ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣ ಮರೀಚಿಕೆ: ಕುಸಿಯುವ ಭೀತಿ!

‌ಹತ್ತಿರವೇ ಇದೆ ಮತ್ತೊಂದು ಮಳೆಗಾಲ, ಆದರೂ, ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ
Last Updated 24 ಏಪ್ರಿಲ್ 2019, 11:39 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂಭವಿಸಿದ್ದ ‘ಪ್ರಾಕೃತಿಕ ವಿಕೋಪ’ದ ಬಿಸಿ ನಗರದ ಹಳೇ ಖಾಸಗಿ ಬಸ್‌ ನಿಲ್ದಾಣಕ್ಕೂ ತಟ್ಟಿತ್ತು. ಗುಡ್ಡ ಕುಸಿದು ಬಿದ್ದಿದ್ದ ಮಣ್ಣು ತೆರವು ಮಾಡಿ ಐದು ತಿಂಗಳು ಕಳೆದರೂ ಆ ಸ್ಥಳದಲ್ಲಿ ತಡೆಗೋಡೆಯೂ ಮೇಲೆದ್ದಿಲ್ಲ; ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಕೆಲಸವೂ ಪ್ರಗತಿಕಂಡಿಲ್ಲ!

ಮತ್ತೊಂದು ಮಳೆಗಾಲ ಸಮೀಪಿಸುತ್ತಿದ್ದು ಅಪಾಯ ಆಹ್ವಾನಿಸುತ್ತಿದೆ. ಅದೇ ಮಾರ್ಗದಲ್ಲಿ ಅಧಿಕಾರಿಗಳೂ ಪ್ರತಿನಿತ್ಯ ಸಂಚರಿಸುತ್ತಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಳೆದ ಆಗಸ್ಟ್ 15ರಂದು ನೋಡನೋಡುತ್ತಲೇ ಬಸ್‌ ನಿಲ್ದಾಣದ ಕಟ್ಟಡ ಹಾಗೂ ಮಳಿಗೆಗಳ ಮೇಲೆ ಗುಡ್ಡದ ಮಣ್ಣು ಕುಸಿದು ಆತಂಕ ಸೃಷ್ಟಿಸಿತ್ತು. ರಾತ್ರಿ ಗುಡ್ಡ ಕುಸಿದಿದ್ದರ ಪರಿಣಾಮವಾಗಿ ಈ ಸ್ಥಳದಲ್ಲಿ ಪ್ರಾಣಹಾನಿ ಸಂಭವಿಸಿರಲಿಲ್ಲ. ಆದರೆ, ಈ ಕಟ್ಟಡದಲ್ಲಿ ಬದುಕು ಕಟ್ಟಿಕೊಂಡಿದ್ದ ಹತ್ತಾರು ವ್ಯಾಪಾರಸ್ಥ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಅವರಿಗೆ ಇನ್ನೂ ಹೊಸ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಪರದಾಟ ಮುಂದುವರಿದಿದೆ.

ಈ ಸ್ಥಳದಲ್ಲಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿಸುವ ಆಲೋಚನೆಯಲ್ಲಿದ್ದ ನಗರಸಭೆ ಆಡಳಿತವೂ ಎರಡು ತಿಂಗಳ ಹಿಂದೆಯೇ ಮುಕ್ತಾಯವಾಗಿದೆ. ಹೊಸ ಕನಸೊಂದು ಇನ್ನೂ ಸಾಕಾರಗೊಂಡಿಲ್ಲ. ಈಗ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರೇ ನಗರಸಭೆ ಆಡಳಿತಾಧಿಕಾರಿ. ಅವರೂ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಇಬ್ಬರ ಹಗ್ಗಜಗ್ಗಾಟ:ನಗರಸಭೆ ಆಡಳಿತಾವಧಿಯಲ್ಲಿ ಅಂದಿನ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ನೇತೃತ್ವದಲ್ಲಿ ಎರಡು ಸಭೆಗಳು ನಡೆದಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರೂ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ನಗರಸಭೆ ಕಾಂಗ್ರೆಸ್‌ ಸದಸ್ಯರು ಉತ್ಸುಕರಾಗಿದ್ದರು. ಆದರೆ, ಬಿಜೆಪಿ ಸದಸ್ಯರಿಗೆ ಈ ಯೋಜನೆ ಇಷ್ಟವಿರಲಿಲ್ಲ. ಈ ಹಗ್ಗಜಗ್ಗಾಟದಲ್ಲಿ ಯೋಜನೆ ರೂಪಿಸುವ ಸಭೆಗಳು ಮುಂದೂಡತಲೇ ಬಂದವು ಹೀಗಾಗಿ, ಅದರ ರೂಪುರೇಷೆಯೇ ಸಿದ್ಧಗೊಂಡಿಲ್ಲ.

ಕುಸಿಯುವ ಭೀತಿ: ಕೊಡಗಿನಲ್ಲಿ ಜೂನ್‌ನಲ್ಲಿ ಮುಂಗಾರು ಮಳೆ ಆರಂಭಗೊಂಡರೆ ಮತ್ತೆ ಮಳೆ ಬಿಡುವುದು ನೀಡುವುದು ಸೆಪ್ಟೆಂಬರ್‌ ಮಧ್ಯದಲ್ಲಿ. ನಾಲ್ಕು ತಿಂಗಳು ಸುರಿಯುವ ಮಳೆಗೆ ಹಳೇ ಖಾಸಗಿ ನಿಲ್ದಾಣದ ಸ್ಥಳದಲ್ಲಿ ಮತ್ಯಾವ ಅನಾಹುತ ಸಂಭವಿಸುತ್ತದೆಯೋ ಎನ್ನುವ ಆತಂಕ ಕಾಡುತ್ತಿದೆ.

ಮಣ್ಣು ಪರೀಕ್ಷೆ ನಡೆದಿತ್ತು!: ಆರಂಭದಲ್ಲಿ ನಗರಸಭೆ ಆಡಳಿತ ಪಕ್ಷದ ಸದಸ್ಯರು ಉತ್ಸಾಹ ತೋರಿ ಮಣ್ಣು ಪರೀಕ್ಷೆ ನಡೆಸಿದ್ದರು. ಅದಕ್ಕೆ ‘ಮಡಿಕೇರಿ ಸ್ಕ್ವೇರ್‌’ ಎಂದೂ ನಾಮಕರಣ ಮಾಡಿದ್ದರು.ಮಣ್ಣುಕುಸಿದ ಜಾಗದ ಮೇಲ್ಭಾಗದಿಂದ ಎರಡು ಸ್ಥಳ ಗುರುತಿಸಿ ಸುಮಾರು ನೂರು ಅಡಿ ಆಳದಲ್ಲಿ ಮಣ್ಣುಕೊರೆದು ಪರೀಕ್ಷೆಗೆ ಮಾಡಲಾಗಿತ್ತು. ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿಗೆ ಅದರ ಹೊಣೆಯನ್ನೂ ವಹಿಸಲಾಗಿತ್ತು. ಡಾ.ನಾಗರಾಜ್ ಎಂಬುವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆ ವರದಿ ಸ್ಥಿತಿ ಏನಾಯಿತೋ ಎಂಬ ಪ್ರಶ್ನೆ ಎದುರಾಗಿದೆ.

‘ನಗರದ ಹಳೇ ಖಾಸಗಿ ಬಸ್‌ನಿಲ್ದಾಣ ಸ್ಥಳ ಕಂಡರೆ ಈಗಲೂ ಭಯವಾಗುತ್ತೆ. ಈ ಸ್ಥಳವು ನಗರ ಹೃದಯ ಭಾಗದಲ್ಲೇ ಭೀಕರ ಪ್ರಾಕೃತಿಕ ವಿಕೋಪದ ಸಾಕ್ಷಿಯಾಗಿ ಉಳಿದಿದೆ’ ಎಂದು ನಗರದ ನಿವಾಸಿ ಸಂಜಯ್‌ ನೋವು ತೋಡಿಕೊಳ್ಳುತ್ತಾರೆ.

ಮಂಗಳೂರು ರಸ್ತೆಯೂ, ಜಿಲ್ಲಾಡಳಿತದ ಕಚೇರಿಯೂ...
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು, ತಿಂಗಳ ಹಿಂದೆಯೇ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಹಳೇ ಖಾಸಗಿ ಬಸ್‌ನಿಲ್ದಾಣ ಹಾಗೂ ಮಂಗಳೂರು ರಸ್ತೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಹೊಂದಿ ಕೊಂಡಂತಿರುವ ಸ್ಥಳದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸೂಚಿಸಿದ್ದರು. ಜಿಲ್ಲಾಡಳಿತ ಭವನಕ್ಕೇ ಆಪತ್ತಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ.

ಪ್ರಾಕೃತಿಕ ವಿಕೋಪದ ವೇಳೆ ಮಂಗಳೂರು ರಸ್ತೆಯಲ್ಲೂ ಭಾರೀ ಭೂಕುಸಿತ ಉಂಟಾಗಿತ್ತು. ಜಿಲ್ಲಾಡಳಿತ ಕಟ್ಟಡ ಬಳಿಯೇ ಗುಡ್ಡ ಕುಸಿದಿತ್ತು. ಮಡಿಕೇರಿಯಿಂದ ಸಂಪಾಜೆ ತನಕವಿರುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಶಾಶ್ವತ ಕಾಮಗಾರಿಗಳೂ ಆರಂಭಗೊಂಡಿಲ್ಲ. ಅಲ್ಲಲ್ಲಿ ತಾತ್ಕಾಲಿಕವಾಗಿ ಜೋಡಿಸಿಟ್ಟ ಮರಳಿನ ಚೀಲಗಳು ಕುಸಿಯುವ ಹಂತದಲ್ಲಿವೆ.

**

ಕೊಡಗಿಗೆ ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ನೆರವು ಬಂದಿದೆ. ಈ ನೆರವು ಬಳಸಿಕೊಂಡು ಆಕರ್ಷಣೀಯ ಕೇಂದ್ರವಾಗಿ ರೂಪಿಸಬಹುದಿತ್ತು.
-ಸಂಜಯ್‌, ಮಡಿಕೇರಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT