ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಸಂಸ್ಥೆಯಿಂದ ಹಲವು ಜನರಿಗೆ ನ್ಯಾಯ: ಕೆ.ಎನ್. ಫಣೀಂದ್ರ

ಕಾನೂನು ಅರಿವು ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಭಿಮತ
Published 1 ಏಪ್ರಿಲ್ 2024, 6:16 IST
Last Updated 1 ಏಪ್ರಿಲ್ 2024, 6:16 IST
ಅಕ್ಷರ ಗಾತ್ರ

ಕಲಬುರಗಿ: ‘ಲೋಕಾಯುಕ್ತ ಸಂಸ್ಥೆಯು ಅಸ್ತಿತ್ವಕ್ಕೆ ಬಂದ ಬಳಿಕ ಹಲವು ಜನರಿಗೆ ನ್ಯಾಯ ಸಿಕ್ಕಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಇದೆ. ಲೋಕಾಯುಕ್ತ ಸಂಸ್ಥೆಯ ಶಿಫಾರಸುಗಳನ್ನು ಸರ್ಕಾರವೂ ಒಪ್ಪಿಕೊಳ್ಳುತ್ತಿದೆ’ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಭಿಪ್ರಾಯಪಟ್ಟರು.

ಕರ್ನಾಟಕ ಲೋಕಾಯುಕ್ತ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗ ಘಟಕದ ಸಹಯೋಗದಲ್ಲಿ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ‘ಉತ್ತಮ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ’ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1984ರಲ್ಲಿ ದೇಶದಲ್ಲಿ ಲೋಕಪಾಲ ಮತ್ತು ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ರಚಿಸಲಾಯಿತು. ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ವಿಳಂಬ ಮಾಡಿದರೆ, ಲಂಚಕ್ಕೆ ಬೇಡಿಕೆ ಇಟ್ಟರೆ ಆ ಕುರಿತ ದೂರುಗಳನ್ನು ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಸೇವೆಗಳ ಪ್ರಾಧಿಕಾರವು ಜನರ ಅಹವಾಲುಗಳನ್ನು ಆಲಿಸಿ ಈ ಕುರಿತು ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಬಹುದು. ಕಾನೂನು ಸೇವೆಗಳ ಪ್ರಾಧಿಕಾರವು ಬುಸುಗುಡಬಹುದು ಅಷ್ಟೇ, ಕಚ್ಚುವಂತಿಲ್ಲ. ಆದರೆ, ಲೋಕಾಯುಕ್ತ ಸಂಸ್ಥೆಗೆ ಅಧಿಕಾರಿಗಳ ಮೇಲೆ ದಾಳಿ ಮಾಡುವ, ಪ್ರಕರಣ ದಾಖಲಿಸುವ ಅಧಿಕಾರವಿದೆ. ಲೋಕಾಯುಕ್ತಕ್ಕೆ ಪ್ರತ್ಯೇಕವಾದ ಪೊಲೀಸರು, ಕಾನೂನು ವಿಭಾಗ, ಆಡಳಿತಾಂಗವಿದೆ. ಜಿಲ್ಲಾ ನ್ಯಾಯಾಧೀಶರು ಪ್ರಕರಣಗಳ ವಿಚಾರಣೆ ನಡೆಸುತ್ತಾರೆ’ ಎಂದು ಹೇಳಿದರು.

‘ಲೋಕಾಯುಕ್ತ ಸಂಸ್ಥೆಯು ಸರ್ಕಾರಕ್ಕೆ ವಿವಿಧ ವಿಚಾರಗಳ ಕುರಿತು ಪತ್ರ ಬರೆದರೆ ಶೇ 98ರಷ್ಟು ಇತ್ಯರ್ಥವಾಗುತ್ತವೆ. ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಅಲ್ಲಿನ ನ್ಯಾಯಾಧೀಶರು ಜಿಲ್ಲಾ ನ್ಯಾಯಾಲಯದ ಕಾಂಪೌಂಡ್ ನಿರ್ಮಾಣ ಹಾಗೂ ತಮ್ಮ ಸರ್ಕಾರಿ ನಿವಾಸಕ್ಕೆ ಹಣದ ಕೊರತೆಯಿಂದಾಗಿ ಅರ್ಧಕ್ಕೇ ನಿಂತಿವೆ ಎಂದರು. ಈ ಕುರಿತು ಹಣಕಾಸು ಹಾಗೂ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದ‌ರ್ಶಿಗಳಿಗೆ ಪತ್ರ ಬರೆದೆ. ಆಯುಕ್ತರಿಗೆ ಖುದ್ದಾಗಿ ಮಾತನಾಡಿದೆ. ಒಂದು ವಾರದಲ್ಲಿ ₹ 10 ಕೋಟಿ ಬಿಡುಗಡೆಯಾಯಿತು’ ಎಂದರು.

‘ರಾಜ್ಯದಲ್ಲಿರುವ ಏಳು ಕೋಟಿ ಜನಸಂಖ್ಯೆಯ ಶೇ 1ರಷ್ಟು ಸಹ ಸರ್ಕಾರಿ ನೌಕರರಿಲ್ಲ. ಲಕ್ಷಾಂತರ ಜನರು ವಕೀಲರಿದ್ದರೂ ಕೆಲವರಷ್ಟೇ ನ್ಯಾಯಾಧೀಶರಾಗುತ್ತಾರೆ. ಹೀಗಾಗಿ, ನಿಮಗೆ ಸಿಕ್ಕ ಈ ಜವಾಬ್ದಾರಿಯನ್ನು ನಿಷ್ಠೆ, ಶ್ರದ್ಧೆಯಿಂದ ನಿರ್ವಹಿಸಬೇಕು’ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್. ನಾಗಶ್ರೀ ಮಾತನಾಡಿ, ‘ಪ್ರಮಾಣಿಕವಾಗಿದ್ದೇನೆ ಎಂಬುದು ಯಾವುದೇ ವಿಶೇಷ ಲಕ್ಷಣವಲ್ಲ. ವೃತ್ತಿಯಲ್ಲಿ ಪ್ರಾಮಾಣಿಕರಾಗಿದ್ದರೆ ಉತ್ತಮ. ಕೆಲವರು ಜಾಗೃತ ದಳದವರು ಬರುತ್ತಾರೆ ಎಂದರೆ ಹೆದರುತ್ತಾರೆ. ನಾವು ಪ್ರಾಮಾಣಿಕರಾಗಿದ್ದರೆ ಯಾರಿಗೂ ಹೆದರುವ, ಗಾಬರಿಯಾಗುವ ಅವಶ್ಯಕತೆ ಇಲ್ಲ‘ ಎಂದರು.

ನ್ಯಾಯಾಧೀಶ ಮೋಹನ ಬಾಡಗಂಡಿ ವಂದಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಕಾರ್ಯಕ್ರಮ ನಿರೂಪಿಸಿದರು.

‘ಪಗಾರ ಕೊಟ್ಟಷ್ಟು ಕೆಲಸ ಮಾಡುವೆ’

ನ್ಯಾಯಾಲಯದಲ್ಲಿನ ತಮ್ಮ ಅನುಭವವೊಂದನ್ನು ಹಂಚಿಕೊಂಡ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ‘ನ್ಯಾಯಾಧೀಶರೊಬ್ಬರು ತೀರ್ಪನ್ನು ನಿಯಮಾನುಸಾರ ಬರೆದಿಲ್ಲ. ಇಂತಹ ನಾಲ್ಕೈದು ತೀರ್ಪುಗಳ ಬಗ್ಗೆ ಪರಿಶೀಲನೆ ನಡೆಸಿದ ಬಗ್ಗೆ ಅವರನ್ನು ನನ್ನ ಕಚೇರಿಗೆ ಕರೆಸಿ ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಅವರು ನನಗೆ ಪಗಾರ ಎಷ್ಟು ಕೊಡ್ತಾರೋ ಅಷ್ಟು ಮಾತ್ರ ಕೆಲಸ ಮಾಡ್ತೀನ್ರಿ. ನಿಮಗೆ ಹೆಚ್ಚು ಪಗಾರ ಇದೆ. ನೀವು ಬೇಕಿದ್ದರೆ ಹೆಚ್ಚು ಬರೆಯಿರಿ ಎಂದು ಪ್ರತಿಕ್ರಿಯಿಸಿದರು‘ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು. ‘ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಸಮಯ ನೋಡಿಕೊಂಡು ನ್ಯಾಯಾಧೀಶರು ಕೆಲಸ ಮಾಡಿದರೆ ಹೇಗೆ? ಎಲ್ಲ ದಾರಿಗಳು ಮುಚ್ಚಿದ ಬಳಿಕ ಜನರು ನಮ್ಮಲ್ಲಿ ನ್ಯಾಯಕ್ಕಾಗಿ ಬಂದಿರುತ್ತಾರೆ. ಹೀಗಾಗಿ ನಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT