ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ | ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ ಯುವಕ: ವಿದ್ಯಾರ್ಥಿನಿ ಆತ್ಮಹತ್ಯೆ

ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ ಯುವಕ: ಪೋಷಕರ ಆರೋಪ
Published 6 ಜೂನ್ 2024, 5:10 IST
Last Updated 6 ಜೂನ್ 2024, 5:10 IST
ಅಕ್ಷರ ಗಾತ್ರ

ಕಲಬುರಗಿ: ಮದುವೆಯಾಗುವಂತೆ ದುಂಬಾಲು ಬಿದ್ದ ಯುವಕನಿಂದ ಬೇಸತ್ತ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೇಡಂ ತಾಲ್ಲೂಕಿನ ಗಾಡ್ದನ್ ಗ್ರಾಮದ ಬಿಕಾಂ ವಿದ್ಯಾರ್ಥಿನಿ ಶಿವಲೀಲಾ (21) ಆತ್ಮಹತ್ಯೆ ಮಾಡಿಕೊಂಡವರು. ವಿದ್ಯಾರ್ಥಿನಿ ಪೋಷಕರು ನೀಡಿದ ದೂರಿನ ಅನ್ವಯ ಅದೇ ಗ್ರಾಮದ ಕಾಶಪ್ಪ ನರಸಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾಶಪ್ಪ ಅವರು ಯುವತಿಯ ಹಿಂದೆ ಬಿದ್ದು ಮದುವೆ ಆಗುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ ವಿದ್ಯಾರ್ಥಿನಿ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವಿರುದ್ಧ ಎಫ್ಐಆರ್‌:

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ (ಇಸಿಸಿಇ) ತರಗತಿಗಳು ಆರಂಭಿಸಿದ್ದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯ ಸಂಬಂಧ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೂನ್ 3ರಂದು ವರಲಕ್ಷ್ಮಿ ಸೇರಿದಂತೆ ಹಲವರು ಗುಂಪುಗೂಡಿ ಕೆಕೆಆರ್‌ಡಿಬಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ರಸ್ತೆಯಿಂದ ಬೇರೆ ಕಡೆ ಹೋಗುವಂತೆ ಎಚ್ಚರಿಕೆ ನೀಡಿದರೂ ಅಲ್ಲಿಂದ ತೆರಳಲಿಲ್ಲ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ವರಲಕ್ಷ್ಮಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ನಗದು ಸೇರಿ ₹9.63 ಲಕ್ಷ ಮೌಲ್ಯದ ಒಡವೆ ಕಳವು:

ರಾಜರಾಜೇಶ್ವರಿ ನಗರದ ರೇವಣಸಿದ್ದ ಜಂಪಾ ಅವರ ಮನೆಯ ಬಾಗಿಲಿನ ಕೊಂಡಿ ಮುರಿದ ದುಷ್ಕರ್ಮಿಗಳು ನಗದು ಸೇರಿ ₹9.63 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.

ರೇವಣಸಿದ್ದ ಅವರು ಮೇ 28ರಂದು ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರ ಸಮೇತ ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಜೂನ್ 2ರ ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲಿನ ಕೊಂಡಿ ಮುರಿದ ಕಳ್ಳರು ಒಳ ನುಗ್ಗಿದರು. ಮನೆಯ ಅಲಮಾರಿಯಲ್ಲಿ ಇರಿಸಿದ್ದ ₹2.50 ಲಕ್ಷ ನಗದು ಸೇರಿ ₹9.63 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಬೈಕ್ ಸವಾರರ ಸಾವು:

ಎರಡು ಪ್ರತ್ಯೇಕ ಅಪಘಾತಗಳಲ್ಲಿ ಬೈಕ್‌ಗಳ ನಿಯಂತ್ರಣ ತಪ್ಪಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.

ಆಳಂದ ತಾಲ್ಲೂಕಿನ ಸುಂಟನೂರ್ ಕ್ರಾಸ್ ಸಮೀಪದ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಲಬುರಗಿ ತಾಲ್ಲೂಕಿನ ಕೆರೆ ಭೋಸಗಾ ಗ್ರಾಮದ ರಾಜಕುಮಾರ ಶ್ರೀಮಂತ (28) ಮೃತಪಟ್ಟರು. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಂಟನೂರ್ ಕ್ರಾಸ್ ಸಮೀಪದ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಾಜಕುಮಾರ ಅವರು ಕೆಳಗೆ ಬಿದ್ದರು. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಆಳಂದ ರಸ್ತೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಮೀಪದ ರಸ್ತೆಯಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮಂಜುನಾಥ ಚಂದ್ರಕಾಂತ (24) ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT