ; ಒಟ್ಟು ಕಲಬುರಗಿ; 21990; 15272; 5; 37267 ಬೀದರ್; 16142; 9849; 0; 25991 ಬಳ್ಳಾರಿ; 11922; 7092; 4; 25991 ರಾಯಚೂರು; 12947; 6442; 5; 19394 ಕೊಪ್ಪಳ; 10983; 5881; 1; 16865 ಯಾದಗಿರಿ; 10122; 4525; 3; 14650 ವಿಜಯನಗರ; 11078; 5919; 2; 16999 ಒಟ್ಟು; 95184; 54980; 20; 150184

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT