ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಂಗಳಿ ಭೀಮೇಶ್ವರ ದೇವರ ರಥೋತ್ಸವ

ವೈಭವದ ಪಲ್ಲಕ್ಕಿ ಮೆರವಣಿಗೆ, ಕಲಾತಂಡಗಳ ಆಕರ್ಷಣೆ
Published 30 ಏಪ್ರಿಲ್ 2024, 6:10 IST
Last Updated 30 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ತೆಂಗಳಿ ಭೀಮೇಶ್ವರ(ಶರಣಬಸವೇಶ್ವರ) ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ರಥೋತ್ಸವವು ಅದ್ದೂರಿಯಾಗಿ ನೆರವೇರಿತು.

ಕುಂಭ, ಕಳಸ, ಮಿಣಿ, ನಂದಿಕೋಲಿನ ಮೆರವಣಿಗೆ ಹಾಗೂ ಪುರವಂತರ ಕುಣಿತ ಸೇವೆ ಮುಗಿಯುತ್ತಿದ್ದಂತೆ ತೇರಿಗೆ ಉತ್ತತ್ತಿ-ನಾರು, ಫಲಪುಷ್ಪ ತೂರಿ ಜೈಕಾರ ಹಾಕಿದ ಭಕ್ತರು ಕೈಮುಗಿದು ನಮಿಸಿ ಭಕ್ತಿಭಾವ ಮೆರೆದರು.

ಮುಂಚೆ ಭಾನುವಾರ ರಾತ್ರಿ ಡ್ರಮ್, ಬ್ಯಾಂಡ್, ಡೊಳ್ಳು, ಕೋಲಾಟ, ಬ್ಯಾಂಜೊ, ಭಜನಾಮಂಡಳಿ ಸೇರಿದಂತೆ ಪ್ರಸಿದ್ಧ ಕಲಾತಂಡಗಳ, ಪುರವಂತರ ಝೇಂಕಾರದ ಮಧ್ಯೆ ಈಶ್ವರ(ಪಂಚಲಿಂಗೇಶ್ವರ) ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಮೆರವಣಿಗೆಯು ಸೋಮವಾರ ನಸುಕಿನಜಾವ ದೇವಸ್ಥಾನ ತಲುಪಿತು.

ಪುರವಂತರು ಸೇರಿ ಅಪಾರ ಭಕ್ತರು ಹಸಿಮೈಯಿಂದ ಅಗ್ನಿಪ್ರವೇಶ ಮಾಡಿ ಹರಕೆ ತೀರಿಸಿದರು. ಸಂಜೆ ಹಲಗೆ-ಡೊಳ್ಳು, ಬಾಜಾ-ಬಜಂತ್ರಿ ವಾದ್ಯಮೇಳಗಳೊಂದಿಗೆ ಭಕ್ತರಾದ ಭೀಮರಾವ ಮಾಲಿಪಾಟೀಲ ಮನೆಯಿಂದ ಕುಂಭ, ಶರಣಕುಮಾರ ಪೊ.ಪಾಟೀಲ ಮನೆಯಿಂದ ಕಳಸ, ಧನಂಜಯ ಕುಲಕರ್ಣಿ ಮನೆಯಿಂದ ಮಿಣಿ ಮತ್ತು ಪ್ರಕಾಶ ಪಟ್ಟೇದ, ಬಸವರಾಜ ಬಸ್ತೆ ಮನೆ ಹಾಗೂ ತೊನಸನಹಳ್ಳಿ, ಅರಜಂಬಗಾ ಗ್ರಾಮದಿಂದ ನಂದಿಕೋಲಿನ ಭವ್ಯ ಮೆರವಣಿಗೆಯು ಆಗಮಿಸಿ ಅಲಂಕೃತ ರಥಕ್ಕೆ ಪ್ರದಕ್ಷಿಣೆ ಹಾಕಿತು.

ಹಿರೇಮಠದ ಪೀಠಾಧಿಪತಿ ಶಾಂತಸೋಮನಾಥ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಮಹಾಮಂಗಳಾರತಿ ಸಲ್ಲಿಸಿ, ಭಕ್ತರು ತೇರು ಎಳೆದು ಸಂಭ್ರಮಿಸಿದರು.

ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ ಸೇರಿದಂತೆ ಸದ್ಭಕ್ತ ಮಂಡಳಿ ಪದಾಧಿಕಾರಿಗಳು, ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಅನ್ನದಾಸೋಹ ನಡೆಯಿತು.

ಕಾಳಗಿ ಸಿಪಿಐ ವೈ.ಎನ್. ಗುಂಡುರಾವ, ಪಿಎಸ್ಐ ವಿಶ್ವನಾಥ ಬಾಕಳೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಂಗಳವಾರ (ಏ.30) ಸಂಜೆ 4 ಗಂಟೆಗೆ ಪೈಲ್ವಾನರಿಂದ ಜಂಗಿ ಕುಸ್ತಿಗಳು ನಡೆದವು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತೆಂಗಳಿ ಭೀಮೇಶ್ವರ ದೇವರು
ತೆಂಗಳಿ ಭೀಮೇಶ್ವರ ದೇವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT