ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ
Published 20 ಫೆಬ್ರುವರಿ 2024, 16:29 IST
Last Updated 20 ಫೆಬ್ರುವರಿ 2024, 16:29 IST
ಅಕ್ಷರ ಗಾತ್ರ

ಕಲಬುರಗಿ: ಮಹಾನಗರ ಪಾಲಿಕೆಯ ಮೂವರು ಅಧಿಕಾರಿಗಳು ತಮ್ಮ ಫೋನ್ ಸಂಭಾಷಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಜಿಲ್ಲಾ ಘಟಕ ಹಾಗೂ ಅಂಬೇಡ್ಕರ್ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಕಚೇರಿ ಮುಂಭಾಗ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಮಾತನಾಡಿ, ‘ಕೆಎಎಸ್ ಅಧಿಕಾರಿಯಾಗಿ ಅಂಬೇಡ್ಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಹಶೀಲ್ದಾರ್ ಆಗಿದ್ದವರು ಕೇಳ ಹಂತದ ಅಧಿಕಾರಿಗಳನ್ನು ಮುಂದೆ ಕೂರಿಸಿಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಖಂಡಿಸಿದರು.

‘ಅವರು ಹೇಗೆ ಕೆಎಸ್‌ಎಸ್ ಆಗಿದ್ದಾರೆ ಎಂಬುದು ನಮಗೆ ಗೊತ್ತಿದೆ. ಬೆತ್ತಲೆ ಮಾಡಿ ರಸ್ತೆ ಮೇಲೆ ನಿಲ್ಲಿಸುತ್ತೇವೆ. ದೇಶಕ್ಕೆ ಸಂವಿಧಾನ ಬರೆದು ಕೊಟ್ಟ ಮಹಾನ್ ಅಂಬೇಡ್ಕರ್ ಅವರು ದಲಿತ ಎಂಬ ಕಾರಣಕ್ಕೆ ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಚೇರಿಯ ಸಾಮಾನ್ಯ ಸೂಪರಿಂಟೆಂಡೆಂಟ್, ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಹಾಸ್ಯ ಮಾಡುತ್ತಾರೆ. ಈ ರೀತಿ ಮಾತಾಡುವವರ ಮನೆ– ಮನೆಗೆ ಹೋಗಿ ಹೊಡೆಯುತ್ತೇವೆ’ ಎಂದರು.

ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡಿ, ಬಂಧಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ‘ಆದಷ್ಟು ಬೇಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರಬೇಕು’ ಎಂದು ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಅವರಿಗೆ ಸೂಚಿಸಿದರು.

‘ಪ್ರಕರಣದಲ್ಲಿ ಪಾಲಿಕೆಯ ಅಧಿಕಾರಿಗಳು ಇರುವುದರಿಂದ ಅವರ ಬಗ್ಗೆ ವರದಿ ಸಲ್ಲಿಸಿ. ಸರ್ಕಾರದ ಹಂತದಲ್ಲಿ ಕ್ರಮ ತೆಗೆದುಕೊಳ್ಳುವುದು ಇದ್ದರೆ ಪ್ರಸ್ತಾವನೆಯನ್ನು ಸಲ್ಲಿಸೋಣ’ ಎಂದು ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಅವರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಬಾಬು ಭೋವಿ, ಶರಣು ಆತನೂರ, ಅರುಣಕುಮಾರ, ಪ್ರದೀಪ ಬೋರಾಳಕರ್, ಅನಿಲ್‌ಕುಮಾರ, ಅರುಣಕುಮಾರ ಕೋಟೆ, ಲೋಕೇಶ ಹಾದಿಮನಿ, ಕಮಲ್ ಕಪನೂರ್, ದೇವೇಂದ್ರ ಯಳಸಂಗಿ, ಅಜಯ ಸಿಂಗ್, ರವಿಕುಮಾರ ಸಿಂದೆ, ಅಶೋಕ ಡಾಂಗೆ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT