ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ಯ, ಸಮಗ್ರ ಇತಿಹಾಸ ರಚನೆಯಾಗಲಿ’

ಕಲ್ಯಾಣ ಕರ್ನಾಟಕ ಇತಿಹಾಸ, ಸಾಂಸ್ಕೃತಿಕ ಪರಂಪರೆ ಕಾರ್ಯಾಗಾರ
Last Updated 5 ನವೆಂಬರ್ 2019, 10:36 IST
ಅಕ್ಷರ ಗಾತ್ರ

ಕಲಬುರ್ಗಿ: ಮಾನವೀಯತೆ, ಸಾಮಾಜಿಕ ನ್ಯಾಯದಡಿ ಜಾತಿಯನ್ನೂ ಮೀರಿದ ಸಮಗ್ರ ಇತಿಹಾಸ ರಚನೆ ಆಗಬೇಕು ಎಂದು ಗುಲಬರ್ಗಾ ವಿವಿಯ ಇತಿಹಾಸ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮಹಾಬಳೇಶ್ವರಪ್ಪ ಹೇಳಿದರು.

ಕಲಬುರ್ಗಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ‘ಹೈದರಾಬಾದ್ ಕರ್ನಾಟಕ ಇತಿಹಾಸ ರಚನಾ ಸಮಿತಿ’ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಕಲ್ಯಾಣ ಕರ್ನಾಟಕ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಗಡಿ ಚಳವಳಿಯಲ್ಲಿ ಬ್ರಾಹ್ಮಣೇತರರ ಕೊಡುಗೆ ಅಪಾರವಾಗಿದೆ. ಆದರೆ, ಎಲ್ಲಿಯೂ ಆ ಅಂಶಗಳು ದಾಖಲಾಗಿಲ್ಲ. ಎಡಪಂಥೀಯ, ಬಲಪಂಥೀಯ ವಿಚಾರಗಳನ್ನು ಬದಿಗಿಟ್ಟು ಸರ್ವರನ್ನು ಒಳಗೊಳ್ಳುವ ಸಮಗ್ರ ಇತಿಹಾಸ ಸೃಷ್ಟಿ ಆಗಬೇಕು’ ಎಂದರು.

ಭೂಉತ್ಖನನದ ಸಂದರ್ಭದಲ್ಲಿ ಶಿಲಾಯುಗದ ಕುರುಹುಗಳು ಇಲ್ಲಿ ದೊರೆತಿವೆ. ಮಸ್ಕಿ ಶಿಲಾಶಾಸನ ಅಶೋಕನ ಆಡಳಿತವನ್ನು ತಿಳಿಸುತ್ತದೆ. ವಿಜ್ಞಾನೇಶ್ವರದ ಮಿಥಾಕ್ಷರ ನ್ಯಾಯಾಂಗ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆಯಾಗಿದೆ. ಹಿಂದೂಸ್ತಾನಿ ಸಂಗೀತಕ್ಕೂ ಈ ನೆಲ ಅನನ್ಯ ಕೊಡುಗೆ ನೀಡಿದೆ ಎಂದರು.

ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಮಾತನಾಡಿ, ಈ ಭಾಗದ ಇತಿಹಾಸ ಸಮರ್ಪಕವಾಗಿ ರಚನೆ ಆಗಿಲ್ಲ. ಹಲವು ಅಂಶಗಳು ಅದರಲ್ಲಿ ಬಿಟ್ಟು ಹೋಗಿವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಇತಿಹಾಸ ರಚನೆಗೆ ಸರ್ಕಾರ ಸಮಿತಿ ರಚಿಸಿದೆ. ಅದರಲ್ಲಿ ಹಲವು ಮಂದಿ ತಜ್ಞರಿದ್ದಾರೆ. ಆದರೆ, ಅವರಿಂದ ಮಾತ್ರ ಈ ಕಾರ್ಯ ಸಾಧ್ಯವಿಲ್ಲ. ಸಮಗ್ರವಾಗಿ ಮಾಹಿತಿ ಸಂಗ್ರಹಿಸಬೇಕಾಗಿದೆ. ಹೀಗಾಗಿ ಎಲ್ಲರಿಂದ ಸಲಹೆ, ಸೂಚನೆ ಪಡೆಯಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾಲಮಿತಿಯಲ್ಲಿ ಇತಿಹಾಸ ರಚನಾ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಈ ಭಾಗದಲ್ಲಿ 41 ಶಾಸಕರು, 11 ಮಂದಿ ವಿಧಾನ ಪರಿಷತ್ ಸದಸ್ಯರು, ಐದು ಮಂದಿ ಸಂಸದರಿದ್ದಾರೆ. ಕೆಲವರನ್ನು ಬಿಟ್ಟರೆ ಯಾರೂ ಕಾರ್ಯಾಗಾರಕ್ಕೆ ಬಂದಿಲ್ಲ. ಅವರಿಗೇನು ರೋಗ ಬಂದಿದೆಯೋ ಗೊತ್ತಿಲ್ಲ’ ಎಂದು ಆಕ್ರೋಶದಿಂದ ನುಡಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರಿಗೆ ಪ್ರೇರಣೆಯಾದ ಈ ನೆಲದ ಇತಿಹಾಸದ ಪುನರ್‌ರಚನೆಯಂತಹ ಮಹತ್ವದ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕು. ಮುಂದಿನ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೂ ಬರಬೇಕು ಎಂದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಹಿಂದೆ ಈ ಭಾಗದ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಚಳವಳಿಗಳು ಇತಿಹಾಸದಲ್ಲಿ ದಾಖಲಾಗಬೇಕು ಎಂದರು.

ಗುಲಬರ್ಗಾ ವಿವಿ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್, ಶಾಸಕರಾದ ಖನೀಜ್ ಫಾತಿಮಾ, ಹಿರಿಯ ಸಾಹಿತಿ ವಸಂತ ಕುಷ್ಟಗಿ, ಶಾಸಕ ಅವಿನಾಶ ಜಾಧವ, ಸಮಿತಿಯ ಸದಸ್ಯ ಕಾರ್ಯದರ್ಶಿ ಲಕ್ಷ್ಮಿ ದಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಸೋಮಶೇಖರ್, ವಿವಿಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಎಚ್.ಟಿ.ಪೋತೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್‌.ಪಾಸೋಡಿ, ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ದಂಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಮಾಲೆ, ಉರ್ದು ಸಾಹಿತಿ ಮಾಜಿದ್ ದಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT