ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ | ವಾಡಿಕೆಗಿಂತ ಹೆಚ್ಚು ಮಳೆ: ಬಿತ್ತನೆ ಸಿದ್ಧತೆಯಲ್ಲಿ ಅನ್ನದಾತರು

Published 28 ಮೇ 2024, 5:17 IST
Last Updated 28 ಮೇ 2024, 5:17 IST
ಅಕ್ಷರ ಗಾತ್ರ

ವಾಡಿ: ಮಳೆಯ ತೀವ್ರ ಕೊರತೆ ಮಧ್ಯೆ ಸತತ ಬಿರು ಬೇಸಿಗೆಗೆ ತತ್ತರಿಸಿದ್ದ ರೈತರು ಈಗ ಬೇಸಿಗೆಯ ಬವಣೆ ಮರೆತು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿದ್ದಾರೆ. ಎರಡು ಮೂರು ಸಲ ಉತ್ತಮ ಮಳೆಯಾಗಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.

ಬರಗಾಲದಿಂದ ಹೊಲಕ್ಕೆ ವಿಮುಖಗೊಂಡಿದ್ದ ರೈತರು ಕಳೆದ ನಾಲ್ಕೈದು ದಿನಗಳಿಂದ ಜಮೀನುಗಳ ಹರಗಿ, ಹದಗೊಳಿಸಲು ಮುಂದಾಗುತ್ತಿದ್ದಾರೆ. ವಾಡಿ ಹಾಗೂ ನಾಲವಾರ ವಲಯದಲ್ಲಿ ಬಿತ್ತನೆಗೆ ಪೂರಕ ಚಟುವಟಿಕೆಗಳು ಗರಿಗೆದರಿವೆ. ಜಮೀನುಗಳಲ್ಲಿ ಕುಂಟೆ ಹೊಡೆದು ಕಸಕಡ್ಡಿ ಹಾಯುವುದು, ಸೆಗಣಿ ಗೊಬ್ಬರ ಚೆಲ್ಲುವುದು ಕಂಡುಬರುತ್ತಿದೆ.

ರೈತರ ಹಂಗಾಮೆಂದೇ ಕರೆಯುವ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಿದ್ಧರಾಗುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ 42 ಡಿಗ್ರಿ, ಸೆಲ್ಸಿಯಸ್‌ನಿಂದ 45ಡಿಗ್ರಿ ಸೆಲ್ಸಿಯಸ್‌ನಷ್ಟು ಇದ್ದ ತಾಪಮಾನ ವರುಣನ ಆಗಮನದಿಂದ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಮಳೆಗಾಗಿ ಕಾಯುತ್ತಾ ಕುಳಿತಿದ್ದ ರೈತರಲ್ಲಿ ಆಶಾಭಾವನೆ ಮೂಡಿದ್ದು ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಲು ಆರಂಭಿಸಿದ್ದಾರೆ.

ವಾಡಿಕೆಗಿಂತಲೂ ಹೆಚ್ಚು ಮಳೆ: ಮೇ ಅಂತ್ಯದವರೆಗೆ ತಾಲ್ಲೂಕಿನಲ್ಲಿ 70.10 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಈಗಾಗಲೇ 110.02 ಮಿ.ಮೀ.ಮಳೆ ಸುರಿದಿದೆ. ಇದು ರೈತರಲ್ಲಿ ಉತ್ಸಾಹ ತುಂಬಿದೆ. ಮಳೆಯ ಉತ್ತಮ ಆರಂಭದಿಂದ ಭೂಮಿ ಹದಗೊಳಿಸಲು ಎಡೆಬಿಡದೆ ಮುಂದಾಗಿರುವುದು ಕಾಣುತ್ತಿದೆ. ಅಲ್ಪ ಮಳೆಗೂ ಬಿತ್ತನೆಗೆ ಅನುಕೂಲವಾಗುವ ಕೆಂಪು ಮಣ್ಣಿನ ಮಸಾರಿ ಜಮೀನುಗಳಿಗೆ ರೋಹಿಣಿ ಮಳೆ ಬಂದರೆ ಸಾಕು ಬಿತ್ತನೆ ಕಾರ್ಯ ಗರಿಗೆದರುತ್ತವೆ. ಆದರೆ ಕಪ್ಪು ಮಣ್ಣಿನ ಜಮೀನುಗಳಿಗೆ ಉತ್ತಮ ಮಳೆ ಸುರಿದರೆ ಮಾತ್ರ ಬಿತ್ತನೆ ನಡೆಯುತ್ತದೆ.

ಬೀಜ, ಗೊಬ್ಬರ ಸಂಗ್ರಹ: ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ, ಗೊಬ್ಬರ ಸಂಗ್ರಹಣೆಗೆ ರೈತರು ಹಾಗೂ ಕೃಷಿ ಇಲಾಖೆ ಮುಂದಾಗುತ್ತಿದೆ. ರೈತರು ಅಗ್ರೋ ಸೆಂಟರ್‌ಗಳಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ.

ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ. ಆದರೂ ರೋಹಿಣಿ ಮಳೆ ಸುರಿಯುವ ಭರವಸೆ ಇದೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರ ಬಿತ್ತನೆಗೆ ಬೇಕಾದ ಬೀಜ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ.

ರೋಹಿಣಿ ಮಳೆಯೇ ಆಧಾರ: ಮುಂಗಾರು ಹಂಗಾಮಿನಲ್ಲಿ ರೋಹಿಣಿ ಮಳೆಯೇ ಮುಖ್ಯ ಆಧಾರವಾಗಿದೆ. ಇದು ಸಮರ್ಪಕವಾಗಿ ಸುರಿದರೆ ಮುಂಗಾರಿನ ವಾಣಿಜ್ಯ ಬೆಳೆ ಹೆಸರು ಕಾಳು ಬಿತ್ತನೆಗೆ ಸಾಧ್ಯ. ಜೊತೆಗೆ ಫಸಲು ಉತ್ತಮವಾಗಿ ಬರುತ್ತದೆ. ಇದರ ಜೊತೆಗೆ ಬಿ.ಟಿ.ಹತ್ತಿ, ತೊಗರಿ ಹಾಗೂ ಕಡಲೆ ಬಿತ್ತನೆ ಮಾಡುತ್ತಾರೆ. ಮೇ 24-25ರ ಸುಮಾರಿಗೆ ರೋಹಿಣಿ ಮಳೆ ಆರಂಭವಾಗುತ್ತದೆ. ಆದರೆ ಅದು ಸುರಿದು ರೈತರನ್ನು ಖುಷಿಗೊಳಿಸಬೇಕಿದೆ. ಸದ್ಯ ಈಗ ರೈತರ ಚಿತ್ತ ರೋಹಿಣಿ ಮಳೆಯತ್ತ ಎನ್ನುವಂತಾಗಿದೆ.

ಹೆಸರು ಬಿತ್ತನೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದೇವೆ. ಉತ್ತಮ ಮಳೆಯಾಗಿದ್ದು ಜಮೀನು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ
ಬಸವರಾಜ ಹಣಮಂತ, ಲಾಡ್ಲಾಪುರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT