ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಕೊಡಗಿಗೆ; ಗರಿಗೆದರಿದ ರಾಜಕೀಯ ಚಟುವಟಿಕೆ

ಜನಸಾಮಾನ್ಯರಲ್ಲೂ ಇದೆ ವಿಶೇಷ ಪ್ಯಾಕೇಜ್ ಘೋಷಣೆಯ ನಿರೀಕ್ಷೆ
ಕೆ.ಎಸ್.ಗಿರೀಶ
Published 25 ಜನವರಿ 2024, 5:31 IST
Last Updated 25 ಜನವರಿ 2024, 5:31 IST
ಅಕ್ಷರ ಗಾತ್ರ

ಮಡಿಕೇರಿ: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿದ್ದು, ಕಾಂಗ್ರೆಸ್‌ ವಲಯದಲ್ಲಿ ಮಾತ್ರವಲ್ಲ, ಜಿಲ್ಲೆಯ ರಾಜಕೀಯ ವಲಯದಲ್ಲಿಯೂ ಭಾರಿ ಕುತೂಹಲ ಗರಿಗೆದರಿದೆ.

ಕಳೆದ ಬಾರಿ ಬಂದಿದ್ದಾಗ ಅವರು ಚಲಿಸುತ್ತಿದ್ದ ಕಾರಿಗೆ ಕೋಳಿಮೊಟ್ಟೆ ಎಸೆದ ಪ್ರಸಂಗದಂತಹ ವಿದ್ಯಮಾನ ಇಡೀ ರಾಜ್ಯದ ಗಮನ ಸೆಳೆದಿತ್ತು. ನಂತರ, ಅವರು ಪ್ರತಿಭಟನೆಗೆ ಕರೆಕೊಟ್ಟರಾದರೂ ಜಿಲ್ಲಾ ಪೊಲೀಸರು ನಿಷೇಧಾಜ್ಞೆ ಹೇರುವ ಮೂಲಕ ಅದನ್ನು ತಡೆದಿದ್ದರು. ಬಳಿಕ ಚುನಾವಣಾ ಪ್ರಚಾರದ ವೇಳೆಯೂ ಅವರು ಇತ್ತ ಸುಳಿದಿರಲಿಲ್ಲ. ಈಗ ಲೋಕಸಭಾ ಚುನಾವಣೆಯ ಮುನ್ನೆಲೆಯಲ್ಲಿ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೊಡಗಿನ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ನುಚ್ಚುನೂರು ಮಾಡಿದ್ದರು. ವಿರಾಜಪೇಟೆ ಶಾಸಕರಾಗಿ ಆಯ್ಕೆಯಾದ ಎ.ಎಸ್.ಪೊನ್ನಣ್ಣ ಅವರನ್ನೇ ಮುಖ್ಯಮಂತ್ರಿ ತಮ್ಮ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಂಡು ಸಚಿವ ಸ್ಥಾನ ಸಿಗಲಿಲ್ಲ ಎಂಬ ಬೇಸರವನ್ನು ತಣಿಸುವ ಕೆಲಸ ಮಾಡಿದ್ದರು. ನಿಗಮ ಮಂಡಳಿಗಳ ಮೇಲೆ ಕಣ್ಣಿಟ್ಟಿರುವ ಸ್ಥಳೀಯ ಮುಖಂಡರು ಈಗ ಅವರ ಭಾರಿ ಸ್ವಾಗತಕ್ಕೆ ಮುಂದಾಗಿದ್ದಾರೆ.

ಬಹಿರಂಗವಾಗಿ ಯಾರೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂದು ಹೇಳಿಕೊಳ್ಳದೇ ಹೋದರೂ ಮುಗುಮ್ಮಾಗಿ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹಲವರು ಮುಂದುವರಿಸಿರುವುದು ಸುಳ್ಳಲ್ಲ. ಎರಡೂ ಕ್ಷೇತ್ರಗಳ ಗೆಲುವಿನ ಶ್ರೇಯವನ್ನು ತಮ್ಮದು ಎಂದು ಹೇಳಿಕೊಳ್ಳಲು ಕಸರತ್ತು ನಡೆಸಿದ್ದಾರೆ.

ಮುಖ್ಯವಾಗಿ, ಮುಖ್ಯಮಂತ್ರಿ ಬರುತ್ತಿರುವುದರ ಹಿಂದೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಜಯ ದೊರಕಿಸಿಕೊಟ್ಟ ಕೊಡಗನ್ನು ಸರ್ಕಾರ ನಿರ್ಲಕ್ಷಿಸಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಕಾರಣವೇ ಪ್ರಧಾನವಾಗಿದೆ. ಜೊತೆಗೆ, ಇಲ್ಲಿನ ಇಬ್ಬರೂ ಶಾಸಕರೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದೇವೆ ಎಂಬ ಸಂದೇಶ ಸಾರುವ ಕಾರಣವೂ ಇದೆ.

ಇದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಸ್ಥಳೀಯ ಮುಖಂಡರಿಗೆ ಯಾವ ಆಕಾಂಕ್ಷಿಯ ಬಗ್ಗೆ ಹೆಚ್ಚಿನ ಒಲವಿದೆ ಎಂಬುದನ್ನು ತಿಳಿಯುವ ಉದ್ದೇಶವೂ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT