ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಮಡಿಕೇರಿಯಲ್ಲಿ ಮತ್ತೆ ಪುಟಿದೆದ್ದ ಬಿಜೆಪಿ

ಬದಲಾವಣೆ ತಾರದ ಕಾಂಗ್ರೆಸ್ ಪ್ರಚಾರದ ತಂತ್ರಗಾರಿಕೆ
Published 5 ಜೂನ್ 2024, 8:02 IST
Last Updated 5 ಜೂನ್ 2024, 8:02 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಕಳೆದುಕೊಂಡು ಮಂಕಾಗಿದ್ದ ಬಿಜೆಪಿ ಕೊಡಗು ಜಿಲ್ಲೆಯಲ್ಲಿ ಮತ್ತೆ ಪುಟಿದೆದ್ದಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅಭೂತಪೂರ್ವವಾದ ಲೀಡ್ ಕೊಡುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಭದ್ರವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.

ಕಾಂಗ್ರೆಸ್ ಈ ಚುನಾವಣೆಯಲ್ಲಿ ಬಹಳಷ್ಟು ತಂತ್ರಗಾರಿಕೆಯನ್ನು ಬಳಸಿತ್ತು. ಜಾತಿವಾರು ಮತಗಳ ಕ್ರೋಢೀಕರಣ, ಕೊಡಗಿಗೆಂದೇ ವಿಶೇಷವಾದ ಪ್ರಣಾಳಿಕೆ ಬಿಡುಗಡೆ ಸೇರಿದಂತೆ ಹಲವು ಬಗೆಯ ತಂತ್ರಗಳನ್ನು ಬಳಸಿದ್ದರೂ ಕಾಂಗ್ರೆಸ್‌ ನೆಲಕಚ್ಚಿರುವುದು ಬಿಜೆಪಿಗರಲ್ಲಿಯೂ ಅಚ್ಚರಿಗೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಾವೊಬ್ಬ ರಾಜವಂಶಸ್ಥ, ಸಾಮಾನ್ಯರಿಗೆ ನಿಲುಕುವುದಿಲ್ಲ ಎಂಬ ಆರೋಪದಿಂದ ಕಳಚಿಕೊಳ್ಳಲು ಕೊಡಗಿನಲ್ಲಿಯೇ ಪ್ರಯತ್ನ ನಡೆಸಿದ್ದರು. ಹೆಚ್ಚು ಅಬ್ಬರದ ಮಾತುಗಳಿಲ್ಲದೇ, ಭಾಷಣದ ಆಡಂಬರ ಇಲ್ಲದೇ ಮೌನವಾಗಿಯೇ ತಮ್ಮ ಗೆಲುವಿಗೆ ಕಸರತ್ತು ನಡೆಸಿದ್ದರು. ರಸ್ತೆಬದಿ ಕಾರು ನಿಲ್ಲಿಸಿ, ತಾವೇ ಸ್ವತಃ ಹೋಗಿ ಎಳನೀರು ಸೇವಿಸುವ ಮೂಲಕ ಸಾಮಾನ್ಯರೊಂದಿಗೆ ಬೆರೆಯುತ್ತೇನೆ ಎಂಬ ಸಂದೇಶವನ್ನು ಮುಗುಮ್ಮಾಗಿಯೇ ರವಾನಿಸಿದ್ದರು.

ಬಿಜೆಪಿಯ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ಸ್ಥಳೀಯ ಮುಖಂಡರೊಂದಿಗೆ ಊಟ ಮಾಡುವ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲ, ಪಕ್ಷದ ಪ್ರಮುಖರ ಸಭೆಗಳಲ್ಲಿ ಪ್ರತಿಯೊಬ್ಬರ ಬಳಿಯೂ ಹೋಗಿ ಕೈಮುಗಿದು ತಮ್ಮ ಪರ ಪ‍್ರಚಾರ ಮಾಡುವಂತೆ ಕೋರಿದ್ದರು.

ಯದುವೀರ್ ಅವರ ಈ ಪರಿಯ ನಡವಳಿಕೆ ಬಿಜೆಪಿಯಲ್ಲಿಯೇ ಒಂದು ಬಗೆಯ ಸಂಚಲನ ಮೂಡಿಸಿತ್ತು. ರಾಜವಂಶಸ್ಥ ಎಂಬ ಗೌರವದ ಜೊತೆಗೆ ಅವರ ಈ ಬಗೆಯ ಸರಳತೆಗೆ ಮಾರು ಹೋದ ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದ ಪ್ರಮುಖರು ತುಸು ಹೆಚ್ಚಾಗಿಯೇ ಕೆಲಸ ಮಾಡಿದ್ದರು. ಇವೆಲ್ಲವೂ ಗೆಲುವಿಗೆ ರಹದಾರಿಯಾದವು.

ಕಾಂಗ್ರೆಸ್ ಪ್ರಚಾರ ಬಿಜೆಪಿಗೆ ಹೋಲಿಸಿದರೆ ಅಬ್ಬರದ್ದಾಗಿತ್ತು. ಬೈಕ್ ಶೊ, ರೋಡ್‌ ಶೊಗಳ ಮೂಲಕ ಕಾರ್ಯಕರ್ತರು ಹೆಚ್ಚು ಸದ್ದು ಮಾಡಿದ್ದರು. ಮುಖ್ಯಮಂತ್ರಿ, ಉಪಮುಖ್ಯಮಂ‌ತ್ರಿಗಳನ್ನೇ ಕರೆಸುವ ಮೂಲಕ ದೊಡ್ಡಮಟ್ಟದ ಪ್ರಚಾರ ಸಭೆಗಳನ್ನೂ ನಡೆಸಿದ್ದರು. ಆದರೆ, ಜಿಲ್ಲೆಯ ಮತದಾರರ ನಾಡಿಮಿಡಿತವನ್ನು ಅರಿಯುವಲ್ಲಿ ಅವರು ಅಕ್ಷರಶಃ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT