ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿಗೆ ಯುಪಿಎಸ್‌ಸಿ ಗರಿ: ಕೆ.ಎಲ್.ಸೂರಜ್‌ಗೆ 713ನೇ ರ‍್ಯಾಂಕ್

Published 17 ಏಪ್ರಿಲ್ 2024, 5:51 IST
Last Updated 17 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಮಡಿಕೇರಿ: ‘ಯುಪಿಎಸ್‌ಸಿ ಪಾಸಾಗಲಿಲ್ಲ ಎಂದು ನಿರಾಶರಾಗುವುದು ಬೇಡ. ಬೇರೆ ಕಡೆಯೂ ಅತ್ಯುತ್ತಮವಾದ ಅವಕಾಶಗಳು ಇವೆ ಎಂಬುದನ್ನು ಯುವಜನರು ಮರೆಯಬಾರದು’ ಎಂದು ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 713ನೇ ರ‍್ಯಾಂಕ್‌ನಲ್ಲಿ ಉತ್ತೀರ್ಣರಾದ ವಿರಾಜಪೇಟೆಯ ಕೆ.ಎಲ್.ಸೂರಜ್ ಅವರ ಮಾತು.

ಯುಪಿಎಸ್‌ಸಿ ಪಾಸಾದ ಸಂತಸವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಅವರು, ‘ಇದು ನನಗೆ ಎಲ್ಲರ ಬೆಂಬಲದಿಂದ ಸಾಧ್ಯವಾಯಿತು. ಸತತ 3 ವರ್ಷಗಳ ಕಠಿಣ ಶ್ರಮ ಕೊನೆಗೂ ಫಲ ನೀಡಿತು’ ಎಂದು ಖುಷಿಪಟ್ಟರು. ಜೊತೆಗೆ, ಈ ಪರೀಕ್ಷೆಯಲ್ಲಿ ವಿಫಲರಾದವರು ಧೈರ್ಯಗುಂದಬಾರದು, ಕಠಿಣ ಪರಿಶ್ರಮಪಡುವವರಿಗೆ ಹೊರಗೆಯೂ ಅತ್ಯುತ್ತಮವಾದ ಅವಕಾಶಗಳಿವೆ’ ಎಂಬ ಕಿವಿಮಾತುಗಳನ್ನೂ ಹೇಳಿದರು.

ವಿರಾಜಪೇಟೆ ಪಟ್ಟಣದಲ್ಲಿ 1995ರಲ್ಲಿ ಸೂರಜ್‌ ಜನಿಸಿದರು. ಅವರ ತಂದೆ ಕೆ.ಬಿ.ಲಿಂಗರಾಜ್ ಹಾಗೂ ತಾಯಿ ಗೀತಾ ರಾಜ್. ಸೂರಜ್ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮೈಸೂರಿನ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯಲ್ಲಿ ಮುಗಿಸಿ, ಪುತ್ತೂರು ಸಮೀಪದ ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡುತ್ತಾರೆ. ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ (ಎಸ್‌ಜೆಸಿಇ)ನಲ್ಲಿ ಅವರು ಕಂಪ್ಯೂಟರ್‌ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುತ್ತಾರೆ.

ಪದವಿ ಪಡೆದ ನಂತರ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ 2 ವರ್ಷ ಕೆಲಸ ಮಾಡಿ, ನಂತರ ಕೇಂದ್ರ ಗೃಹಸಚಿವಾಲಯದಲ್ಲಿ ಕೆಲಸಕ್ಕೆ ಸೇರುತ್ತಾರೆ. ಸದ್ಯ, ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಮೆಗ್ರೇಷನ್‌ ವಿಭಾಗದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ 3 ವರ್ಷಗಳಿಂದ ಅವರು ಯುಪಿಎಸ್‌ಸಿಗಾಗಿ ಸಿದ್ಧತೆ ನಡೆಸಿದ್ದರು. ಐಚ್ಛಿಕ ವಿಷಯವನ್ನಾಗಿ ಮಾನವಶಾಸ್ತ್ರ ವಿಷಯವನ್ನು ಆಯ್ದುಕೊಂಡಿದ್ದರು. ಈ ಐಚ್ಛಿಕ ವಿಷಯಕ್ಕಾಗಿ ಮಾತ್ರವೇ ಅವರು ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT