ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Womens Day: ಗಾರ್ಮೆಂಟ್ಸ್‌ ಕಟ್ಟಿ 70 ಮಹಿಳೆಯರ ಬದುಕಿಗೆ ಆಸರೆಯಾದ ಶಿವಲೀಲಾ

ವಿಶ್ವರಾಧ್ಯ ಎಸ್.ಹಂಗನಳ್ಳಿ
Published : 8 ಮಾರ್ಚ್ 2024, 5:35 IST
Last Updated : 8 ಮಾರ್ಚ್ 2024, 5:35 IST
ಫಾಲೋ ಮಾಡಿ
Comments

ಕಲಬುರಗಿ: ಒಂದು ಕಾಲದಲ್ಲಿ ಬೆಂಗಳೂರಿನ ಗಾರ್ಮೆಂಟ್‌ನಲ್ಲಿ ಕಾರ್ಮಿಕರಾಗಿದ್ದ ಶಿವಲೀಲಾ ಚನ್ನಬಸಪ್ಪ ಪಾಟೀಲ ಅವರು ಸ್ವಂತ ಜಮೀನು ಮಾರಾಟ ಮಾಡಿ ಗಾರ್ಮೆಂಟ್ಸ್‌ ಉದ್ಯಮ ಕಟ್ಟಿಬೆಳೆಸಿದ ಯಶೋಗಾಥೆ ಇದು. ಸ್ವಾವಲಂಬಿ ಬದುಕು ಸಾಗಿಸುವುದರ ಜೊತೆಗೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 70 ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ.

ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದವರಾದ ಶಿವಲೀಲಾ ಅವರು ನಗರದ ಕಣ್ಣಿ ಮಾರ್ಕೆಟ್‌ ಪ್ರದೇಶದ ಜಿಡಿಎ ಲೇಔಟ್‌ನಲ್ಲಿ ‘ಎಸ್‌.ಎಸ್. ಪಾಟೀಲ ಗಾರ್ಮೆಂಟ್ಸ್‌’ ಉದ್ಯಮ ಸ್ಥಾಪಿಸಿದ್ದಾರೆ. 2023ರಲ್ಲಿ ಆರಂಭವಾದ ಉದ್ಯಮ ಕಳೆದ ಜನವರಿಗೆ ಒಂದು ವರ್ಷ ಪೂರೈಸಿದೆ. ಬೆಂಗಳೂರಿನ ರಿಲಯನ್ಸ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಬ್ರಾಂಡೆಡ್‌ ಬಟ್ಟೆಯ ಶರ್ಟ್ಸ್‌ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಬಾಡಿಗೆಯ ಮೂರು ಮಹಡಿಯಲ್ಲಿರುವ ಎಸ್‌.ಎಸ್.ಪಾಟೀಲ ಗಾರ್ಮೆಂಟ್ಸ್‌ನಲ್ಲಿ 120 ಹೊಲಿಗೆ ಯಂತ್ರಗಳಿವೆ. ಮೂವರು ಮೇಲ್ವಿಚಾರಕರಿದ್ದಾರೆ. ಹೀರಾಪುರ, ಸಿರಸಗಿ, ಗಬ್ಬೂರ್‌, ಮೇಳಕುಂದಿ, ವಾಡಿ, ಶಹಾಬಾದ್‌ ಸೇರಿದಂತೆ ವಿವಿಧೆಡೆಯ ಮಹಿಳೆಯರು ಇಲ್ಲಿ ಕೆಲಸಕ್ಕೆ ಬರುತ್ತಾರೆ. ಇವರಿಗೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ‘ಶಕ್ತಿ’ ಯೋಜನೆಯೂ ಆಸರೆಯಾಗಿರುವುದು ವಿಶೇಷ.

ಮೈರೂನ್‌, ರೇಖಾ, ಭಾಗ್ಯ, ಶೋಭಾ ಇಲ್ಲಿ ಕೇಳ್ರಿ... ಎಂದು ಕಾರ್ಮಿಕರಿಗೆ ಸಲಹೆ ನೀಡುತ್ತಿದ್ದ ಶಿವಲೀಲಾ ಸಿ.ಪಾಟೀಲ ಅವರನ್ನು ‘ಪ್ರಜಾವಾಣಿ’ ಸಂದರ್ಶಿಸಿದಾಗ, ‘ನಾನು ಇಂತಹವರ ಮಧ್ಯೆಯೇ ಕುಳಿತು ಕೆಲಸ ಮಾಡಿ ಜೀವನ ನಡೆಸಿದವಳು. ‘ಕುರ್ಚಿ’ ಬದಲಾದ ಮಾತ್ರಕ್ಕೆ ವರ್ತನೆ ಬದಲಾಗಿಲ್ಲ. ಈಗಲೂ ನಾನು ಕಾರ್ಮಿಕಳೇ, ಮಾಲೀಕಳಲ್ಲ’ ಎಂದರು. ಇದು ಕಾರ್ಮಿಕರೊಂದಿಗೆ ಅವರಿಗಿದ್ದ ಸ್ನೇಹಭಾವವನ್ನು ತೋರಿಸಿತು.

‘ಮದುವೆಯಾದ ನಾಲ್ಕು ವರ್ಷಗಳಲ್ಲಿಯೇ 2004ರಲ್ಲಿ ಪತಿ ತೀರಿಕೊಂಡರು. ಆಗ ನಾನು ಗರ್ಭಿಣಿ. ಜೊತೆಗೆ 3 ವರ್ಷದ ಮಗಳಿದ್ದಳು. ಬಡತನದ ಹಿನ್ನೆಲೆ ಜೀವನ ಸಾಗಿಸುವುದು ಕಷ್ಟವಾಯಿತು. ಈ ಮಧ್ಯೆ ಮತ್ತೊಬ್ಬ ಮಗಳು ಹುಟ್ಟಿದಳು. ಇಬ್ಬರು ಹೆಣ್ಣುಮಕ್ಕಳನ್ನು ಬೆಳೆಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಜೀವನ ನಡೆಸಲು 2009ರಲ್ಲಿ ಬೆಂಗಳೂರಿಗೆ ಹೋಗಿ ಗಾರ್ಮೆಂಟ್ಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆಗ ನನಗೆ ತಿಂಗಳಿಗೆ ₹1,800 ಸಂಬಳ. 2022ರಲ್ಲಿ ಕೆಲಸ ಬಿಡುವಾಗಿನ ವೇತನ ₹9,000 ಇತ್ತು’ ಎಂದು ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿದರು.

‘ಸ್ವಯಂ ಉದ್ಯಮ ಆರಂಭಿಸುವ ಆಲೋಚನೆ ಯಾವತ್ತೂ ಕಾಡುತ್ತಿತ್ತು. ಆದರೆ, ಅದಕ್ಕೆ ಛಲದ ಜೊತೆಗೆ ಆರ್ಥಿಕ ಶಕ್ತಿ ಬೇಕು ಎಂದು ಸುಮ್ಮನಾಗುತ್ತಿದ್ದೆ. ಕೊನೆಗೆ ನಮ್ಮ 5 ಎಕರೆ ಹೊಲ ಮಾರಾಟ ಮಾಡಿ ₹40 ಲಕ್ಷದಲ್ಲಿ ಗಾರ್ಮೆಂಟ್ಸ್‌ ಉದ್ಯಮ ಸ್ಥಾಪಿಸಿದೆ. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಬ್ಯಾಂಕ್‌ ಸಾಲ ದೊರೆಯಿತು. ಅಂಬೆಗಾಲಿಡುತ್ತಿರುವ ಈ ಉದ್ಯಮದಲ್ಲಿ ಲಾಭ ಬರದಿದ್ದರೂ ನಷ್ಟವಂತೂ ಆಗಿಲ್ಲ. ಸಮಯಕ್ಕೆ ಸರಿಯಾಗಿ ಕಾರ್ಮಿಕರಿಗೆ ಸಂಬಳ ನೀಡಿ ಸಮತೋಲಿತವಾಗಿ ಸಾಗುತ್ತಿದೆ’ ಎಂದರು.

‘ಗಾರ್ಮೆಂಟ್ಸ್‌ನಲ್ಲಿ ತಿಂಗಳಿಗೆ 15 ಸಾವಿರ ಶರ್ಟ್ಸ್‌ ತಯಾರಾಗುತ್ತಿವೆ. ಮುಂದೆ 25 ಸಾವಿರದಿಂದ 30 ಸಾವಿರ ಶರ್ಟ್ಸ್‌ ಸಿದ್ಧಪಡಿಸುವ ಗುರಿಯಿದೆ. ಇಲ್ಲಿಯೇ ಸಿದ್ಧಪಡಿಸುವ ಶರ್ಟ್ಸ್‌ಗಳನ್ನು ವಾಷಿಂಗ್‌ ಮತ್ತು ಫಿನಿಷಿಂಗ್‌ ಮಾಡುವ ಯೋಜನೆ ಕೂಡ ಇದೆ’ ಎನ್ನುತ್ತಾರೆ ಮೇಲ್ವಿಚಾರಕರಾದ ಬಾಬುರಾವ್‌ ಮತ್ತು ಕುಮಾರ್‌.

‘ನನ್ನಲ್ಲಿ ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಗೆ ಶಿಕ್ಷಣ, ಅಂಕಪಟ್ಟಿ ಕೇಳುವುದಿಲ್ಲ. ನಾನೂ ಕೂಡ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದ್ದೇನೆ. ಕೆಲಸ ಮಾಡುವ ಆಸಕ್ತಿ ಇದೆಯಾ? ಬಂದು– ಹೋಗುವುದಕ್ಕೆ ಸಾರಿಗೆ ಅನುಕೂಲ ಇದೆನಾ? ಎಂದಷ್ಟೇ ಕೇಳುತ್ತೇನೆ. ಅನುಭವವೂ ಬೇಕಿಲ್ಲ. 10 ದಿನ ನಾವೇ ತರಬೇತಿ ನೀಡಿ ಕೆಲಸ ಕೊಡುತ್ತೇವೆ’ ಎಂದು ಶಿವಲೀಲಾ ಪಾಟೀಲ ಹೇಳುತ್ತಾರೆ.

ಕಲಬುರಗಿಯ ಜಿಡಿಎ ಲೇಔಟ್‌ನಲ್ಲಿರುವ ಎಸ್.ಎಸ್‌.ಪಾಟೀಲ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕ ಮಹಿಳೆಯರೊಂದಿಗೆ ಶಿವಲೀಲಾ ಸಿ.ಪಾಟೀಲ–ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಲಬುರಗಿಯ ಜಿಡಿಎ ಲೇಔಟ್‌ನಲ್ಲಿರುವ ಎಸ್.ಎಸ್‌.ಪಾಟೀಲ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕ ಮಹಿಳೆಯರೊಂದಿಗೆ ಶಿವಲೀಲಾ ಸಿ.ಪಾಟೀಲ–ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಕನಸು ನನಸಾಗಿದೆ. ಮೇಲಾಗಿ 70 ಮಹಿಳೆಯರಿಗೆ ಉದ್ಯೋಗ ನೀಡಿದ ಸಂತೃಪ್ತಿಯಿದೆ. ಕಷ್ಟದ ದಿನಗಳನ್ನು ಮೆಟ್ಟಿ ನನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೇನೆ.
- ಶಿವಲೀಲಾ ಸಿ.ಪಾಟೀಲ ಎಸ್‌.ಎಸ್.ಪಾಟೀಲ ಗಾರ್ಮೆಂಟ್ಸ್‌

ಕಾರ್ಮಿಕರ ಕಷ್ಟ–ನಷ್ಟಗಳಿಗೆ ಸ್ಪಂದನೆ

ಎಸ್‌.ಎಸ್.ಪಾಟೀಲ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಬಹುತೇಕ ಮಹಿಳೆಯರು ಆರ್ಥಿಕವಾಗಿ ಹಿಂದುಳಿದವರು. ಅವರನ್ನು ಅಕ್ಕ–ತಂಗಿಯರೆಂದು ಭಾವಿಸಿರುವ ಶಿವಲೀಲಾ ಅವರು ಕಾರ್ಮಿಕರ ಕಷ್ಟ–ನಷ್ಟಗಳಿಗೆ ಸ್ಪಂದಿಸುತ್ತಾರೆ. ಅವರ ಹುಟ್ಟುಹಬ್ಬವನ್ನೂ ಸಹ ಆಚರಿಸಿ ಸಂಭ್ರಮಿಸುತ್ತಾರೆ. ‘ನಮಗೆ ಯಾವುದೇ ಕಷ್ಟವಿದ್ದರೂ ಶಿವಲೀಲಾ ಅವರು ಬಿಟ್ಟುಕೊಡುವುದಿಲ್ಲ. ಇಂಥ ಸಮಸ್ಯೆ ಕಷ್ಟ ಇದೆ ಎಂದು ಹೇಳುತ್ತಿದ್ದಂತೆ ನಾನಿದ್ದೇನೆ ಎಂದು ಅಭಯ ನೀಡುತ್ತಾರೆ. ಮಧ್ಯರಾತ್ರಿ ಕರೆ ಮಾಡಿದರೂ ಕುಟುಂಬದ ಯಜಮಾನಿಯಂತೆ ನೆರವಿಗೆ ನಿಲ್ಲುತ್ತಾರೆ’ ಎಂದು ಅಶೋಕ ನಗರದ ಕಾಂತಮ್ಮ ಅಭಿಮಾನದಿಂದ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT