ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ಗುಂಡುಗುಟ್ಟಿ ಮತಗಟ್ಟೆ ಬದಲಿಸಲು ಆಗ್ರಹ

ಮತಗಟ್ಟೆಗೆ ಹೋಗಬೇಕಾದರೆ 30 ಮೆಟ್ಟಿಲು ಹತ್ತಬೇಕು, ವಯೋವೃದ್ಧರಿಗೆ ಸಂಕಷ್ಟ
Last Updated 1 ಫೆಬ್ರುವರಿ 2021, 4:28 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ವಾರ್ಡ್‌ ಸಂಖ್ಯೆ 167ರ ಅಂಜನಗೇರಿ ಬೆಟ್ಟಗೇರಿ-1 ಕ್ಷೇತ್ರದ ಮತದಾರರು ಮತ ಚಲಾಯಿಸಬೇಕಾದರೆ ಗುಂಡುಗುಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಹೋಗಬೇಕು. ಆದರೆ, ಈ ಮತಗಟ್ಟೆಗೆ ಹೋಗಬೇಕಾದರೆ, 25ರಿಂದ 30 ಮೆಟ್ಟಿಲುಗಳನ್ನು ಹತ್ತಬೇಕು. ಹೀಗಾಗಿ, ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಕಷ್ಟವಾಗಿದೆ. ಈ ಮತಗಟ್ಟೆಯನ್ನು ಬದಲಾಯಿಸಬೇಕು ಎಂಬ ಆಗ್ರಹ ಜನರಿಂದ ಕೇಳಿಬತ್ತಿದೆ.

ಈ ಮತಗಟ್ಟೆಗೆ ಗುಂಡುಗುಟ್ಟಿ, ಬ್ರಹ್ಮ ಎಸ್ಟೇಟ್, ಪಾನಂಡ್ರ ಎಸ್ಟೇಟ್, ಮುತ್ತಿನ ತೋಟ, ಹರದೂರು ಭಾಗದ 522 ಮತದಾರರು ಮತ ಹಾಕಲು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಮೆಟ್ಟಿಲು ಹತ್ತಿ ಇಳಿಯುವುದೇ ದುಸ್ತರವಾಗಿದೆ. ಇದರಿಂದ ಈ ಮತಗಟ್ಟೆಯಲ್ಲಿ ಮತದಾನ ಇಳಿಕೆಯಾಗುತ್ತದೆ.

ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿದ್ದು, ಮತಗಟ್ಟೆ ಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕಮಲಾ, ‘ಈ ವಯಸ್ಸಿನಲ್ಲಿ ಅಷ್ಟೊಂದು ಮೆಟ್ಟಿಲುಗಳನ್ನು ಹತ್ತಿ, ಇಳಿಯುವುದಕ್ಕೆ ಕಷ್ಟ. ಮೊದಲೇ ನಡೆಯುವುದಕ್ಕೆ ಕಷ್ಟಸಾಧ್ಯ. ಮತದಾನ ನನ್ನ ಹಕ್ಕು ಎಂಬುದು ತಿಳಿದಿದೆ. ಆದರೂ ಮುಂದಿನ ದಿನಗಳಲ್ಲಿ ಗುಂಡುಗುಟ್ಟಿ ಶಾಲೆಯಲ್ಲಿ ಮತಗಟ್ಟೆ ಇದ್ದರೆ ನಾನು ಮತದಾನ ಬಹಿಷ್ಕರಿಸುತ್ತೇನೆ’ ಎಂದು ಹೇಳಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಚುನಾವಣೆಯ ಸಂದರ್ಭಕ್ಕಾದರೂ ಗುಂಡುಗುಟ್ಟಿಯಲ್ಲಿ ಇರುವ 167 ಮತಕ್ಷೇತ್ರವನ್ನು ಹರದೂರು ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಈ ಮೂಲಕ ವಯೋವೃದ್ಧರು ಮತ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಕೃಷ್ಣಪ್ಪ, ಸರಸ್ವತಿ, ಶೀನ, ಮನು ಇತರರು ಜಿಲ್ಲಾಧಿಕಾರಿಗೆ, ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.

‘ಬೇರೆಡೆಗೆ ಸ್ಥಳಾಂತರಿಸಲು ಅವಕಾಶ’

ಗುಂಡುಗುಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸ್ವಲ್ಪ ಎತ್ತರದಲ್ಲಿದ್ದು, ವಯಸ್ಸಾದವರಿಗೆ ಕಷ್ಟ. ಆದರೆ, ಇದನ್ನು ಬದಲಾಯಿಸುವ ಅಧಿಕಾರ ಕಂದಾಯ ಇಲಾಖೆಗೆ ಇದೆ. ಸಾರ್ವಜನಿಕರು ಮನವಿ ಮಾಡಿದರೆ, ಬೇರೆಡೆಗೆ ಸ್ಥಳಾಂತರಿಸಲು ಅವಕಾಶವಿದೆ. ಅಲ್ಲದೇ ಗ್ರಾ.ಪಂ.ಯ ಹಳೆಯ ಕಟ್ಟಡದಲ್ಲಿ ಕಸ ವಿಲೇವಾರಿ ಘಟಕದ ಜಾಗವನ್ನು ಗುರುತಿಸಲಾಗಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಶೇಖರಿಸಿಡಲಾಗಿದೆ. ನಮಗೆ ಸ್ವಂತ ಜಾಗ ಸಿಗುವವರೆಗೆ ಆ ಕಟ್ಟಡದಲ್ಲಿ ಮತಗಟ್ಟೆ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹರದೂರು ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT