ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ಆಟೋಟ, ಕ್ರೀಡೋತ್ಸವಕ್ಕೆ ಕೊಡವರಲ್ಲಿ ಉತ್ಸಾಹದ ಬುಗ್ಗೆ

ಆಟಗಳನ್ನೂ ಹಬ್ಬದಂತೆ ಕಾಣುವ ಕೊಡಗಿನ ಜನರು
Published 4 ಆಗಸ್ಟ್ 2023, 7:39 IST
Last Updated 4 ಆಗಸ್ಟ್ 2023, 7:39 IST
ಅಕ್ಷರ ಗಾತ್ರ

ನಾಪೋಕ್ಲು: ಮಳೆಗಾಲದಲ್ಲೇ ವಿಶೇಷವಾಗಿ ಆಚರಿಸಲಾಗುವ ಹಬ್ಬಗಳ ಸಾಲಿನಲ್ಲಿ ಇಲ್ಲಿನ ಗ್ರಾಮೀಣ ಕ್ರೀಡೆಗಳೂ ಸ್ಥಾನ ಪಡೆದಿರುವುದು ವಿಶೇಷ. ಕ್ರೀಡೆಗಳೆಂದರೆ ಕೇವಲ ಮನರಂಜನೆಯಂತೆ ಕಾಣದೆ ಹಬ್ಬದಂತೆ ಜನರು  ಆಚರಿಸುವುದು  ರೂಢಿಯಲ್ಲಿದ್ದು, ಹಬ್ಬಗಳ ಸ್ಥಾನವನ್ನು ಅಲಂಕರಿಸಿವೆ.

ಕೈಲ್ ಮುಹೂರ್ತದ ಬೆನ್ನಿಗೆ ಶುರುವಾಗುವ ಈ ಕ್ರೀಡಾ ಚಟುವಟಿಕೆಗಳು ವ್ಯಕ್ತಿಗತವಾಗಿಲ್ಲ. ಇವು ಸಾಮೂಹಿಕ ಆಚರಣೆಗಳಾಗಿವೆ. ಪ್ರತಿ ವರ್ಷ ನಿಗದಿತ ದಿನಗಳಂದೇ ಮಳೆಗಾಲದಲ್ಲಿ ಈ ಕ್ರೀಡೆಗಳನ್ನು ಜನರು ಆಡುತ್ತಾರೆ. ಯಾವುದೇ ಬೇಧ ಇಲ್ಲದೇ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ, ಈ ಕ್ರೀಡೋತ್ಸವಗಳೂ ಬರುಬರುತ್ತಾ ಹಬ್ಬಗಳಂತೆ ತೋರುತ್ತಿವೆ.

ಕ್ರೀಡೆಗಳೆಲ್ಲವೂ ಜರುಗಿದ ಮೇಲೆ ಗೆದ್ದವರು, ಸೋತವರು, ವೀಕ್ಷಿಸಿದವರು ಎಲ್ಲರೂ ಸೇರಿ ಒಂದೆಡೆ ಕಲೆತು ವಿಶೇಷ ಭಕ್ಷ್ಯಭೋಜ್ಯಗಳನ್ನು ಸವಿಯುವುದು ವಾಡಿಕೆ. ಇದರ ಜತೆಗೆ, ಹಾಡುವುದು, ನೃತ್ಯ ಮೊದಲಾದ ಕಲಾಪ್ರದರ್ಶನಕ್ಕೂ ಈ ಕ್ರೀಡೋತ್ಸವಗಳು ವೇದಿಕೆಯಾಗುತ್ತವೆ. ಇವೆಲ್ಲವೂ ಕ್ರೀಡೆಗಳಿಗೆ ಹಬ್ಬದ ಮೆರುಗನ್ನು ತಂದಿವೆ.

ಕೈಲ್‌ ಮುಹೂರ್ತದ ನಂತರ ನಡೆಯುವ ಈ ಕ್ರೀಡಾ ಚಟುವಟಿಕೆಗಳೆಲ್ಲವೂ ಸಂಪೂರ್ಣ ದೇಸಿ ಕ್ರೀಡೆಗಳು ಎಂಬುದು ಮತ್ತೂ ವಿಶೇಷ ಸಂಗತಿ. ಆಧುನಿಕತೆಯ ಭರಾಟೆಯ ನಡುವೆಯೂ ಕೊಡಗಿನ ಜನರು ತಮ್ಮ ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿರುವ ದೇಸಿ ಕ್ರೀಡೆಗಳನ್ನು ಹಬ್ಬದಂತೆ ಆಚರಿಸುವ ಮೂಲಕ ಇತರ ಜಿಲ್ಲೆಯ ಜನರಿಗೆ ಮಾದರಿಯಾಗಿದ್ದಾರೆ.

ಸಾಂಪ್ರದಾಯಿಕ ಹಬ್ಬವಾದ ಕೈಲ್ ಮುಹೂರ್ತ ಹಬ್ಬದಲ್ಲಿ ಗುರಿ ಪರೀಕ್ಷಿಸುವ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜನಪ್ರಿಯ ಎನಿಸಿದೆ. ಮಕ್ಕಳಿಗೆ, ಮಹಿಳೆಯರಿಗೂ ವೈವಿಧ್ಯಮಯ ಸ್ಪರ್ಧೆಗಳಿರುತ್ತವೆ.

ಓಟದ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ನಿಂಬೆ-ಚಮಚ ಓಟ, ಹಗ್ಗ ಜಗ್ಗಾಟ, ಭಾರದ ಕಲ್ಲುಎಸೆತ, ಗೋಣಿ ಚೀಲ ಓಟ... ಒಂದೇ..ಎರಡೇ..ಎಲ್ಲವೂ ದೇಸಿ ಕ್ರೀಡೆಗಳು. ಈ ಗ್ರಾಮೀಣ ಕ್ರೀಡೆಗಳು ಕೈಲ್ ಮುಹೂರ್ತದ ನಂತರ ಗರಿಗೆದರುತ್ತವೆ.

ಮೊದಲೆಲ್ಲಾ ಭತ್ತದ ಗದ್ದೆಯಲ್ಲಿ ನಾಟಿ ಆದ ಬಳಿಕ ಪ್ರತಿ ಗ್ರಾಮದಲ್ಲಿ ನಾಟಿ ಓಟ ನಡೆಯುತ್ತಿತ್ತು. ‘ನಾಟಿ ಓಟ’ದಲ್ಲಿ ವಿಜೇತರಾದವರಿಗೆ ಸಾಂಪ್ರದಾಯಿಕವಾಗಿ ಬಾಳೆಗೊನೆ, ತೆಂಗಿನಕಾಯಿ ಹಾಗೂ ವೀಳ್ಯದೆಲೆಯನ್ನು ನೀಡಿ ಗೌರವಿಸಲಾಗುತ್ತಿತ್ತು. ಈ ದಿನಗಳಲ್ಲಿ ‘ನಾಟಿ ಓಟ’ ವಿಶೇಷ ಸ್ವರೂಪವನ್ನು ಪಡೆದುಕೊಂಡಿದೆ.

ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟದ ಸ್ಪರ್ಧೆಗಳು ಜರುಗುತ್ತವೆ. ಇದು ಸಾಮರ್ಥ್ಯ ಪ್ರದರ್ಶನದ ಸ್ಪರ್ಧೆ. ಎರಡು ತಂಡಗಳ ನಡುವಿನ ಬಲಾಬಲ ಪ್ರದರ್ಶನದ ಸ್ಪರ್ಧೆ. ‘ಲೇ..ಲೇ..ಲೈಸಾ...’ ಎಂಬ ಉದ್ಘೋಷಗಳ ನಡುವೆ ನಡೆಯುವ ಈ ಸ್ಪರ್ಧೆ ದೇಸೀಕ್ರೀಡೆಗಳ ಮಹತ್ವವನ್ನು ಸಾರುತ್ತವೆ. ಕೆಲವೆಡೆ ಸರ್ಕಾರಿ ನೌಕರರು ಮತ್ತು ಕೃಷಿಕರು ಇಲ್ಲವೇ ಭತ್ತದ ಕೃಷಿ ಮಾಡುವವರು ಮತ್ತು ಭತ್ತದ ಕೃಷಿ ಮಾಡದವರು..ಹೀಗೆ ಎರಡು ತಂಡಗಳನ್ನಾಗಿ ಮಾಡಿ ಶಕ್ತಿ ಪ್ರದರ್ಶನದ ಹಗ್ಗಜಗ್ಗಾಟ ನಡೆಸಿ ಸಂಭ್ರಮಿಸುವುದೂ ಇದೆ. ಇದರಲ್ಲಿ ಮಹಿಳೆಯರೂ ಪುರುಷರರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವಂತೆ ಹುರುಪಿನಿಂದ ಪಾಲ್ಗೊಳ್ಳುತ್ತಾರೆ.

ಗೋಣಿಚೀಲ ಓಟ, ನಿಂಬೆ-ಚಮಚ ಓಟ, ಕಾಲು ಕಟ್ಟಿ ಓಟ ಮುಂತಾದ ಓಟದ ಸ್ಪರ್ಧೆಗಳಲ್ಲಿಯೂ ಮಕ್ಕಳು, ಯುವತಿಯರು ಖುಷಿಯಿಂದ ಪಾಲ್ಗೊಂಡರೆ ಮಡಿಕೆ ಒಡೆಯುವುದು, ಭಾರದ ಕಲ್ಲು ಎಸೆಯುವುದು ಮತ್ತಿತರ ಕ್ರೀಡೆಗಳೂ ಕೈಲ್ ಮುಹೂರ್ತ ಹಬ್ಬಕ್ಕೆ ರಂಗು ನೀಡುತ್ತವೆ.

ಕ್ರೀಡಾ ಪ್ರತಿಭೆಗಳಿಗೆ ಮಳೆಗಾಲದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕೆಸರುಗದ್ದೆ ವೇದಿಕೆ ಆಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ಕೆಸರುಗದ್ದೆ ಕ್ರೀಡಾಕೂಟಗಳನ್ನು ಆಯೋಜಿಸಿ, ಮಳೆಗಾಲದಲ್ಲಿಯೂ ಕೂಡ ಕ್ರೀಡಾಪಟುಗಳಿಗೆ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತವೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆ, ಹೊರಜಿಲ್ಲೆಗಳ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸುತ್ತಾರೆ. ಕೆಸರಿನಲ್ಲಿ ಓಡಿ, ಬಿದ್ದು, ಎದ್ದು ವೀಕ್ಷಕರಿಗೆ ಒಂದಷ್ಟು ಮನರಂಜನೆ ನೀಡುತ್ತಾರೆ.

ನಿಂಬೆ ಚಮಚ ಓಟ (ಸಂಗ್ರಹ ಚಿತ್ರಗಳು)
ನಿಂಬೆ ಚಮಚ ಓಟ (ಸಂಗ್ರಹ ಚಿತ್ರಗಳು)
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಯುವಕನೊಬ್ಬ ಬಂದೂಕಿನಿಂದ ಗುರಿಯಿಡುತ್ತಿರುವುದು (ಸಂಗ್ರಹ ಚಿತ್ರಗಳು)
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಯುವಕನೊಬ್ಬ ಬಂದೂಕಿನಿಂದ ಗುರಿಯಿಡುತ್ತಿರುವುದು (ಸಂಗ್ರಹ ಚಿತ್ರಗಳು)
ಮಹಿಳೆಯರು ತೆಂಗಿನಕಾಯಿಗಳಿಗೆ ಗುಂಡು ಹೊಡೆದ ದೃಶ್ಯ (ಸಂಗ್ರಹ ಚಿತ್ರಗಳು)
ಮಹಿಳೆಯರು ತೆಂಗಿನಕಾಯಿಗಳಿಗೆ ಗುಂಡು ಹೊಡೆದ ದೃಶ್ಯ (ಸಂಗ್ರಹ ಚಿತ್ರಗಳು)
ತೆಂಗಿನ ಕಾಯಿಗೆ ಗುಂಡು...
ಮರವೊಂದಲ್ಲಿ ತೆಂಗಿನಕಾಯಿಯನ್ನು ಕಟ್ಟಿ ದೂರದಿಂದ ಅದಕ್ಕೆ ಗುರಿಯಿಟ್ಟು ಗುಂಡು ಹೊಡೆಯುವ ಸ್ಪರ್ಧೆ ಆಕರ್ಷಣೀಯ. ಈ ಸ್ಪರ್ಧೆ ತಾಸುಗಟ್ಟಲೆ ನಡೆದು ಬಳಿಕ ತೆಂಗಿನಕಾಯಿಗೆ ಗುರಿ ಇಟ್ಟು ಗುಂಡು ಹೊಡೆದು ಭಾಗಮಾಡಿದವರಿಗೆ ಬಹುಮಾನ ನಿಡಿ ಗೌರವಿಸಲಾಗುತ್ತದೆ. ಈ ಸ್ಪರ್ಧೆಯು ಇತ್ತೀಚೆಗೆ ಜನಪ್ರಿಯಗೊಂಡಿದ್ದು ಕೈಲ್ ಮುಹೂರ್ತ ಸಮಯದಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯನ್ನಾಗಿ ಆಯೋಜಿಸಲಾಗುತ್ತಿದೆ. 0.22 ಮತ್ತು 12 ಬೋರ್ ಸ್ಪರ್ಧೆಗಳು ಜನಪ್ರಿಯ. ವಿವಿಧ ಯುವಕ ಸಂಘಗಳು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT