ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ: ಸಿದ್ಧಲಿಂಗ ಸ್ವಾಮಿ ಆರೋಪ

Published 20 ನವೆಂಬರ್ 2023, 16:05 IST
Last Updated 20 ನವೆಂಬರ್ 2023, 16:05 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲೆಯಲ್ಲಿ ಇತ್ತೀಚೆಗೆ ಕಾನೂನು ವಿರೋಧವಾದ ಕೆಲವು ದ್ವೇಷಶಕ್ತಿಗಳ ಅಟ್ಟಹಾಸ ಮಿತಿಮೀರಿದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಗುಂಡಾಗಳ ಪ್ರಭುತ್ವ ಮಿತಿಮೀರಿದೆ’ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮಿ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿನ್ನೆ ಬೆಳಿಗ್ಗೆ ಶಂಕರವಾಡಿ ಕ್ರಾಸ್‌ ಬಳಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಾರೆ. ಅಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಚು ರೂಪಿಸಿ ಕಾರ್‌ ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.

‘ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಕೆಲಸ ರಾಜ್ಯ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿದೆ. ಘಟನೆ ನಡೆದು 30 ಗಂಟೆ ಕಳೆದರೂ ಬುದ್ಧ, ಬಸವ, ಅಂಬೇಡ್ಕರ್‌ ತತ್ವಗಳನ್ನು ಅರಿತು ಕುಡಿದು, ಇಲ್ಲಿಯ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡ ಪ್ರಿಯಾಂಕ್‌ ಖರ್ಗೆ ಅವರು ವಿರೋಧ ಪಕ್ಷದ ನೇತಾರನ ಮೇಲೆ ಹಲ್ಲೆಯಾದರೂ ತುಟಿ ಬಿಚ್ಚುತ್ತಿಲ್ಲ ಎಂದರೆ ಏನು ಅರ್ಥ?. ಇದರ ಹಿಂದೆ ಯಾರಿದ್ದಾರೆ’ ಎಂದು ಪ್ರಶ್ನಿಸಿದರು.

‘ದೈಹಿಕವಾಗಿ ಹಲ್ಲೆ ನಡೆದರೂ ಸರ್ಕಾರ ಹಾಗೂ ಸಚಿವರು ಮೌನವಹಿಸಿರುವುದು ದುರಂತ. ಇವರ ಮೌನ ದುಷ್ಟಶಕ್ತಿಗಳ ಅಟ್ಟಹಾಸಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯು ಹಿಂದೂ ಸಂಘಟನೆಗಳು ಹಾಗೂ ಸಂಘಟಕರನ್ನು ಗುರಿ ಪಡಿಸಿ ಕೇಸ್‌ ದಾಖಲಿಸುತ್ತಿದ್ದಾರೆ. ದಲಿತ ಸೇನೆ ಹೆಸರಿನ ಮುಖಂಡರು, ಅಂಕಲಗಿ ಗ್ರಾಮದಲ್ಲಿ ವಾಚಾಮಗೋಚರವಾಗಿ ಬಯ್ಯುತ್ತಾರೆ. ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ’ ಎಂದು ಆಪಾದಿಸಿದರು.

‘ಪೊಲೀಸ್‌ ಇಲಾಖೆ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಆದರೂ ಅವರ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ. ಇವುಗಳ ಬಗ್ಗೆ ಯಾವುದೂ ಜಿಲ್ಲಾಡಳಿತದ ಗಮನಕ್ಕೆ ಬರುವುದಿಲ್ವಾ. ಹಿಂದೂ ಸಂಘಟನೆಯವರು ಮಾತನಾಡಿದರೆ ಪ್ರಚೋದನಾಕಾರಿ ಎಂದು ಕೇಸ್‌ ದಾಖಲಿಸುತ್ತಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದರು.

‘ರಾಮ, ಹನುಮ, ಕರುಣೇಶ್ವರ ಚಿತ್ರಕ್ಕೆ ಸಗಣಿ ಬಳಿಯುತ್ತಾರೆ. ನನಗೆ ನೇರಾನೇರವಾಗಿ ಪೋನ್‌ನಲ್ಲಿ ಧಮ್ಕಿ ಹಾಕುತ್ತಾರೆ. ಅವರನ್ನು ಬಂಧಿಸುವುದಿಲ್ಲ. ಚಿತ್ತಾಪುರ ತಾಲ್ಲೂಕಿನಲ್ಲಿ ಮರಳು ಮಾಫಿಯಾ, ಫುಡ್‌ ಮಾಫಿಯಾ ನಡೆಯುತ್ತಿದೆ. ಅದರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದವರ ಮೇಲೆ ಹಲ್ಲೆಯಾಗಿದೆ. ಈ ಹಿಂದೆ ಪ್ರಿಯಾಂಕ್‌ ಖರ್ಗೆಯವರು ‘ನನ್ನನ್ನು ಪದೇ ಪದೇ ಕೆಣಕಬೇಡಿ. ನಾನು ಮನಸ್ಸು ಮಾಡಿದರೆ ಬಿಜೆಪಿಯವರಿಗೆ ರಸ್ತೆಯ ಮೇಲೆ ಓಡಾಡಲು ಬಿಡುವುದದಿಲ್ಲ’ ಎಂದು ಭಾಷಣ ಮಾಡಿದ್ದರು. ಇಂತಹ ಮಾತುಗಳು ದೃಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡಿದಂತಾಗಿದೆ’ ಎಂದರು.

ರಾಠೋಡ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಇಲ್ಲವಾದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಬಾರಾಯ ಕಂಬಾರ, ಬಸವರಾಜ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT