ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಗಳ ಬಾಯಾರಿಕೆ ತಣಿಸುವ ಕಲಬುರಗಿಯ ಕವಿ, ರಂಗ ಕಲಾವಿದ ರಾಹುಲ್ ಕಟ್ಟಿ

ಪಕ್ಷಿ ಸಂಕುಲಕ್ಕೆ ನೀರುಣಿಸುವ ರಾಹುಲ್‌
Published 21 ಮಾರ್ಚ್ 2024, 6:10 IST
Last Updated 21 ಮಾರ್ಚ್ 2024, 6:10 IST
ಅಕ್ಷರ ಗಾತ್ರ

ಕಲಬುರಗಿ: ತೊಗರಿನಾಡಿನಲ್ಲಿ ಸೂರ್ಯನ ಪ್ರತಾಪ ನಿರೀಕ್ಷೆಯಂತೆಯೇ ಅಧಿಕವಾಗಿದೆ. ರಣರಣ ಬಿಸಿಲು ಹಾಗೂ ಬರ ಪರಿಸ್ಥಿತಿಯಿಂದಾಗಿ ನೀರಿನ ಮೂಲಗಳಾದ ನದಿ, ಹಳ್ಳ, ಕೊಳ್ಳಗಳು ಬತ್ತುವ ಹಂತಕ್ಕೆ ತಲುಪಿವೆ. ಇಂಥ ದುರ್ಲಭ ಸ್ಥಿತಿಯಲ್ಲಿ ಮೂಕ ಪ್ರಾಣಿ, ಪಕ್ಷಿಗಳ ವೇದನೆಯಂತೂ ಹೇಳತೀರದು.

ನಗರೀಕರಣ, ಕೈಗಾರಿಕೀಕರಣ ಮತ್ತಿತರ ಕಾರಣಗಳಿಂದಾಗಿ ಅಳಿವಿನಂಚಿಗೆ ತಲುಪುತ್ತಿರುವ ಪಕ್ಷಿ ಸಂಕುಲಕ್ಕೆ ನೆರವಾಗುವ ಕನಸು ಹೊತ್ತವರು ಕಲಬುರಗಿಯ ರಾಹುಲ್ ಕಟ್ಟಿ.

ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗುವ ಪಕ್ಷಿಗಳಿಗೆ ಮಣ್ಣಿನ ಅರವಟಿಗೆ ಮೂಲಕ ನೀರುಣಿಸುವ ಕಾಯಕ ರಾಹುಲ್ ಅವರದು. ಅವರ ಈ ಪಕ್ಷಿ ಪ್ರೀತಿ ಈಗ ಆರನೇ ವರ್ಷಕ್ಕೆ ಕಾಲಿಟ್ಟಿದೆ.

‘ಆರು ವರ್ಷಗಳ ಹಿಂದೆ ಐದಾರು ಜನರ ತಂಡ ಕಟ್ಟಿಕೊಂಡು ಪಕ್ಷಿಗಳಿಗೆ ನೀರುಣಿಸುವ ಕೆಲಸ ಪ್ರಾರಂಭಿಸಿದ್ದೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ತಂಡ ಒಡೆಯಿತು. ಆದರೆ, ಇದು ನನ್ನ ಪಕ್ಷಿಪ್ರೇಮಕ್ಕೆ ತಡೆಯಾಗಲಿಲ್ಲ. ಒಬ್ಬನೇ ಮುಂದುವರಿಯಲು ನಿರ್ಧರಿಸಿದೆ. ಈಗ ಸ್ನೇಹಿತ ಅಚ್ಯುತ್ ಕುಲಕರ್ಣಿ ನನಗೆ ಜೊತೆಯಾಗಿದ್ದಾನೆ’ ಎನ್ನುತ್ತಾರೆ ರಾಹುಲ್.

ಇಡೀ ಬೇಸಿಗೆ ಪೂರ್ತಿ ಪಕ್ಷಿಗಳು ಹೆಚ್ಚಾಗಿ ಕಂಡುಬರುವ ಪಾರ್ಕ್‌, ಕಾಂಪೌಂಡ್‌, ಹಳೆಯ ಮನೆಗಳು, ಪೊಟರೆಗಳಲ್ಲಿ ಅರವಟಿಗೆ ಇಟ್ಟು ಬರುತ್ತಾರೆ. ಈ ಹಿಂದೆ ಬಳಸಿ ಎಸೆದ ನೀರಿನ ಬಾಟಲಿಗಳನ್ನು ನೀರಿಡಲು ಬಳಸುತ್ತಿದ್ದರು. ಈಗ ಮಣ್ಣಿನ ಪಾತ್ರೆಯ ಮುಚ್ಚಳಿಕೆಗಳನ್ನು ಕಟ್ಟುತ್ತಿದ್ದಾರೆ.

‘ಕಲಬುರಗಿ ಜಿಲ್ಲೆಯಲ್ಲಿ ಸುಮಾರು 64ರಿಂದ 65 ಪ್ರಭೇದದ ಪಕ್ಷಿಗಳು ಕಾಣಸಿಗುತ್ತವೆ. ಕಾಗೆ, ಗುಬ್ಬಚ್ಚಿ, ಕೋಗಿಲೆ, ಹದ್ದು, ಗೊರವಂಕ, ಪಾರಿವಾಳ, ಟಿಂವಕ್ಕಿ, ನೀಲಕಂಠ ಹಕ್ಕಿ ಅವುಗಳಲ್ಲಿ ಪ್ರಮುಖವಾದವುಗಳು. ಇವುಗಳ ಪೈಕಿ ರಣಹದ್ದು ಬಿಸಿಲಿನ ತಾಪ ತಾಳಲಾರದೇ ಬೇಗ ಸಾಯುವುದು ಹೆಚ್ಚು. ವಿದೇಶಗಳಿಂದಲೂ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ’ ಎನ್ನುತ್ತಾರೆ ಅವರು.

₹20 ಸಾವಿರ ಖರ್ಚು: ಪ್ರತಿ ಬೇಸಿಗೆಗೆ ಪಕ್ಷಿಗಳಿಗೆ ಅರವಟಿಗೆ ಇಡಲು ರಾಹುಲ್‌ ಅವರಿಗೆ ಸುಮಾರು ₹ 20 ಸಾವಿರ ಖರ್ಚಾಗುತ್ತದೆ. ಇದಕ್ಕಾಗಿ ಅವರು ಯಾರ ಸಹಾಯವನ್ನೂ ಯಾಚಿಸಲ್ಲ. ಯಾರಾದರೂ ಸ್ವಇಚ್ಛೆಯಿಂದ ನೆರವಾದರೆ ಒಪ್ಪಿಕೊಳ್ಳುತ್ತಾರೆ.

ರಾಹುಲ್ ಅವರು ಕವಿ ಹಾಗೂ ರಂಗಭೂಮಿ ಕಲಾವಿದರೂ ಹೌದು. ಅವರ ‘ಒಡಲ ಬಸಿರು’ ಕವನ ಸಂಕಲನ ಶೀಘ್ರದಲ್ಲೇ ಪ್ರಕಟವಾಗಲಿದೆ.

‘ನಮ್ಮ ಮುಂದಿನ ಪೀಳಿಗೆಗೆ ಪಕ್ಷಿಗಳು ಎಂದರೆ ಫೋಟೊ ಅಥವಾ ಮಾಧ್ಯಮಗಳಲ್ಲಿ ತೋರಿಸುವ ಸ್ಥಿತಿ ಬರಬಾರದು. ಅವುಗಳ ಉಳಿವು ನಮ್ಮ ಕರ್ತವ್ಯವಾಗಬೇಕು’ ಎಂಬುದು ರಾಹುಲ್ ಅವರ ಕಾಳಜಿಯಾಗಿದೆ.

ಅರವಟಿಗೆಯಲ್ಲಿ ಪಕ್ಷಿಗಳಿಗೆ ನೀರು ಹಾಕುತ್ತಿರುವ ರಾಹುಲ್ ಕಟ್ಟಿ
ಅರವಟಿಗೆಯಲ್ಲಿ ಪಕ್ಷಿಗಳಿಗೆ ನೀರು ಹಾಕುತ್ತಿರುವ ರಾಹುಲ್ ಕಟ್ಟಿ
ಪಕ್ಷಿ ಸಂಕುಲದ ಉಳಿವು ನಮ್ಮ ಆಕಾಂಕ್ಷೆ. ಈ ವರ್ಷ ಸುಮಾರು 1000 ಅರವಟಿಗೆಗಳನ್ನು ಕಟ್ಟುವ ಚಿಂತನೆಯಿದೆ. ಅದನ್ನು ಸಾಕಾರಗೊಳಿಸುವ ವಿಶ್ವಾಸವೂ ಇದೆ.
ರಾಹುಲ್‌ ಕಟ್ಟಿ ಪಕ್ಷಿ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT