ತಾಯಿ, ಮಗುವಿನ ಆರೋಗ್ಯ ರಕ್ಷಿಸಿ

7
ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ತಾಯಿ, ಮಗುವಿನ ಆರೋಗ್ಯ ರಕ್ಷಿಸಿ

Published:
Updated:
ಜಿಲ್ಲಾ ಆಸ್ಪತ್ರೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ತರಬೇತಿಯ ವಿದ್ಯಾರ್ಥಿಗಳು ತಾಯಿ ಹಾಲಿನ ಮಹತ್ವ ಕುರಿತ ಕಿರು ನಾಟಕ ಪ್ರದರ್ಶಿಸಿದರು

ರಾಮನಗರ: ಆರೋಗ್ಯವಂತ ತಾಯಿ ಮತ್ತು ಮಗು ದೇಶದ ಆಸ್ತಿ. ಹಾಗಾಗಿ ತಾಯಿ ಹಾಗೂ ಮಗುವಿನ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿವೇಕ್ ದೊರೆ ಹೇಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಶನಿವಾರ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುಣಮಟ್ಟದ ಆಹಾರ ಸೇವನೆಯಿಂದ ತಾಯಿ, ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯವಂತ ಶಿಶುವನ್ನು ಬೆಳೆಸಿ ಸಮಾಜಕ್ಕೆ ಕೊಡುವಲ್ಲಿ ತಾಯಿಯ ಪಾತ್ರ ಮುಖ್ಯ ಎಂದು ತಿಳಿಸಿದರು.

ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಸೌಂದರ್ಯ ಹಾಳಾಗುವುದಿಲ್ಲ. ತಾಯಿ ಹಾಲಿನಲ್ಲಿ ಎಲ್ಲಾ ಪೌಷ್ಟಿಕಾಂಶಗಳಿದ್ದು, ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿವೆ. ನಿಯಮಿತವಾಗಿ ಶಿಶುವಿಗೆ ಹಾಲು ಉಣಿಸುವುದರಿಂದ ಶೇ 22ರಷ್ಟು ಶಿಶುಮರಣ ತಪ್ಪಿಸಬಹುದು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜು ಮಾತನಾಡಿ ಶಿಶುವಿಗೆ ಹಾಲುಣಿಸುವುದರಿಂದ ತಾಯಿಗೆ ರಕ್ತಸ್ರಾವ ಕಡಿಮೆಯಾಗಿ ಗರ್ಭಕೋಶ ಸಹಜ ಸ್ಥಿತಿಗೆ ಬರುತ್ತದೆ. ಅಲ್ಲದೇ ಸ್ತನ ಕ್ಯಾನ್ಸರ್ ಆಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಮಗುವಿಗೆ 6 ತಿಂಗಳವರೆಗೆ ತಾಯಿ ಹಾಲು ಹಾಗೂ ಆರು ತಿಂಗಳ ನಂತರ ತಾಯಿ ಹಾಲಿನ ಜತೆಯಲ್ಲಿ ಪೂರಕ ಆಹಾರವನ್ನು ನೀಡಬೇಕು. ಪೌಷ್ಟಿಕ ಆಹಾರವನ್ನು ಬಳಸುವುದರಿಂದ ತಾಯಿ ಹಾಲು ಉತ್ಪತ್ತಿಯಾಗಿ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗುತ್ತದೆ ಎಂದರು.

ದೇಶದ ಅಭಿವೃದ್ದಿಯನ್ನು ಅಳೆಯಲು ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಮಾನದಂಡವಾಗಿ ಉಪಯೋಗಿಸುತ್ತಾರೆ. ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಜಾಗೃತರಾಗಬೇಕು ಎಂದು ತಿಳಿಸಿದರು. ಕಿರಿಯ ಮಹಿಳಾ ಆರೋಗ್ಯ ತರಬೇತಿಯ ವಿದ್ಯಾರ್ಥಿಗಳು ತಾಯಿ ಹಾಲಿನ ಮಹತ್ವವನ್ನು ಕುರಿತ ಕಿರು ನಾಟಕ ಪ್ರದರ್ಶಿಸಿದರು.

ಮಕ್ಕಳ ತಜ್ಞೆ ಡಾ. ಶಶಿರೇಖಾ, ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಚಾರ್ಯೆ ಕೆ.ಆರ್. ಹರಿಣಾಕ್ಷಿ, ಸ್ತ್ರೀರೋಗ ತಜ್ಞೆ ಡಾ.ಬಿ.ಎಚ್. ಚಂದ್ರಕಲಾ, ಡಾ. ಶಿವಸ್ವಾಮಿ, ಡಾ. ಉಷಾ, ಶುಶ್ರೂಷಕಿ ಅಧೀಕ್ಷಕಿ ವೆಂಕಟಲಕ್ಷ್ಮಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !