ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ: ಸದ್ದಿಲ್ಲದೆ ಹರಿವು ನಿಲ್ಲಿಸಿದ ಕದನೂರು ಹೊಳೆ

ಕೆಲ ವರ್ಷಗಳ ಹಿಂದೆ ಸಂಪೂರ್ಣ ವಿರಾಜಪೇಟೆ ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಜಲಮೂಲ ಈಗ ಬರಿದು
ಹೇಮಂತ್ ಎಂ.ಎನ್.
Published 21 ಮಾರ್ಚ್ 2024, 6:58 IST
Last Updated 21 ಮಾರ್ಚ್ 2024, 6:58 IST
ಅಕ್ಷರ ಗಾತ್ರ

ವಿರಾಜಪೇಟೆ: ಕೆಲ ವರ್ಷಗಳ ಹಿಂದಿನವರೆಗೂ ವಿರಾಜಪೇಟೆ ಪಟ್ಟಣದ ಜನರ ದಾಹ ಹಿಂಗಿಸುತ್ತಿದ್ದ ಸಮೀಪದ ಕದನೂರು ಹೊಳೆ ಈಗ ಹಿಂಗಿ ಹೋಗಿದೆ. ಬಿರು ಬೇಸಿಗೆಯ ಝಳಕ್ಕೆ ಹಾಗೂ ಬದಲಾದ ಪರಿಸರದಿಂದ ಸದ್ದಿಲ್ಲದೆ ತನ್ನ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಬೇಗೆಯಿಂದ ಪಟ್ಟಣದಿಂದ ಅನತಿ ದೂರದಲ್ಲೇ ಹರಿಯುವ ಕದನೂರು ಹೊಳೆ ಸಂಪೂರ್ಣ ಬರಿದಾಗಿದೆ. ಇಲ್ಲಿದ್ದ ಅಸಂಖ್ಯ ಜಲಚರಗಳು ಮರಣಶಯ್ಯೆ ತಲುಪಿವೆ.

ಭೇತ್ರಿಯ ಕಾವೇರಿ ಹೊಳೆಯಿಂದ ವಿರಾಜಪೇಟೆ ಪಟ್ಟಣಕ್ಕೆ ನೀರು ಒದಗಿಸುವ ಮೊದಲ ಹಂತದ ಯೋಜನೆ ಜಾರಿಗೆ ಬರುವ ಮೊದಲು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲ ಕದನೂರು ಹೊಳೆಯೇ ಆಗಿತ್ತು. ಈ ಮುಂಚೆ ಪಟ್ಟಣಕ್ಕೆ ವರ್ಷದ 12 ತಿಂಗಳು ಕೂಡ ಕುಡಿಯುವ ನೀರನ್ನು ಒದಗಿಸುತ್ತಿದ್ದ ಈ ಹೊಳೆ ಈ ವರ್ಷ ಮಾರ್ಚ್‌ ತಿಂಗಳಿನಲ್ಲೇ ಬತ್ತಿರುವುದು ಬದಲಾಗುತ್ತಿರುವ ಹವಾಮಾನಕ್ಕೆ ಸಾಕ್ಷಿಯಂತಿದೆ.

ಕೃಷಿ ಭೂಮಿ ಪಾಳು ಬಿಟ್ಟಿರುವುದು, ಭತ್ತದ ಗದ್ದೆಗಳು ಕಡಿಮೆಯಾಗುತ್ತಿರುವುದು, ಕೃಷಿ ಭೂಮಿಯಲ್ಲಿ ಲೇಔಟ್ ನಿರ್ಮಾಣ, ಅವೈಜ್ಞಾನಿಕ ಕೃಷಿ, ಅತಿಯಾದ ಪ್ರವಾಸೋದ್ಯಮ, ಕಾಡಿನ ನಾಶ ಜೊತೆಗೆ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ವಿಸರ್ಜಿಸುತ್ತಿರುವುದು ಕೂಡ ಜಿಲ್ಲೆಯ ಜಲಮೂಲಗಳ ನಾಶಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದೂ, ಕಳೆದ ಎರಡೂವರೆ ತಿಂಗಳುಗಳಿಂದ ಮಳೆ ಬಾರದಿರುವುದೂ ಕೂಡ ಇದಕ್ಕೆ ಪೂರಕ ಕಾರಣವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಕದನೂರು ಹೊಳೆಯು ಕಾವೇರಿಯ ಪ್ರಮುಖ ಉಪನದಿ. ಕದನೂರು ಹೊಳೆ ಹರಿವನ್ನು ನಿಲ್ಲಿಸಿರುವುದು ತಾತ್ಕಾಲಿಕವಾಗಿ ಕಾವೇರಿಯ ಹರಿವಿನ ಮೇಲೆ ಪ್ರಭಾವ ಬೀರಲಿದೆ. ಈಗಾಗಲೇ ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಕದನೂರು ಹೊಳೆ ಬತ್ತಿರುವುದರಿಂದ ಒಡಲಿನಲ್ಲಿರುವ ವೈವಿಧ್ಯಮಯ ಅಮೂಲ್ಯ ಜಲಚರಗಳ ನಾಶವಾಗಲಿದ್ದು, ಜಾನುವಾರು ಸೇರಿದಂತೆ ಕಾಡುಪ್ರಾಣಿ ಹಾಗೂ ಪಕ್ಷಿಗಳೂ ಕುಡಿಯುವ ನೀರಿಗೆ ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಕುಸಿತಗೊಂಡಿರುವ ಸುತ್ತಮುತ್ತಲಿನ ಪ್ರದೇಶಗಳ ತೆರೆದ ಬಾವಿ ಹಾಗೂ ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಈಗಲಾದರೂ ಜನತೆ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ದಕ್ಷಿಣ ಭಾರತದ ಜೀವನಾಡಿಯಾಗಿರುವ ಕಾವೇರಿ ನದಿಗೂ ಸಮಸ್ಯೆ ಎದುರಾಗಬಹುದು.

ಕಾಫಿ ಕೊಯ್ಲಿನ ಬಳಿಕ ಮುಂದಿನ ವರ್ಷದ ಫಸಲಿಗಾಗಿ ಗಿಡಗಳಿಗೆ ನೀರುಣಿಸಬೇಕು. ಮಳೆಯು ಬಾರದಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಮುಂದಿನ ಬಾರಿಯ ಫಸಲಿನ ರಕ್ಷಣೆ ಹೇಗೋ ಏನೋ ಎಂಬ ಚಿಂತೆ ಈಗಲೇ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಪಟ್ಟಣಕ್ಕೆ ನೀರನ್ನು ಪೂರೈಸುವ ಭೇತ್ರಿಯ 2ನೇ ಹಂತದ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಯೋಜನೆಯಂತೆ ಕದನೂರು ಹೊಳೆಯ ದಡದಲ್ಲಿರುವ ಹಳೆಯ ಪಂಪ್ ಹೌಸ್‌ ಕಟ್ಟಡದ ಬಳಿ ನೂತನ ಜಲಶುದ್ಧೀಕರಣ ಘಟಕ ನಿರ್ಮಾಣವಾಗಲಿದೆ.

ವರ್ಷವಿಡಿ ಪಟ್ಟಣಕ್ಕೆ ನೀರುಣಿಸುತ್ತಿದ್ದ ಹೊಳೆಯೊಂದು ಬೇಸಿಗೆಯ ಆರಂಭದ ದಿನಗಳಲ್ಲೆ ತನ್ನ ಹರಿವನ್ನು ನಿಲ್ಲಿಸಿರುವುದು ಎಲ್ಲರಿಗೂ ಪಾಠವಾಗಬೇಕಿದೆ. ಅಂತರ್ಜಲ ವೃದ್ಧಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ‘ಜೀವ ಉಳಿದರೆ, ಜೀವನ’ ಹಾಗೂ ಜಿಲ್ಲೆಯಲ್ಲಿ ‘ಪ್ರಕೃತಿ ಉಳಿದರೆ, ಪ್ರಗತಿ’ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪರಿಸರ ಪ್ರೇಮಿ ಡಾ.ನರಸಿಂಹನ್, ‘ಆಧುನಿಕ ಜೀವನ ಪದ್ಧತಿ, ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ, ಯಂತ್ರಗಳ ಬಳಕೆ ಹಾಗೂ ಪರಿಸರವನ್ನು ಮಾನವ ಬಳಸಿಕೊಳ್ಳುವ ರೀತಿಯಿಂದಾಗಿ ಜೀವಜಲದ ಸೆಲೆಗಳು ಬತ್ತುತ್ತಿವೆ’ ಎಂದು ಹೇಳಿದರು.

ವಿರಾಜಪೇಟೆ ಪಟ್ಟಣ ಸಮೀಪದ ಕದನೂರು ಹೊಳೆಯು ತನ್ನ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ವಿರಾಜಪೇಟೆ ಪಟ್ಟಣ ಸಮೀಪದ ಕದನೂರು ಹೊಳೆಯು ತನ್ನ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ವಿರಾಜಪೇಟೆ ಪಟ್ಟಣ ಸಮೀಪದ ಕದನೂರು ಹೊಳೆಯು ತನ್ನ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ವಿರಾಜಪೇಟೆ ಪಟ್ಟಣ ಸಮೀಪದ ಕದನೂರು ಹೊಳೆಯು ತನ್ನ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ಕದನೂರು ಹೊಳೆ ಬೇಸಿಗೆಯಲ್ಲೂ ಬತ್ತುತ್ತಿರಲಿಲ್ಲ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಸಂಪೂರ್ಣ ಬತ್ತಿದೆ. ಇದರಿಂದ ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿದ್ದು ಆತಂಕ ಮೂಡಿಸಿದೆ
ಮಂಜುಳಾ ಕದನೂರು ಗ್ರಾ.ಪಂ. ಪಿಡಿಒ

ಕದನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತ!

ಕೆರೆಗೆ ಸಮೀಪದಲ್ಲೇ ಇರುವ ಕದನೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳಲ್ಲಿ ಇದೀಗ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆರೆ ಬರಿದಾಗಿರುವುದರಿಂದ ಸಹಜವಾಗಿಯೇ ನೀರು ಇಂಗುತ್ತಿಲ್ಲ. ಕೊಳವೆಬಾವಿಗಳಲ್ಲಿ ನೀರು ಇಳಿಕೆಯಾಗುತ್ತಿದ್ದು ಕೊಳವೆಬಾವಿಗಳು ಬತ್ತಿರುವ ಕುರಿತು ಒಂದೊಂದೆ ಕರೆಗಳು ಪಂಚಾಯಿತಿ ಕಚೇರಿಗೆ ಬರುತ್ತಿವೆ. ಪಂಚಾಯಿತಿ ವ್ಯಾಪ್ತಿಯ ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿದ್ದು ಸದ್ಯ ಕುಡಿಯುವ ನೀರನ್ನು 2 ದಿನಗಳಿಗೆ ಒಮ್ಮೆ ಪೂರೈಸಲಾಗುತ್ತಿದೆ. ಮಳೆ ಬಾರದೇ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವುದು ಖಚಿತ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT