ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಪಿಗಾಗಿ ಕಲಬುರಗಿಯಲ್ಲಿ ಮುಂದುವರಿದ ಶೋಧ

ಕೆಕೆಆರ್‌ಟಿಸಿ ಸಿಬ್ಬಂದಿಯ ವಿಚಾರಣೆ; ಪಿಎಫ್‌ಐ ಮುಖಂಡರ ಮೇಲೆಯೂ ಎನ್‌ಐಎ ನಿಗಾ
Published 10 ಮಾರ್ಚ್ 2024, 15:00 IST
Last Updated 10 ಮಾರ್ಚ್ 2024, 15:00 IST
ಅಕ್ಷರ ಗಾತ್ರ

ಕಲಬುರಗಿ: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಳಿಗಾಗಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತಂಡ ಕಲಬುರಗಿಯಲ್ಲಿ ಬೀಡುಬಿಟ್ಟಿದ್ದು, ಭಾನುವಾರವೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಐವರು ಸಿಬ್ಬಂದಿಯ ವಿಚಾರಣೆ ನಡೆಸಿತು.

ಬಳ್ಳಾರಿ–ಕಲಬುರಗಿ ಮಾರ್ಗದ ಬಸ್ ಚಾಲಕ ಮತ್ತು ನಿರ್ವಾಹಕರ ವಿಚಾರಣೆಯ (ಮಾ.9) ಬಳಿಕ, ಭಾನುವಾರ ಕೆಕೆಆರ್‌ಟಿಸಿಯ ಇಬ್ಬರು ಚಾಲಕರು ಹಾಗೂ ಮೂವರು ನಿರ್ವಾಹಕರನ್ನು ಅಜ್ಞಾತ ಸ್ಥಳಕ್ಕೆ ಎನ್‌ಐಎ ಅಧಿಕಾರಿಗಳು ಕರೆದೊಯ್ದರು. ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ಕಲಬುರಗಿಯಿಂದ ಹೈದರಾಬಾದ್ ತೆರಳಿದ ಬಸ್‌ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ಶಂಕಿತ ಆರೋಪಿ ಮಾರ್ಚ್ 1ರ ರಾತ್ರಿ ಬಳ್ಳಾರಿ ಬಸ್ ನಿಲ್ದಾಣದಿಂದ ಕಲಬುರಗಿಗೆ ಬಂದ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ 2ರ ಬೆಳಿಗ್ಗೆ 5.30 ಮತ್ತು 6ಕ್ಕೆ ಕಲಬುರಗಿಯಿಂದ ಹೈದರಾಬಾದ್‌ಗೆ ತೆರಳಿದ ಬಸ್ ಚಾಲಕರು ಹಾಗೂ ನಿರ್ವಾಹಕರು ಸೇರಿ ಐವರು ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಐಎ ಅಧಿಕಾರಿಗಳು ಶಂಕಿತ ಆರೋಪಿಯು ಬಿಎಂಟಿಸಿ ಬಸ್‌ನಲ್ಲಿ ನಿಂತಿದ್ದ ಭಾವಚಿತ್ರವನ್ನು ಸ್ಥಳೀಯ ಪೊಲೀಸರಿಗೆ ನೀಡಿದ್ದಾರೆ. ಬೈಕ್, ಆಟೊ, ಬಸ್‌ಗಳಲ್ಲಿ ಸಂಚರಿಸುವವರ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದರು. ಹೀಗಾಗಿ, ಪೊಲೀಸರು ರಾತ್ರಿಯಿಡೀ ಶಂಕಿತನ ಮಾಹಿತಿಗಾಗಿ ಹುಡುಕಾಟ ನಡೆಸಿದರು ಎಂದು ಗೊತ್ತಾಗಿದೆ.

2022ರ ಸೆಪ್ಟೆಂಬರ್ 22ರಂದು ಎನ್‌ಐಎ ತಂಡ ನಗರದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಪ್ರಮುಖರ ಮನೆಗಳ ಮೇಲೆ ದಾಳಿ ಮಾಡಿ, ಅವರನ್ನು ವಶಕ್ಕೆ ಪಡೆದಿತ್ತು. ಹೀಗಾಗಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ಜತೆಗೆ ಆರೋಪಿಯು ಸಂಪರ್ಕ ಹೊಂದಿರುವ ಶಂಕೆಯಡಿ ಸಂಘಟನೆಯ ಸದಸ್ಯರ ಮೇಲೆ‌ಯೂ ಎನ್‌ಐಎ ನಿಗಾ ಇರಿಸಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT