ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋರಾಟಕ್ಕೆ ಶಾಸಕ ಬಿ.ಆರ್‌. ಪಾಟೀಲ ಬೆಂಬಲ

ಚುನಾವಣೆ ವ್ಯವಸ್ಥೆ ಸುಧಾರಣೆಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೌನ ಸತ್ಯಾಗ್ರಹ
Published 21 ಮಾರ್ಚ್ 2024, 16:26 IST
Last Updated 21 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಕಲಬುರಗಿ: ಚುನಾವಣಾ ಪದ್ಧತಿ ಸುಧಾರಣೆ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಚುನಾವಣೆ ಸುಧಾರಣಾ ಹೋರಾಟ ಸಮಿತಿಯ ಸಂಸ್ಥಾಪಕ ರಮೇಶ ಆರ್‌. ದುತ್ತರಗಿ ಅವರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಟೌನ್‌ ಹಾಲ್ ಸಮೀಪದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ನಡೆಸುತ್ತಿರುವ ಮೌನ ಸತ್ಯಾಗ್ರಹ ಸ್ಥಳಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್‌. ಪಾಟೀಲ ಅವರು ಗುರುವಾರ ಭೇಟಿ ನೀಡಿದರು.

ಸತ್ಯಾಗ್ರಹ ಸ್ಥಳದಲ್ಲಿ ಕೆಲಹೊತ್ತು ಕುಳಿತು, ರಮೇಶ ಅವರಿಗೆ ಕಬ್ಬಿನ ಹಾಲು ಕುಡಿಸಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಈ ವೇಳೆ ಮಾತನಾಡಿದ ಬಿ.ಆರ್.ಪಾಟೀಲ ಅವರು, ‘ಚುನಾವಣೆ ವ್ಯವಸ್ಥೆ ಸುಧಾರಣೆ ಆಗಬೇಕು, ಭ್ರಷ್ಟಾಚಾರ ನಿಯಂತ್ರಿಸಿ ದೇಶ ಉಳಿಸುಬೇಕೆಂದು 209 ದಿನಗಳಿಂದ ಹೋರಾಟ ಮಾಡುತ್ತಿರುವುದು ಸಾಮಾನ್ಯವಾದದ್ದು ಅಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೌನ ಸತ್ಯಾಗ್ರಹ ಮಾಡುತ್ತಿರುವುದು ಮತ್ತೊಂದು ಹಂತದ ಹೋರಾಟ’ ಎಂದರು.

‘ಚುನಾವಣೆ ಪದ್ಧತಿ ಸುಧಾರಣೆಯಾಗುವುದು ಅವಶ್ಯವಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಬೇಕಿದೆ. ಸಂಸದರು, ಶಾಸಕರ ಮೇಲಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಚರ್ಚೆಯಾಗಬೇಕು ಎಂಬ ದೂರದೃಷ್ಟಿ ಇರಿಸಿಕೊಂಡು ಒಬ್ಬೊಂಟಿಯಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ರಮೇಶ ಅವರ ಹೋರಾಟ ಜನರಿಗೆ ತಲುಪುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಬಹಳ ಗಂಭೀರ ಮತ್ತು ಜನರು ಕೈಗೆ ನಿಲುಕದಷ್ಟು ಎತ್ತರವಾದ ವಿಚಾರಗಳನ್ನು ಮುಂದಿಟ್ಟಿಕೊಂಡು ರಮೇಶ ಅವರು ಹೋರಾಡುತ್ತಿದ್ದಾರೆ. ಚುನಾವಣೆ ಪದ್ಧತಿ, ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ. ಜನಪ್ರತಿನಿಧಿಗಳ ಮೇಲಿನ ಕ್ರಿಮಿನಲ್ ಕೇಸ್, ಇವತ್ತಿನ ರಾಜಕಾರಣದ ನಡವಳಿಕೆಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಹೀಗಾಗಿ, ಈ ಬಗ್ಗೆ ಮಾರ್ಚ್ 31ರಂದು ಕಲಬುರಗಿಯಲ್ಲಿ ಚರ್ಚಾಗೋಷ್ಠಿ ನಡೆಸಲಾಗುವುದು’ ಎಂದು ಹೇಳಿದರು.

ಸತ್ಯಾಗ್ರಹದಲ್ಲಿ ರೈತ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT